ತಾಲೂಕು ನಿಸರ್ಗದ ರಮಣೀಯ ತಾಣಗಳನ್ನು ಒಡಲಲ್ಲಿ ಬಚ್ಚಿಟ್ಟುಕೊಂಡಿದೆ. ಎಷ್ಟು ನೋಡಿದರೂ ಮತ್ತೆ ಮತ್ತೆ ನೋಡಿ ಆಸ್ವಾದಿಸುವ ಸ್ಥಳಗಳೇ ಎಲ್ಲವೂ ಆಗಿವೆ, ಅಂತವುಗಳಲ್ಲಿ ದೂಧ್ ಸಾಗರ್ ಕೂಡ ಒಂದು. ಮೈದುಂಬಿ ಹರಿಯುವ ದೂಧ್ ಸಾಗರಕ್ಕೆ ಈಗ ದಿನವೂ ಪ್ರವಾಸಿಗರ ದಂಡು ಆಗಮಿಸುತ್ತಿದೆ.
ಪ್ರಕೃತಿ ಸೌಂದರ್ಯದ ಅಪೂರ್ವ ಅನುಭವ । ಮಂಜಿನ ಮುಸುಕು, ಧುಮ್ಮಿಕ್ಕಿ ಹರಿಯುವ ಜಲಧಾರೆಗಳು
ಅನಂತ ದೇಸಾಯಿ
ಕನ್ನಡಪ್ರಭ ವಾರ್ತೆ ಜೋಯಿಡಾತಾಲೂಕು ನಿಸರ್ಗದ ರಮಣೀಯ ತಾಣಗಳನ್ನು ಒಡಲಲ್ಲಿ ಬಚ್ಚಿಟ್ಟುಕೊಂಡಿದೆ. ಎಷ್ಟು ನೋಡಿದರೂ ಮತ್ತೆ ಮತ್ತೆ ನೋಡಿ ಆಸ್ವಾದಿಸುವ ಸ್ಥಳಗಳೇ ಎಲ್ಲವೂ ಆಗಿವೆ, ಅಂತವುಗಳಲ್ಲಿ ದೂಧ್ ಸಾಗರ್ ಕೂಡ ಒಂದು. ಮೈದುಂಬಿ ಹರಿಯುವ ದೂಧ್ ಸಾಗರಕ್ಕೆ ಈಗ ದಿನವೂ ಪ್ರವಾಸಿಗರ ದಂಡು ಆಗಮಿಸುತ್ತಿದೆ.
ಮಳೆಗಾಲ ಆರಂಭವಾಗುತ್ತಿದ್ದಂತೆ ಪಶ್ಚಿಮ ಘಟ್ಟಗಳ ಸೌಂದರ್ಯ ಮತ್ತಷ್ಟು ಇಮ್ಮಡಿಗೊಳ್ಳುತ್ತದೆ. ಹಸಿರಿನಿಂದ ಕಂಗೊಳಿಸುವ ಬೆಟ್ಟ-ಗುಡ್ಡಗಳು, ಮಂಜಿನ ಮುಸುಕು, ಧುಮ್ಮಿಕ್ಕಿ ಹರಿಯುವ ಜಲಧಾರೆಗಳು ಹಾಗೂ ದಟ್ಟ ಕಾಡಿನ ನಡುವೆ ಸಾಗುವ ರೈಲು ಪ್ರಯಾಣ ಪ್ರವಾಸಿಗರಿಗೆ ವಿಶಿಷ್ಟ ಅನುಭವ ನೀಡುತ್ತದೆ. ತಾಲೂಕಿನ ಕ್ಯಾಸಲ್ ರಾಕ್ ರೈಲು ನಿಲ್ದಾಣದಿಂದ ಗೋವಾದತ್ತ ಸಾಗುವ ರೈಲು ಪಯಣ ಇಂತಹ ಪ್ರಕೃತಿ ಸೌಂದರ್ಯದ ಅಪೂರ್ವ ಅನುಭವ ನೀಡುತ್ತದೆ.ಕ್ಯಾಸಲ್ ರಾಕ್‌ನಿಂದ ರೈಲು ಹೊರಟ ಬಳಿಕ ಪಶ್ಚಿಮ ಘಟ್ಟಗಳ ದಟ್ಟ ಕಾಡು ಮತ್ತು ಬೆಟ್ಟ-ಕಣಿವೆಗಳ ನಡುವೆ ರೈಲು ಹಳಿಗಳು ಸಾಗುತ್ತವೆ. ಮಳೆಗಾಲದಲ್ಲಿ ಸುತ್ತಲಿನ ಪ್ರದೇಶ ಹಸಿರು ಹೊದಿಕೆಯಿಂದ ಕಂಗೊಳಿಸುತ್ತಿದ್ದು, ಕಿಟಕಿಯಿಂದ ಕಾಣುವ ಪ್ರಕೃತಿ ದೃಶ್ಯಗಳು ಪ್ರಯಾಣಿಕರನ್ನು ಮಂತ್ರಮುಗ್ಧಗೊಳಿಸುತ್ತವೆ.
ಇಲ್ಲಿ ಕಾಡಿನ ನಡುವೆ ಇರುವ ದೂಧ್‌ಸಾಗರ್ ಜಲಪಾತವೇ ಪ್ರಮುಖ ಆಕರ್ಷಣೆಯಾಗಿದೆ. ಈ ರೈಲು ಪ್ರಯಾಣದ ಪ್ರಮುಖ ಆಕರ್ಷಣೆ ದೂಧ್ ಸಾಗರ್ ಜಲಪಾತ. ಮಳೆಗಾಲದಲ್ಲಿ ಜಲಪಾತದ ನೀರಿನ ಹರಿವು ಹೆಚ್ಚಾಗುವುದರಿಂದ ಅದರ ವೈಭವ ಮತ್ತಷ್ಟು ಹೆಚ್ಚುತ್ತದೆ. ಬೆಟ್ಟದ ಮೇಲಿನಿಂದ ಬಿಳಿ ನೊರೆಯಂತೆ ಧುಮ್ಮಿಕ್ಕಿ ಬೀಳುವ ನೀರು ಹಾಲಿನ ಹೊಳೆಯಂತೆ ಕಾಣುವುದರಿಂದ ದೂಧ್ ಸಾಗರ್ ಎಂಬ ಹೆಸರು ಅನ್ವರ್ಥಕವೆನಿಸುತ್ತದೆ.ರೈಲು ಜಲಪಾತದ ಸಮೀಪ ಸಾಗುವ ಸಂದರ್ಭದಲ್ಲಿ ಪ್ರಯಾಣಿಕರು ಕಿಟಕಿಗಳಿಂದ ಹೊರಗೆ ನೋಡುತ್ತಾ ಪ್ರಕೃತಿಯ ಈ ಅದ್ಭುತ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಾರೆ. ಬಿಳಿ ಜಲಧಾರೆ, ಕಪ್ಪು ಬಂಡೆಗಳು, ಸುತ್ತಲಿನ ಹಚ್ಚಹಸಿರು ಕಾಡು ಮತ್ತು ಮಂಜಿನ ವಾತಾವರಣ... ಹೀಗೆ ಎಲ್ಲ ಸೇರಿ ಅಪೂರ್ವ ದೃಶ್ಯವನ್ನು ಸೃಷ್ಟಿಸುತ್ತವೆ.
ಮಳೆ, ಮಂಜು ಮತ್ತು ಹಸಿರಿನ ನಡುವೆ ಪಯಣ:ಕ್ಯಾಸಲ್ ರಾಕ್‌ನಿಂದ ಗೋವಾ ಕಡೆಗೆ ಸಾಗುವ ಮಾರ್ಗದಲ್ಲಿ ಹಲವು ಸುರಂಗ, ಸೇತುವೆಗಳು, ಬೆಟ್ಟದ ತಿರುವುಗಳು ಹಾಗೂ ಕಾಡು ಪ್ರದೇಶಗಳು ಎದುರಾಗುತ್ತವೆ. ಒಂದು ಕಡೆ ಸುರಿಯುವ ಮಳೆ, ಮತ್ತೊಂದು ಕಡೆ ಬೆಟ್ಟಗಳ ನಡುವೆ ತೇಲುವ ಮಂಜು, ಇನ್ನೊಂದೆಡೆ ಸಣ್ಣ-ಪುಟ್ಟ ಜಲಧಾರೆಗಳ ಕಲರವ-ಪ್ರಯಾಣಿಕರಿಗೆ ಪ್ರಕೃತಿಯೊಂದಿಗೆ ಬೆರೆತ ಅನುಭವ ನೀಡುತ್ತದೆ.ರೈಲಿನ ಚಕ್ರಗಳ ಲಯಬದ್ಧ ಸದ್ದು, ಕಿಟಕಿಯ ಮೇಲೆ ಬೀಳುವ ಮಳೆಯ ಹನಿಗಳು ಮತ್ತು ಹೊರಗಿನ ಹಸಿರು ಲೋಕ ಈ ಪಯಣಕ್ಕೆ ಮತ್ತಷ್ಟು ರೋಮಾಂಚನ ನೀಡುತ್ತವೆ.ಮಳೆಗಾಲದಲ್ಲಿ ಕ್ಯಾಸಲ್ ರಾಕ್-ಗೋವಾ ರೈಲು ಮಾರ್ಗವು ಪ್ರಕೃತಿ ಪ್ರಿಯರು ಮತ್ತು ಪ್ರವಾಸಿಗರನ್ನು ವಿಶೇಷವಾಗಿ ಆಕರ್ಷಿಸುತ್ತದೆ. ಸಾಮಾನ್ಯ ರೈಲು ಪ್ರಯಾಣವೊಂದು ಮಳೆಗಾಲದಲ್ಲಿ ಪ್ರಕೃತಿಯ ಅದ್ಭುತ ದೃಶ್ಯಗಳ ನಡುವೆ ಸಾಗುವ ನೆನಪಿನ ಪಯಣವಾಗಿ ರೂಪಾಂತರಗೊಳ್ಳುತ್ತದೆ.
ದೂಧ್ ಸಾಗರ್ ಜಲಪಾತದ ಭವ್ಯತೆ, ಪಶ್ಚಿಮ ಘಟ್ಟಗಳ ಹಸಿರು ಸೊಬಗು ಮತ್ತು ಮಳೆಯ ತಂಪಿನ ನಡುವೆ ಸಾಗುವ ಈ ರೈಲು ಪಯಣವನ್ನು ಅನುಭವಿಸುವುದು ಪ್ರಕೃತಿಯ ವೈಭವವನ್ನು ಹತ್ತಿರದಿಂದ ಕಣ್ತುಂಬಿಕೊಳ್ಳುವ ಅಪೂರ್ವ ಅವಕಾಶವಾಗಿದೆ.