ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರಿಗೆ ಶುದ್ಧ ಕುಡಿಯುವ ನೀರಿಗೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಸಿ.ಕೆ. ನಾಗರಾಜ

ಹೊಸಪೇಟೆ: ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರಿಗೆ ಶುದ್ಧ ಕುಡಿಯುವ ನೀರಿಗೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ದೇಶ ವಿದೇಶ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ನಿತ್ಯವೂ ಆಗಮಿಸುತ್ತಿರುವುದರಿಂದ ಹಂಪಿಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಕಾಡುತ್ತಿದೆ.

ಶುದ್ಧ ನೀರಿಗೆ ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಪ್ರವಾಸಿಗರು ಕುಡಿಯುವ ನೀರಿಗೆ ತೊಂದರೆ ಅನುಭವಿಸುತ್ತಿದ್ದಾರೆ. ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯವರು ಹಂಪಿಯ ಪ್ರಮುಖ ಸ್ಮಾರಕಗಳ ಬಳಿ ಶುದ್ಧ ನೀರಿನ ಘಟಕಗಳು ಕೆಲ ದಿನಗಳು ಮಾತ್ರ ಕಾರ್ಯ ನಿರ್ವಹಿಸುತ್ತವೆ. ನಂತರದ ದಿನಗಳಲ್ಲಿ ಇವು ಕೆಟ್ಟು ನಿಲ್ಲುತ್ತವೆ. ಇದರಿಂದ ಪ್ರವಾಸಿಗರಿಗೆ ಸಮಸ್ಯೆಯಾಗಿದೆ.

ಹಂಪಿಯಲ್ಲಿ ಒಂದೇ ಪ್ರದೇಶದಲ್ಲಿ ಸ್ಮಾರಕಗಳು ಇಲ್ಲ. ಹತ್ತಾರು ಕಿ.ಮೀ. ನಡೆದು ಸ್ಮಾರಕಗಳನ್ನು ನೋಡಬೇಕಾಗಿದೆ. ಬಹುತೇಕ ಸ್ಮಾರಕಗಳು ಬೆಟ್ಟ ಗುಡ್ಡಗಳ ನಡುವೆ ಇವೆ. ಇನ್ನು ಕೆಲ ಸ್ಮಾರಕಗಳು ಇಳಿಜಾರಿನಲ್ಲಿವೆ. ಸ್ಮಾರಕಗಳನ್ನು ನೋಡಲು ಹಂಪಿಯಲ್ಲಿ ಏರಿ, ಇಳಿಯುವುದರಿಂದ ಪ್ರವಾಸಿಗರಿಗೆ ಆಯಾಸವಾಗುವುದು ಸಹಜ. ಕೆಲ ಪ್ರವಾಸಿಗರು ಅನಿವಾರ್ಯವಾಗಿ ಹಣ ಕೊಟ್ಟು ಅಂಗಡಿಗಳಲ್ಲಿ ಕುಡಿಯುವ ನೀರು ಖರೀದಿಸುವ ಪರಿಸ್ಥಿತಿ ಎದುರಾಗಿದೆ.

ಬಸ್‌, ಕಾರು, ಜೀಪು, ಆಟೋ ತೆಗೆದುಕೊಂಡು ಬಂದ ಪ್ರವಾಸಿಗರು ಹಾಗೂ ಶಾಲಾ ವಿದ್ಯಾರ್ಥಿಗಳು ಬುತ್ತಿ ಕಟ್ಟಿಕೊಂಡು ಹಂಪಿಗೆ ಬಂದರೆ ಊಟ ಮಾಡಲು ರಾಣಿ ಸ್ನಾನಗೃಹದ ಬಳಿ ಎಲ್ಲರಿಗೂ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ಇಲ್ಲಿರುವ ಶುದ್ಧ ನೀರಿನ ಘಟಕ ಮತ್ತು ನೀರಿನ ಮಿನಿ ಟ್ಯಾಂಕ್‌ಗೆ ಕಳೆದ 20 ದಿನಗಳಿಂದ ನೀರಿನ ಸರಬರಾಜು ಇಲ್ಲ.

ಸೌಲಭ್ಯ ಕಲ್ಪಿಸಿ:

ದೇಶ ವಿದೇಶಗಳಿಂದ ನಿತ್ಯ ಅನೇಕ ಪ್ರವಾಸಿಗರು, ಭಕ್ತರು ಹಂಪಿಗೆ ಬಂದು ಹೋಗುತ್ತಿದ್ದಾರೆ. ಕನಿಷ್ಠ ಶುದ್ಧ ನೀರಿನ ವ್ಯವಸ್ಥೆ ಕಲ್ಪಿಸದಿದ್ದರೆ ಹೇಗೆ? ವಿಶ್ವ ಪಾರಂಪರಿಕ ತಾಣಗಳಲ್ಲಿ ಹಂಪಿ ಸ್ಥಾನ ಪಡೆದುಕೊಂಡಿದೆ. ಪ್ರವಾಸಿಗರಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು ಎಂದು ಹೆಸರು ಬಹಿರಂಗ ಪಡಿಸಲು ಇಚ್ಚಿಸದ ಗೈಡ್‌ಗಳು ಬೇಸರ ವ್ಯಕ್ತಪಡಿಸಿದರು.

ಪರಿಹಾರಕ್ಕೆ ಒತ್ತಾಯ:

ಪುರಾತತ್ವ ಇಲಾಖೆಗೆ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಅನೇಕ ಸಲ ಹೇಳಿದರೂ ಸಮಸ್ಯೆ ಬಗೆಹರಿಸಿಲ್ಲ. ಅಧಿಕಾರಿಗಳು ನೀರಿನ ಸಮಸ್ಯೆಯನ್ನು ಗಂಭೀರವಾಗಿ ತೆಗೆದುಕೊಂಡು ಸಮಸ್ಯೆಯ ಪರಿಹಾರಕ್ಕೆ ಮುಂದಾಗಬೇಕು ಎಂದು ಪ್ರವಾಸಿಗರು ಒತ್ತಾಯಿಸಿದ್ದಾರೆ.

ಹಂಪಿಯಲ್ಲಿ ಪ್ರವಾಸಿಗರಿಗೆ ಅನುಕೂಲವಾಗುವ ಪ್ರದೇಶದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ತೆರೆಯಲಾಗಿದೆ. ಆದರೆ ಇದರಲ್ಲಿ ಕೆಲವು ಸ್ಥಗಿತಗೊಂಡಿವೆ. ಘಟಕಗಳನ್ನು ಕೂಡಲೇ ದುರಸ್ತಿಗೊಳಿಸಿ ಪ್ರವಾಸಿಗರಿಗೆ ಅನುಕೂಲವಾಗುವಂತೆ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎನ್ನುತ್ತಾರೆ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಪುರಾತತ್ವ ಅಧೀಕ್ಷಕ ಕೆ.ರಾಮಕೃಷ್ಣನ್‌ ರೆಡ್ಡಿ.