ನಾವು ಕುಟುಂಬದೊಂದಿಗೆ ಪೂಜೆಗಾಗಿ ದೇವಸ್ಥಾನಕ್ಕೆ ಬಂದಿದ್ದೆವು. ಪೂಜೆ ಮುಗಿದ ಬಳಿಕ ಕೆಲವರು ಗರ್ಭಗುಡಿಯ ಬಳಿ ಫ್ರೀ ವೆಡ್ಡಿಂಗ್ ಫೋಟೋ ಶೂಟ್ ಮಾಡುತ್ತಿದ್ದರು. ಅರ್ಚಕರು ತಡೆಯುತ್ತಿದ್ದರೂ ಅವರು ಕೇಳಲಿಲ್ಲ. ಇದನ್ನು ಪ್ರಶ್ನಿಸಿದಾಗ ವಾಗ್ವಾದ ಉಂಟಾಗಿ ನಂತರ ಗಲಾಟೆ ನಡೆದಿದೆ ಎಂದು ತಿಳಿಸಿದರು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಕೆಲವು ಫೋಟೋಗಳು ಮತ್ತು ವಿಡಿಯೋಗಳು ಎಡಿಟ್ ಆಗಿದ್ದು ಜನರಿಗೆ ತಪ್ಪು ಮಾಹಿತಿ ಹರಡಲಾಗುತ್ತಿದೆ.
ಕನ್ನಡಪ್ರಭ ವಾರ್ತೆ ಸಕಲೇಶಪುರ
ಪ್ರವಾಸಿ ತಾಣಗಳಲ್ಲಿ ಸಾರ್ವಜನಿಕ ಪ್ರಜ್ಞೆಯ ಕೊರತೆ, ಸವಾಲುಗಳು ಹಾಗೂ ಪ್ರವಾಸಿಗರ ಬೇಜವಾಬ್ದಾರಿತನವನ್ನು ತೋರಿಸುತ್ತದೆ ಎಂದು ಜಿಲ್ಲಾಧಿಕಾರಿ ಲತಾ ಕುಮಾರಿ ಹೇಳಿದರು.ತಾಲೂಕಿನ ಹಾನುಬಾಳು ಹೋಬಳಿಯ ಮರಗುಂದ ಗ್ರಾಮದ ಬೆಟ್ಟದ ಬೈರೇಶ್ವರ ದೇಗುಲದ ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರು ಹಾಗೂ ಮುಖಂಡರ ಅಹವಾಲುಗಳನ್ನು ಆಲಿಸಿ ಮಾತನಾಡಿ, ಸಕಲೇಶಪುರ ತಾಲೂಕು ರಾಜ್ಯದ ಪ್ರಮುಖ ಪ್ರವಾಸಿ ತಾಣವಾಗಿದ್ದು, ಪ್ರವಾಸೋದ್ಯಮವನ್ನು ಉತ್ತೇಜಿಸುವುದು ಸರ್ಕಾರದ ಉದ್ದೇಶವಾಗಿದೆ. ಆದರೆ ಕೆಲವು ಪ್ರವಾಸಿಗರ ಅಸಭ್ಯ ವರ್ತನೆ, ಪರಿಸರ ಹಾನಿ ಹಾಗೂ ಪವಿತ್ರ ಸ್ಥಳಗಳ ಗೌರವ ಹಾಳು ಮಾಡುವ ಘಟನೆಗಳು ಹೆಚ್ಚುತ್ತಿರುವುದು ಚಿಂತಾಜನಕ ಎಂದು ಹೇಳಿದರು.
ಪ್ರವಾಸಿಗರು ಭೇಟಿ ನೀಡುವ ಸ್ಥಳಗಳನ್ನು ತಮ್ಮ ಸ್ವಂತ ಆಸ್ತಿಯಂತೆ ಬಳಸಿಕೊಳ್ಳುವುದು, ಪ್ಲಾಸ್ಟಿಕ್ ಬಾಟಲಿ, ಕವರ್ ಹಾಗೂ ಇತರೆ ಕಸದ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆಯುವುದು ಸಾಮಾನ್ಯವಾಗುತ್ತಿದೆ. ಇದರಿಂದ ಪರಿಸರ ಮಾಲಿನ್ಯ ಉಂಟಾಗುತ್ತಿದ್ದು, ಸ್ಥಳೀಯರು ಸಂಕಷ್ಟ ಅನುಭವಿಸುತ್ತಿದ್ದಾರೆ. ಪ್ರವಾಸೋದ್ಯಮದ ಜೊತೆಗೆ ಸಾರ್ವಜನಿಕ ಪ್ರಜ್ಞೆ ಹಾಗೂ ಜವಾಬ್ದಾರಿಯೂ ಅಗತ್ಯವಿದ್ದು, ಸ್ವಚ್ಛತೆಯನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಅವರು ಸೂಚಿಸಿದರು.ಈ ವೇಳೆ ಮಾತನಾಡಿದ ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್, ದೇವಸ್ಥಾನದ ಪಾವಿತ್ರ್ಯತೆಗೆ ಧಕ್ಕೆ ತರುವ ಘಟನೆಗಳು ಹೆಚ್ಚುತ್ತಿದ್ದು, ಅದನ್ನು ಪ್ರಶ್ನಿಸುವವರಿಗೆ ತೊಂದರೆ ಉಂಟಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ದೇವಸ್ಥಾನದ ಜೀರ್ಣೋದ್ಧಾರ ಹಾಗೂ ರಸ್ತೆ ಕಾಮಗಾರಿಗಳ ವಿಚಾರದಲ್ಲಿ ಹಿಂದೆ 9 ಮಂದಿ ಜೈಲಿಗೆ ಹೋಗಿರುವುದನ್ನು ಉಲ್ಲೇಖಿಸಿದ ಅವರು, ಪವಿತ್ರ ಸ್ಥಳದ ಗೌರವ ಕಾಪಾಡಲು ಪ್ರಯತ್ನಿಸುವವರೇ ಸಮಸ್ಯೆ ಎದುರಿಸುವ ಸ್ಥಿತಿ ನಿರ್ಮಾಣವಾಗಿರುವುದಾಗಿ ಹೇಳಿದರು.
ಇತ್ತೀಚಿನ ಘಟನೆಯಲ್ಲಿ ಗರ್ಭಗುಡಿಯ ಗೋಡೆಯ ಬಳಿ ಫ್ರೀ- ವೆಡ್ಡಿಂಗ್ ಫೋಟೋಶೂಟ್ ನಡೆಸಲು ಯತ್ನಿಸಿದ ವಿಚಾರವೇ ಗಲಾಟೆಗೆ ಕಾರಣವಾಯಿತು. ಅರ್ಚಕರು ಹಾಗೂ ಭಕ್ತರು ತಡೆಯಲು ಮುಂದಾದಾಗ, ಕೆಲವರು ಅಸಭ್ಯವಾಗಿ ವರ್ತಿಸಿ ಪ್ರಚೋದನೆ ನೀಡಿದ ಹಿನ್ನೆಲೆಯಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿತು ಎಂದು ವಿವರಿಸಿದರು. ಕೆಲವರು ತಮ್ಮನ್ನು ಪ್ರಭಾವಿ ವ್ಯಕ್ತಿಗಳ ಮಕ್ಕಳೆಂದು ಹೇಳಿಕೊಂಡು ಸ್ಥಳೀಯರನ್ನು ಬೆದರಿಸುವ ಪ್ರವೃತ್ತಿಯೂ ಕಂಡುಬರುತ್ತಿದೆ ಎಂದು ಆರೋಪಿಸಿದರು.ದೇವಸ್ಥಾನದ ಪಾವಿತ್ರ್ಯತೆ ಹಾಗೂ ಪರಿಸರ ಸಂರಕ್ಷಣೆಗಾಗಿ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಹಲವು ಬೇಡಿಕೆಗಳನ್ನು ಸಲ್ಲಿಸಿದರು. ದೇವಸ್ಥಾನ ಆವರಣದಲ್ಲಿ ಪೂಜೆ ಸಮಯ ಹೊರತುಪಡಿಸಿ ಪ್ರವಾಸಿಗರಿಗೆ ನಿರ್ಬಂಧ ವಿಧಿಸುವುದು, ಒಂಬತ್ತು ಗ್ರಾಮಗಳ ಪ್ರತಿನಿಧಿಗಳಿಂದ ಸಮಿತಿ ರಚಿಸಿ ನಿರ್ವಹಣೆಯನ್ನು ಅವರಿಗೆ ಒಪ್ಪಿಸುವುದು, ಡ್ರೆಸ್ ಕೋಡ್ ಕಡ್ಡಾಯಗೊಳಿಸುವುದು, ಮರುಗುಂದ ಗ್ರಾಮದ ಗಡಿಯಲ್ಲಿ ಚೆಕ್‌ಪೋಸ್ಟ್ ಸ್ಥಾಪಿಸುವುದು, ದೇವಸ್ಥಾನದ ಸುತ್ತಮುತ್ತ ಕನಿಷ್ಠ 5 ಎಕರೆ ಪ್ರದೇಶವನ್ನು ಧಾರ್ಮಿಕ ಸೂಕ್ಷ್ಮ ವಲಯವಾಗಿ ಘೋಷಿಸಿ ಫೆನ್ಸಿಂಗ್ ಮಾಡುವುದು, ಶೂ- ಚಪ್ಪಲಿ ಇಡಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸುವುದು ಹಾಗೂ ಕಸದ ನಿರ್ವಹಣೆ ಮತ್ತು ಶೌಚಾಲಯ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದು ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟರು.
ಇನ್ನೊಂದೆಡೆ, ಫ್ರೀ ವೆಡ್ಡಿಂಗ್ ಘಟನೆಗೆ ಸಂಬಂಧಿಸಿದಂತೆ ಬಂಧಿತರಾದ ಪ್ರಶಾಂತ್ ಅವರ ಪತ್ನಿ ಮೇಘ ಮಾತನಾಡಿ, ನಾವು ಕುಟುಂಬದೊಂದಿಗೆ ಪೂಜೆಗಾಗಿ ದೇವಸ್ಥಾನಕ್ಕೆ ಬಂದಿದ್ದೆವು. ಪೂಜೆ ಮುಗಿದ ಬಳಿಕ ಕೆಲವರು ಗರ್ಭಗುಡಿಯ ಬಳಿ ಫ್ರೀ ವೆಡ್ಡಿಂಗ್ ಫೋಟೋ ಶೂಟ್ ಮಾಡುತ್ತಿದ್ದರು. ಅರ್ಚಕರು ತಡೆಯುತ್ತಿದ್ದರೂ ಅವರು ಕೇಳಲಿಲ್ಲ. ಇದನ್ನು ಪ್ರಶ್ನಿಸಿದಾಗ ವಾಗ್ವಾದ ಉಂಟಾಗಿ ನಂತರ ಗಲಾಟೆ ನಡೆದಿದೆ ಎಂದು ತಿಳಿಸಿದರು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಕೆಲವು ಫೋಟೋಗಳು ಮತ್ತು ವಿಡಿಯೋಗಳು ಎಡಿಟ್ ಆಗಿದ್ದು ಜನರಿಗೆ ತಪ್ಪು ಮಾಹಿತಿ ಹರಡಲಾಗುತ್ತಿದೆ ಎಂದು ಅವರು ಆರೋಪಿಸಿದರು.ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಈ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ ಪೃಥ್ವಿ ಅವರೆಕಾಡು, ದೇವಾಲಯದ ಕೆರೆ ಗ್ರಾಮ ಪಂಚಾಯಿತಿಯ ಮಾಜಿ ಉಪಾಧ್ಯಕ್ಷ ಪೂರ್ಣೇಶ್, ಕನಚೂರು ವಿನೋದ್, ಪಟ್ಟದೂರು ಪುಟ್ಟಣ್ಣ, ಬ್ರಿಜೇಶ್, ಸಂತೋಷ್ ಮೇಕನಗದ್ದೆ, ದೀಪಕ್ ದೊಡ್ಡಯ್ಯ, ಕರವೇ ಮುಖಂಡ ಸಂಗ್ರಾಮ್, ಸುರೇಶ್, ಡಿ ಎಸ್ ಲೋಕೇಶ್ ಇನ್ನಿತರರು ಇದ್ದರು.