ನೂತನ ವರ್ಷಾಚರಣೆಗೆ ಜನರಿಂದ ತುಂಬಿದ ಪ್ರವಾಸಿ ತಾಣಗಳು

| Published : Jan 02 2025, 12:30 AM IST

ನೂತನ ವರ್ಷಾಚರಣೆಗೆ ಜನರಿಂದ ತುಂಬಿದ ಪ್ರವಾಸಿ ತಾಣಗಳು
Share this Article
  • FB
  • TW
  • Linkdin
  • Email

ಸಾರಾಂಶ

ನಂದಿಗಿರಿಧಾಮಕ್ಕೆ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಬಂದಿದ್ದರಿಂದ ಬೆಟ್ಟದ ಕೆಳಗಡೆ ಸುಮಾರು 6 ಕಿಮೀ ನಷ್ಟು ಸಂಚಾರ ದಟ್ಟಣೆ ಉಂಟಾಗಿತ್ತು. ನಂದಿ ಬೆಟ್ಟದ ಮೇಲಕ್ಕೆ ಹೋಗಲು ಕೆಳಗಡೆ ಬಾರಲೂ ಆಗದೆ ಕೆಲವು ಪ್ರವಾಸಿಗರು ಪರದಾಡಿದರು. ಸಂಚಾರ ದಟ್ಟಣೆ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಹೊಸ ವರ್ಷಾಚರಣೆ ಹಿನ್ನೆಲೆ ಜಿಲ್ಲೆಯ ಪ್ರಸಿದ್ಧ ತಾಣಗಳಿಗೆ ಲಕ್ಷಾಂತರ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿದ್ದಾರೆ.

ಜಿಲ್ಲೆಯ ವಿಶ್ವ ವಿಖ್ಯಾತ ನಂದಿಗಿರಿಧಾಮಕ್ಕೆ ಬುಧವಾರ 20 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರ ದಂಡು ಭೇಟಿ ನೀಡಿ ಗಿರಿಧಾಮದ ಪ್ರಾಕೃತಿಕ ಸೌಂದರ್ಯವನ್ನು ಸವಿದಿದ್ದು, ಸೆಲ್ಫಿ ಸ್ಪಾಟ್‌ ಅವಲಬೆಟ್ಟ, ಶ್ರೀನಿವಾಸ ಸಾಗರ, ನಂದಿ ದೇಗುಲ. ರಂಗಸ್ಥಳಕ್ಕೆ, ಈಶಾ ಕೇಂದ್ರಕ್ಕೆ ಪ್ರವಾಸಿಗರ ಭೇಟಿ ಮುಂದುವರಿದಿದೆ.

ನಂದಿಗಿರಿಧಾಮ ವೀಕ್ಷಣೆಗೆ ಸಹಸ್ರಾರು ಮಂದಿ ಪ್ರವಾಸಿಗರು ವರ್ಷದ ಮೊದಲ ಸೂರ್ಯೋದಯವನ್ನು ಕಣ್ತುಂಬಿಕೊಳ್ಳಲು ಬುಧವಾರ ಮುಂಜಾನೆ ಮೂರು ಗಂಟೆಯಿಂದಲೇ ಆಗಮಿಸುತ್ತಿದ್ದು, ಬೆಟ್ಟದಲ್ಲಿ ಮೋಜು, ಮಸ್ತಿಯಲ್ಲಿ ತೊಡಗಿದ್ದ ದೃಶ್ಯಗಳು ಎಲ್ಲೆಡೆ ಕಂಡು ಬಂದವು. ವಿಶೇಷವಾಗಿ ಬೆಂಗಳೂರು ಸುತ್ತಮುತ್ತಲಿನ ಜಿಲ್ಲೆಗಳ ಸಾರ್ವಜನಿಕರು, ಬೆಂಗಳೂರಿನ ಐಟಿ, ಬಿಟಿ ಉದ್ಯೋಗಿಗಳು, ಸರ್ಕಾರಿ ಅಧಿಕಾರಿಗಳು, ನೌಕರರು, ಖಾಸಗಿ ಉದ್ಯೋಗಿಗಳು, ಪರಿಸರ ಪ್ರಿಯರು ಗಿರಿಧಾಮಕ್ಕೆ ಆಗಮಿಸಿ ಸೂರ್ಯೋದಯ ಹಾಗೂ ಸೂರ್ಯಾಸ್ತದ ಕ್ಷಣಗಳನ್ನು ಬೆಳ್ಳಿ ಮೋಡಗಳ ಕಲರವದ ಮಧ್ಯೆ ಕಣ್ಣು ತುಂಬಿಸಿಕೊಂಡರು.

ನಂದಿಗಿರಿಧಾಮಕ್ಕೆ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಬಂದಿದ್ದರಿಂದ ಬೆಟ್ಟದ ಕೆಳಗಡೆ ಸುಮಾರು 6 ಕಿಮೀ ನಷ್ಟು ಸಂಚಾರ ದಟ್ಟಣೆ ಉಂಟಾಗಿತ್ತು. ನಂದಿ ಬೆಟ್ಟದ ಮೇಲಕ್ಕೆ ಹೋಗಲು ಕೆಳಗಡೆ ಬಾರಲೂ ಆಗದೆ ಕೆಲವು ಪ್ರವಾಸಿಗರು ಪರದಾಡಿದರು. ಸಂಚಾರ ದಟ್ಟಣೆ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.

ಜಿಲ್ಲೆಯ ದಕ್ಷಿಣ ಕಾಶಿಯೆಂದೇ ಪ್ರಸಿದ್ಧಿ ಪಡೆದಿರುವ ಭೋಗನಂದೀಶ್ವರ ದೇವಾಲಯ, ರಂಗಸ್ಥಳದ ಶ್ರೀ ರಂಗನಾಥ ಸ್ವಾಮಿಯ ದೇವಾಲಯ, ಆವಲಗುರ್ಕಿಯ ಈಶಾ ಫೌಂಡೇಷನ್‌, ಗೌರಿಬಿದನೂರಿನ ವಿದುರಾಶ್ವತ್ಥ, ಚಿಂತಾಮಣಿಯ ಕೈಲಾಸಗಿರಿ, ಕೈವಾರ, ಮುರಗಮಲ್ಲ, ಬಾಗೇಪಲ್ಲಿ ಗಡಿದಂ ದೇವಾಲಯ ಹಾಗೂ ಸೆಲ್ಫಿ ಸ್ಪಾಟ್‌ ಅವಲಬೆಟ್ಟಕ್ಕೆ ಪ್ರವಾಸಿಗರ ದಂಡು ಹರಿದು ಬರುತ್ತಿದೆ. ವಿಶೇಷವಾಗಿ ನಂದಿ ಬೆಟ್ಟ, ಆವಲಗುರ್ಕಿಯ ಈಶಾ ಫೌಂಡೇಷನ್ ಮತ್ತು ಅವಲಬೆಟ್ಟಕ್ಕೆ ಆಗಮಿಸುವ ಯುವಕ, ಯುವತಿಯರ ಸಂಖ್ಯೆ ಅಧಿಕವಾಗಿದೆ. ಗುಡಿಬಂಡೆಯ ಅಮಾನಿ ಬೈರಸಾಗರ ಕೆರೆ ವೀಕ್ಷಣೆಗೂ ಪ್ರವಾಸಿಗರು ಭೇಟಿ ನೀಡಿದರು.

ಹೋಟೆಲ್‌, ಬಾರ್‌, ರೆಸ್ಟೋರೆಂಟ್‌ಗಳು ಪುಲ್:

ನೂತನ ವರ್ಷಾಚರಣೆ ಭಾಗವಾಗಿ ಪ್ರವಾಸೋದ್ಯಮ ತಾಣಗಳಿಗೆ ಸಾವಿರಾರು ಸಂಖ್ಯೆಯಲ್ಲಿ ತಮ್ಮ ಕುಟುಂಬ ಸಮೇತರಾಗಿ ಪ್ರವಾಸಿಗರು ಆಗಮಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಹೆದ್ದಾರಿ ಅಕ್ಕಪಕ್ಕದ ಹೋಟೆಲ್‌ ಸೇರಿದಂತೆ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗಳು ಭರ್ತಿ ಆಗಿದ್ದವು. ಪ್ರವಾಸಿಗರ ದಟ್ಟಣೆಯಿಂದ ಹೋಟೆಲ್‌ಗ‌ಳು ಗಿಜುಗುಡುತ್ತಿದ್ದವು. ಡಾಬಾಗಳಲ್ಲಿ ಜನದಟ್ಟಣೆ ಕಂಡು ಬಂತು. ಪ್ರವಾಸಿಗರು ನಿರೀಕ್ಷೆಗೂ ಮೀರಿ ಆಗಮಿಸಿದ್ದರಿಂದ ಬೆಳಗ್ಗೆ ಹಾಗೂ ಸಂಜೆ ವೇಳೆ ವಾಹನಗಳ ದಟ್ಟಣೆಯಿಂದ ಕೆಲಕಾಲ ಟ್ರಾಫಿಕ್‌ ಕಿರಿಕಿರಿ ಅನುಭವಿಸಬೇಕಾಯಿತು.

ಈಶಾ ಕೇಂದ್ರಕ್ಕೆ ಪ್ರವಾಸಿಗರ ದಂಡು

ಸದ್ಗುರು ಜಗ್ಗಿ ವಾಸುದೇವ್‌ ಅವರು ಸ್ಥಾಪಿಸಿರುವ 112 ಅಡಿ ಎತ್ತರದ ಶಿವನ ವಿಗ್ರಹವಿರುವ ಆವಲಗುರ್ಕಿಯ ಈಶಾ ಫೌಂಡೇಷನ್ ಕೇಂದ್ರಕ್ಕೆ ಮಂಗಳವಾರದಿಂದಲೇ ಲಕ್ಷಾಂತರ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಈಶಾ ಕೇಂದ್ರಕ್ಕೂ ಬರೋಬ್ಬರಿ 1 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿದ್ದಾರೆ.