ಪ್ರವಾಸಿಗನ ರಕ್ಷಿಸಿದ ಜೀವರಕ್ಷಕ ಸಿಬ್ಬಂದಿ

| Published : Dec 30 2024, 01:01 AM IST

ಸಾರಾಂಶ

ಸಮುದ್ರದ ಸುಳಿಗೆ ಸಿಲುಕಿ ಜೀವಾಪಾಯದಲ್ಲಿದ್ದ ಪ್ರವಾಸಿಗನನ್ನು ಜೀವ ರಕ್ಷಕ ಸಿಬ್ಬಂದಿ ರಕ್ಷಿಸಿದ ಘಟನೆ ಭಾನುವಾರ ಮಧ್ಯಾಹ್ನ ಕುಡ್ಲೆ ಕಡಲತೀರದಲ್ಲಿ ನಡೆದಿದೆ.

ಗೋಕರ್ಣ: ಸಮುದ್ರದ ಸುಳಿಗೆ ಸಿಲುಕಿ ಜೀವಾಪಾಯದಲ್ಲಿದ್ದ ಪ್ರವಾಸಿಗನನ್ನು ಜೀವ ರಕ್ಷಕ ಸಿಬ್ಬಂದಿ ರಕ್ಷಿಸಿದ ಘಟನೆ ಭಾನುವಾರ ಮಧ್ಯಾಹ್ನ ಕುಡ್ಲೆ ಕಡಲತೀರದಲ್ಲಿ ನಡೆದಿದೆ.

ಮುಂಬೈ ಮೂಲದ ನಿತೀಶಕುಮಾರ (೨೩) ಜೀವಾಪಾಯದಿಂದ ಪಾರಾದ ಪ್ರವಾಸಿಗ.

ಒಟ್ಟು ನಾಲ್ವರು ಇಲ್ಲಿಗೆ ಪ್ರವಾಸಕ್ಕೆ ಬಂದಿದ್ದರು. ಈಜಾಡಲು ತೆರಳಿದಾಗ ಈ ಅವಘಡ ನಡೆದಿದೆ. ಅಲೆಯ ಅಬ್ಬರಕ್ಕೆ ಕೊಚ್ಚಿ ಹೋಗುತ್ತಿದ್ದ ಪ್ರವಾಸಿಗನನ್ನು ಗಮನಿಸಿದ ಕರ್ತವ್ಯದಲ್ಲಿದ್ದ ಜೀವರಕ್ಷಕ ಸಿಬ್ಬಂದಿ ನಾಗೇಂದ್ರ ಕುರ್ಲೆ, ಮುಂಜುನಾಥ ಹರಿಕಂತ್ರ, ಪ್ರದೀಪ ಅಂಬಿಗ ಅವರು ತಕ್ಷಣ ರಕ್ಷಣೆ ಧಾವಿಸಿದ್ದು, ಅವರಿಗೆ ಮೈಸ್ಟಿಕ್ ಅಡ್ವೆಂಚರ್ಸ್‌ನವರು ಜತೆಯಾಗಿ ರಕ್ಷಿಸಿದ್ದಾರೆ. ಪ್ರವಾಸಿ ಮಿತ್ರ ಶೇಖರ ಹರಿಕಂತ್ರ ರಕ್ಷಣಾ ಕಾರ್ಯಕ್ಕೆ ಸಹಕರಿಸಿದ್ದಾರೆ. ತಮ್ಮ ಜೀವದ ಹಂಗು ತೊರೆದು ಜೀವರಕ್ಷಿಸಿದ ಜೀವರಕ್ಷಕ ಸಿಬ್ಬಂದಿ ಹಾಗೂ ತಂಡಕ್ಕೆ ಸಾರ್ವಜನಿಕರು ಅಭಿನಂದಿಸಿ ಕೃತಜ್ಞತೆ ಸಲ್ಲಿಸಿದ್ದಾರೆ.ಯುವತಿಗೆ ಅಶ್ಲೀಲ ಸಂದೇಶ ರವಾನೆ-ಯುವಕರಿಂದ ಧರ್ಮದೇಟು

ಹೊನ್ನಾವರ: ಯುವತಿಗೆ ಅಶ್ಲೀಲ ಸಂದೇಶ ರವಾನಿಸುತ್ತಿದ್ದ ಗ್ರಾಪಂ ಸದಸ್ಯನಿಗೆ ಯುವಕರು ಧರ್ಮದೇಟು ನೀಡಿದ ಘಟನೆ ನಡೆದಿದೆ. ಈ ಹಿಂದೆ ಹಲವು ಬಾರಿ ತಿಳಿ ಹೇಳಿದರೂ ಈ ಗ್ರಾಪಂ ಸದಸ್ಯ ಎಚ್ಚೆತ್ತುಕೊಂಡಿಲ್ಲ ಎನ್ನಲಾಗಿದೆ. ಯುವತಿಯ ಮೊಬೈಲ್ ನಂಬರ್ ಪಡೆದುಕೊಂಡು ಅಶ್ಲೀಲ ಸಂದೇಶ ರವಾನಿಸುವ ಕೆಟ್ಟ ಚಾಳಿ ರೂಢಿಸಿಕೊಂಡಿದ್ದ. ಈ ಬಗ್ಗೆ ಗ್ರಾಪಂ ಸದಸ್ಯನಿಗೆ ಎಚ್ಚರಿಸಿದಾಗ ಕುಮಟಾ ಭಾಗದ ರಾಜಕೀಯ ಮುಖಂಡರೊರ್ವರ ಆತ್ಮೀಯರಾಗಿರುವುದರಿಂದ ಅವರ ಗಮನಕ್ಕೆ ತಂದು, ಬುದ್ಧಿ ಹೇಳಿದ್ದರೆನ್ನಲಾಗಿದೆ. ಆದರೂ ಈತ ಅಶ್ಲೀಲ ಸಂದೇಶ ಕಳುಹಿಸುವುದನ್ನು ನಿಲ್ಲಿಸದೇ ಇರುವುದರಿಂದ ಯುವಕರೇ ಮುಂದಾಗಿ ಧರ್ಮದೇಟು ನೀಡಿದ್ದಾರೆ.ಕೊಲೆ ಆರೋಪಿಗಳ ಬಂಧನಕ್ಕೆ ಆಗ್ರಹ

ಸಿದ್ದಾಪುರ: ಇತ್ತೀಚೆಗೆ ನಡೆದ ಪಟ್ಟಣದ ಬಸವನಗಲ್ಲಿಯ ನಿವಾಸಿ ಗೀತಾ ಪ್ರಭಾಕರ ಹುಂಡೇಕರ ಅವರ ಕೊಲೆಯನ್ನು ಖಂಡಿಸುವುದರೊಂದಿಗೆ ಆರೋಪಿಗಳ ಶೀಘ್ರ ಬಂಧನಕ್ಕೆ ಒತ್ತಾಯಿಸಿ ಶ್ರೀ ವಿನಾಯಕ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಹಾಗೂ ಪಿಗ್ಮಿ ಸಂಗ್ರಾಹಕರು ಸಿದ್ದಾಪುರ ಆರಕ್ಷಕ ನಿರೀಕ್ಷಕರಿಗೆ ಆಗ್ರಹ ಪೂರ್ವಕ ಮನವಿ ಸಲ್ಲಿಸಿದರು. ಸಂಘದ ಪಿಗ್ಮಿ ಸಂಗ್ರಾಹಕರಾದ ಗೀತಾ ಪಿ. ಹುಂಡೇಕರ್ ಅವರ ಅಮಾನುಷ ಕೊಲೆಯಿಂದಾಗಿ ಸಿದ್ದಾಪುರದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದ್ದು, ತಕ್ಷಣ ದುಷ್ಕರ್ಮಿಗಳನ್ನು ಬಂಧಿಸದಿದ್ದಲ್ಲಿ, ತಾಲೂಕಿನಲ್ಲಿ ಮಹಿಳೆಯರು, ವೃದ್ಧರು ಒಂಟಿಯಾಗಿ ವಾಸಿಸಲು ಭಯಪಡುವ ವಾತಾವಣ ಸೃಷ್ಟಿಯಾಗಿದೆ. ಹಣಕಾಸು ಸಂಸ್ಥೆಗಳಲ್ಲಿ ಆತಂಕ ಉಂಟಾಗಿದೆ. ನಮ್ಮಲ್ಲಿ ಸಮರ್ಥ ಪೊಲೀಸ್ ಅಧಿಕಾರಿಗಳಿದ್ದು, ಇಲಾಖೆ ಕೂಡಲೇ ಈ ಪ್ರಕರಣ ಬೇಧಿಸಿ ಮೃತರ ಸಾವಿಗೆ ನ್ಯಾಯ ದೊರಕಿಸಿಕೊಡಬೇಕಿದೆ. ಈ ಮೂಲಕ ಸ್ಥಳೀಯರಿಗೆ ನೆಮ್ಮದಿ ದೊರಕಿಸಿಕೊಡಲು ಮನವಿಯಲ್ಲಿ ಕೋರಲಾಗಿದೆ ಎಂದು ಸಹಕಾರಿಯ ಅಧ್ಯಕ್ಷ ಆನಂದ ಈರಾ ನಾಯ್ಕ್ ತಿಳಿಸಿದರು. ವ್ಯವಸ್ಥಾಪಕ ನಿರ್ದೇಶಕ ವಿನಾಯಕ ನಾಯ್ಕ್, ಪ್ರಧಾನ ವ್ಯವಸ್ಥಾಪಕ ಶ್ರೀಧರ ಹೆಗಡೆ, ವಿಭಾಗೀಯ ವ್ಯವಸ್ಥಾಪಕ ಪ್ರಶಾಂತ ನಾಯ್ಕ್ ಹಾಗೂ ಸಿಬ್ಬಂದಿ ಮನವಿ ನೀಡಿದರು.