ಸಾರಾಂಶ
ಚಿಕ್ಕಬಳ್ಳಾಪುರ : ಭಾನುವಾರದ ವೀಕೆಂಡ್ ಹಿನ್ನಲೆ ಪ್ರವಾಸಿ ತಾಣ ನಂದಿಗಿರಿಧಾಮಕ್ಕೆ ಪ್ರವಾಸಿಗರ ದಂಡೇ ಹರಿದು ಬಂದಿತ್ತು. ಇದರಿಂದಾಗಿ ನಂದಿಬೆಟ್ಟ, ರಸ್ತೆ ಮತ್ತು ಪಾರ್ಕಿಂಗ್ ಲಾಟ್ ಫುಲ್ ಆಗಿ ಟ್ರಾಫಿಕ್ ಜಾಮ್ ಉಂಟಾಯಿತು.
ರಸ್ತೆಯಲ್ಲಿ ಎಲ್ಲಿ ನೋಡಿದರು ವಾಹನಗಳಿಂದ ತುಂಬಿ ತುಳಿಕಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಐದಾರು ಕಿ.ಮೀ. ದೂರದವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಸಂಚಾರದಟ್ಟಣೆ ನಿಯಂತ್ರಿಸಲು ನಂದಿಗಿರಿಧಾಮ ಪೊಲೀಸರರು ಹೈರಾಣರಾಗಿದ್ದಾರೆ.
ಪಾರ್ಕಿಂಗ್ ಲಾಟ್ ಫುಲ್
ನಂದಿ ಗಿರಿಧಾಮದ ಮೇಲೆ 300 ಕಾರ್‌ಗಳಿಗೆ ಮತ್ತು ಸುಮಾರು ಆರು ನೂರು ಬೈಕ್‌ಗಳಿಗೆ ಮಾತ್ರ ಪಾರ್ಕಿಂಗ್ ವ್ಯವಸ್ಥೆ ಇದೆ. ಪಾರ್ಕಿಂಗ್ ಲಾಟ್ ಸಹ ತುಂಬಿ ತುಳುಕುತ್ತಿದ್ದು ವಾಹನ ಸವಾರರ ಮತ್ತು ಪ್ರವಾಸಿಗರ ನಿಯಂತ್ರಿಸಲು ನಂದಿ ಗಿರಿಧಾಮದ ಸಿಬ್ಬಂದಿ ಹರಸಾಹಸ ಪಟ್ಟರು.
ಭಾನುವಾರವಾದ್ದರಿಂದ ನಮಗೂ ಕಚೇರಿಗಳಿಗೆ ರಜೆ ಇದ್ದು, ಮಕ್ಕಳಿಗೂ ರಜೆ ಇರುವ ಕಾರಣ ಪ್ರಕೃತಿಯ ಆಹ್ಲಾದವನ್ನು ಅನುಭವಿಸೋಣವೆಂದು ಬೆಳಗ್ಗೆ ನಾಲ್ಕುವರೆಗೆ ನಂದಿ ಗಿರಿಧಾಮಕ್ಕೆ ಕಾರಿನಲ್ಲಿ ಬಂದೆವು ಆದರೆ ಬೆಟ್ಟದ ಅರ್ಧದಾರಿಯಲ್ಲಿಯೇ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಕೊಂಡೆವು. ಸೂರ್ಯೋದಯವಾಗಿದೆ. ಇಬ್ಬನಿ ಬೀಳುವುದನ್ನು ಮಕ್ಕಳಿಗೆ ತೋರಿಸಬೇಕೆಂದುಕೊಂಡಿದ್ದೆವು. ಆಗಲಿಲ್ಲಾ. ನಡೆದು ಕೊಂಡೆ ಹೋಗೋಣಾ ಎಂದು ಎರಡು ಕಿಲೋ ಮೀಟರ್ ನಡೆದು ಬಂದವು ಎಂದು ಬೆಂಗಳೂರಿನ ಟೆಕ್ಕಿ ಜ್ಞಾನೇಶ್ ಹೇಳಿದರು.
ಪೊಲೀಸರ ವೈಫಲ್ಯಕ್ಕೆ ಆಕ್ರೋಶ
ನಂದಿಬೆಟ್ಟದಲ್ಲಿ ಸುಮಾರು 5 ಕಿ.ಮೀ.ವರೆಗೆ ಫುಲ್ ಟ್ರಾಫಿಕ್ಜಾಮ್ ಉಂಟಾಗಿತ್ತು. ಪ್ರವಾಸಿಗರು ಬೈಕ್, ಕಾರು ಹಾಗೂ ಗೂಡ್ಸ್ ಆಟೋಗಳಲ್ಲಿ ನಂದಿಬೆಟ್ಟಕ್ಕೆ ತೆರಳುತ್ತಿದ್ದು, ನಂದಿಗಿರಿಧಾಮ ಪೊಲೀಸರು, ಟ್ರಾಫಿಕ್ಜಾಮ್ ನಿಯಂತ್ರಿಸುವಲ್ಲಿ ವಿಫಲರಾಗಿದ್ದಾರೆಂದು ಪ್ರವಾಸಿಗರು ಆಕ್ರೋಶ ಹೊರಹಾಕಿದ್ದಾರೆ. ವಾಹನಗಳಿಂದಾಗಿ ರಸ್ತೆ ಸಂಪೂರ್ಣ ಬಂದ್ ಆಗಿತ್ತು. ಕೊನೆಗೆ ಮಿರ್ಜಾ ಸರ್ಕಲ್ನಿಂದ ಪರ್ಯಾಯವಾಗಿ ಆಟೋಗಳ ಸಂಚಾರಕ್ಕೆ ವ್ಯವಸ್ಥೆ ಮಾಡಲಾಯಿತು.ಎರಡನೇ ಶನಿವಾರ ಸರ್ಕಾರಿ ರಜೆ ಇದ್ದುದರಿಂದ ನಿನ್ನೆ ಸಹಾ ಪ್ರವಾಸಿಗರು ಹೆಚ್ಚಾಗಿದ್ದರು. ಇಂದು ಭಾನುವಾರ ಬೆಳಗ್ಗೆಯಿಂದಲೇ ಸಾವಿರಾರು ಮಂದಿ ಬೆಟ್ಟಕ್ಕೆ ಆಗಮಿಸಿದ್ದರು. ಪ್ರವಾಸಿಗರು ಕಾರು ಹಾಗೂ ಬೈಕ್‌ಗಳಲ್ಲಿ ನಂದಿಬೆಟ್ಟಕ್ಕೆ ಲಗ್ಗೆಯಿಟ್ಟಿದ್ದರು.
ಹಲವರು ವಾಪಸ್
ನೂರಕ್ಕೂ ಹೆಚ್ಚು ಕಾರುಗಳಲ್ಲಿ ಪ್ರವಾಸಿಗರು ಗಂಟೆಗಟ್ಟಲೇ ಕಾಯುವಂತಾಯಿತು. ಬೆಟ್ಟದ ಮೇಲಿಂದ ವಾಹನಗಳು ವಾಪಸ್ ಬಂದ ನಂತರ ವಾಹನಗಳ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿತ್ತು. ಹೀಗಾಗಿ ಕೆಲವರು ಕಾದು ಕಾದು ಸುಸ್ತಾಗಿ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ವಾಪಸ್ ಆದರು.