ಆಗಸದಿಂದ ಹಂಪಿಯ ಸೊಬಗು ಕಂಡ ಪ್ರವಾಸಿಗರು

| Published : Mar 03 2025, 01:48 AM IST

ಸಾರಾಂಶ

ಹಂಪಿ ಉತ್ಸವದ ಅಂಗವಾಗಿ ಆಯೋಜಿಸಲಾಗಿರುವ ಬೈ ಸ್ಕೈ (ಲೋಹದ ಹಕ್ಕಿ) ಮೂಲಕ ಪ್ರವಾಸಿಗರು ವಿಜಯನಗರದ ವಿಹಂಗಮ ನೋಟ ಸವಿದು ಹರ್ಷ ವ್ಯಕ್ತಪಡಿಸಿದರು.

ಬಿ.ಎಚ್.ಎಂ. ಅಮರನಾಥಶಾಸ್ತ್ರಿ

ಕನ್ನಡಪ್ರಭ ವಾರ್ತೆ ಹಂಪಿ

ಹಂಪಿ ಉತ್ಸವದ ಅಂಗವಾಗಿ ಆಯೋಜಿಸಲಾಗಿರುವ ಬೈ ಸ್ಕೈ (ಲೋಹದ ಹಕ್ಕಿ) ಮೂಲಕ ಪ್ರವಾಸಿಗರು ವಿಜಯನಗರದ ವಿಹಂಗಮ ನೋಟ ಸವಿದು ಹರ್ಷ ವ್ಯಕ್ತಪಡಿಸಿದರು.

ಆಗಸದಿಂದ ಹಂಪಿಯ ಸೊಬಗನ್ನು ಸವಿಯಲು ಅನುಕೂಲವಾಗುವ ನಿಟ್ಟಿನಲ್ಲಿ ಇಲ್ಲಿನ ಕಮಲಾಪುರದ ಹೋಟೆಲ್ ಮಯೂರ ಭುವನೇಶ್ವರಿ ಆವರಣದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಆಯೋಜಿಸಲಾಗಿರುವ ಬೈ ಸ್ಕೈ ಗೆ ಶನಿವಾರ ವಿಧ್ಯುಕ್ತ ಚಾಲನೆ ದೊರೆತಿದೆಯಾದರು ಹೆಲಿಕಾಪ್ಟರ್ ನ ಹಾರಾಟ ಶುಕ್ರವಾರ ಮಧ್ಯಾಹ್ನದಿಂದಲೇ ಶುರುವಾಗಿತ್ತು. ಟೇಕ್ ಆಫ್ ಹಾಗೂ ಲ್ಯಾಂಡಿಂಗ್ ಸಮಯ ಸೇರಿ 7 ನಿಮಿಷಗಳ ಹಾರಾಟಕ್ಕೆ ಪ್ರತಿ ವ್ಯಕ್ತಿಗೆ ₹3999 ನಿಗದಿಪಡಿಸಲಾಗಿತ್ತು. ಉತ್ಸವದ ಮೊದಲ ಎರಡು ದಿನಗಳಲ್ಲಿ ಬೈ ಸ್ಕೈ ಗೆ ನಿರೀಕ್ಷೆಯಷ್ಟು ಜನ ಆಗಮಿಸಿರಲಿಲ್ಲವೆಂದು ಆಯೋಜಕರು ಬೇಸರ ವ್ಯಕ್ತಪಡಿಸಿದ್ದರು. ಇನ್ನು ಉತ್ಸವದ ಮೂರನೇ ದಿನವಾದ ಭಾನುವಾರ ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು, ತುಮಕೂರು, ಬೆಂಗಳೂರು ಸೇರಿ ರಾಜ್ಯದ ನಾನಾ ಜಿಲ್ಲೆ ದೇಶ ವಿದೇಶಗಳಿಂದ ಆಗಮಿಸಿದ್ದ ಪ್ರವಾಸಿಗರು ಬೈ ಸ್ಕೈ ನಲ್ಲಿ ಪ್ರಯಾಣಿಸಿ ಹಂಪಿ ಸ್ಮಾರಕಗಳು, ತುಂಗಾಭದ್ರಾ ಜಲಾಶಯ ಸೇರಿದಂತೆ ಹಂಪಿಯ ಪ್ರಾಕೃತಿಕ ಸೊಬಗನ್ನು ವೀಕ್ಷಿಸಿ ಸಂತಸ ಪಟ್ಟರು.

ಬೈ ಸ್ಕೈ ನಲ್ಲಿ ಹಾರಾಟ ಮಾಡಿದ ರೈತರು:

ಹಂಪಿ ಬೈ ಸ್ಕೈ ಗೆ ಒಬ್ಬ ವ್ಯಕ್ತಿಗೆ ₹4 ಸಾವಿರ ನಿಗದಿಪಡಿಸಿದ್ದು ತಿಳಿದ ಅನೇಕರು ಇದು ಶ್ರೀಮಂತರಿಗೆ ಮಾತ್ರ ಎಂದು ಮಾತನಾಡುತ್ತ ತೆರಳುವುದು ಒಂದೆಡೆ ಆದರೆ ಇನ್ನೊಂದೆಡೆ ಬೈ ಸ್ಕೈನಲ್ಲಿ ರೈತರು, ಸಾಮಾನ್ಯ ವರ್ಗದ ಜನರು ತೆರಳುತ್ತಿದ್ದ ದೃಶ್ಯ ಕಂಡುಬಂದವು. ಹಲವು ಬಾರಿ ನಾವು ಹಂಪಿ ವೀಕ್ಷಣೆಗೆ ಆಗಮಿಸಿದ್ದೇವೆ. ಆದರೆ ಹಂಪಿ ಉತ್ಸವಕ್ಕೆ ಆಗಮಿಸಿದ್ದು ಇದೇ ಮೊದಲು. ಈವರೆಗೂ ಹೆಲಿಕಾಪ್ಟರ್ ಗಳ ಹಾರಾಟವನ್ನು ಕೆಳಗಿನಿಂದಲೇ ನೋಡುತ್ತಿದ್ದೆವು. ಒಂದು ಬಾರಿಯಾದರೂ ಹೆಲಿಕಾಪ್ಟರ್ ನಲ್ಲಿ ತೆರಳಬೇಕು ಎಂಬ ಆಸೆ ಇತ್ತು. ಇದೀಗ ಹಂಪಿ ಉತ್ಸವದಲ್ಲಿನ ಬೈ ಸ್ಕೈ ಸೇವೆಯಿಂದ ನಾವು ಹೆಲಿಕ್ಯಾಪ್ಟರ್ ಹತ್ತುವ ಭಾಗ್ಯ ದೊರೆತಿದೆ. ಇದು ನಮ್ಮ ಜೀವನದಲ್ಲಿ ಮರೆಯಲಾಗದ ಕ್ಷಣವಾಗಿದೆ ಎಂದು ತುಮಕೂರು ಜಿಲ್ಲೆಯ ತುರುಬಕೆರೆ ಗ್ರಾಮದ ರೈತ ಶೇಖರಪ್ಪ ತಿಳಿಸಿದರು.

ವಿದೇಶಿಗರ ಪ್ರಯಾಣ:

ವಿಶ್ವ ಪಾರಂಪರಿಕ ಪಟ್ಟಿಯಲ್ಲಿರುವ ಹಂಪಿಯನ್ನು ವೀಕ್ಷಿಸಬೇಕೆಂದು ಹಲವು ವರ್ಷಗಳಿಂದ ಅಂದುಕೊಂಡಿದ್ದೆ. ಇಂದು ಆ ಅವಕಾಶ ನಮಗೆ ದೊರೆತಿದೆ. ಅನಿರೀಕ್ಷಿತವಾಗಿ ಹಂಪಿಯ ಜೊತೆಗೆ ಹಂಪಿ ಉತ್ಸವವನ್ನು ನೋಡುವ ಸೌಭಾಗ್ಯ ನಮ್ಮದಾಗಿದೆ. ಇನ್ನು ಹೆಲಿಕಾಪ್ಟರ್ ಹಾರಾಟ ಕಂಡು ನಮಗೂ ಬೈ ಸ್ಕೈ ಗೆ ತೆರಳುವ ಆಸೆಯಾಗಿತ್ತು. ಅದರಂತೆ ಬೈ ಸ್ಕೈ ನಲ್ಲಿ ತೆರಳಿದ್ದು ಆಗಸದಿಂದ ಹಂಪಿಯನ್ನು ನೋಡುವುದೇ ಒಂದು ಅದ್ಬುತ ಅನುಭವವಾಗಿತ್ತು ಎಂದು ಜರ್ಮನ್ ಮೂಲದ ಡೇವಿಡ್ ಹಾಗೂ ಸೂಸನ್ ತಮ್ಮ ಅನುಭವ ಹಂಚಿಕೊಂಡರು.