ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಮುಂದಾಗಿ: ನಲಿನ್ ಅತುಲ್

| Published : Feb 05 2025, 12:33 AM IST

ಸಾರಾಂಶ

ಜನರ ಸಮಸ್ಯೆಗಳು ಏನೇ ಇರಲಿ ಅವುಗಳಿಗೆ ಅಧಿಕಾರಿಗಳು ತಕ್ಷಣ ಸ್ಪಂದಿಸಬೇಕೆ ವಿನಃ ಕಚೇರಿಗಳಿಗೆ ಅಲೆದಾಡುವಂತೆ ಮಾಡದೆ ಸ್ಥಳದಲ್ಲೇ ಶಾಶ್ವತ ಪರಿಹಾರಕ್ಕೆ ಮುಂದಾಗಬೇಕು.

ಜನಸ್ಪಂದನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ

ಕನ್ನಡಪ್ರಭ ವಾರ್ತೆ ಯಲಬುರ್ಗಾ

ಜನರ ಸಮಸ್ಯೆಗಳು ಏನೇ ಇರಲಿ ಅವುಗಳಿಗೆ ಅಧಿಕಾರಿಗಳು ತಕ್ಷಣ ಸ್ಪಂದಿಸಬೇಕೆ ವಿನಃ ಕಚೇರಿಗಳಿಗೆ ಅಲೆದಾಡುವಂತೆ ಮಾಡದೆ ಸ್ಥಳದಲ್ಲೇ ಶಾಶ್ವತ ಪರಿಹಾರಕ್ಕೆ ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಹೇಳಿದರು.

ತಾಲೂಕಿನ ಬೇವೂರು ಗ್ರಾಮದ ಬುದ್ಧ, ಬಸವ, ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಜಿಲ್ಲಾಡಳಿತ ವತಿಯಿಂದ ಆಯೋಜಿಸಿದ್ದ ಜನಸ್ಪಂದನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಜಿಲ್ಲೆಯ ಪ್ರತಿ ತಿಂಗಳಿಗೊಮ್ಮೆ ಹೋಬಳಿ ಮಟ್ಟದಲ್ಲಿ ಜನಸ್ಪಂದನಾ ಕಾರ್ಯಕ್ರಮ ನಡೆಸಿ ಜನರ ಸಮಸ್ಯೆಗಳಿಗೆ ತ್ವರಿತವಾಗಿ ಪರಿಹಾರ ದೊರೆಕಿಸಿ ಕೊಡುವ ಉದ್ದೇಶ ಇದಾಗಿದೆ ಎಂದರು.

ಜಿಲ್ಲೆಯ ಜನರು ಯಾವುದೇ ಸಕಾರಣಕ್ಕೂ ಕಚೇರಿಯಿಂದ ಕಚೇರಿಗೆ ಅಲೆದಾಡುವ ಸಮಸ್ಯೆಗೆ ಕಡಿವಾಣ ಹಾಕುವ ಉದ್ದೇಶಕ್ಕಾಗಿ ಸರ್ಕಾರ ಜನರ ಮನೆ ಬಾಗಿಲಿಗೆ ಅಧಿಕಾರಿಗಳನ್ನು ಕಳಿಸಿ ಸಮಸ್ಯೆಗಳ ಪರಿಹಾರ ನೀಡುವ ಕಾರ್ಯ ಮಾಡಲಾಗಿದೆ. ಇದನ್ನು ಅಧಿಕಾರಿಗಳು ಗಮನದಲ್ಲಿಟ್ಟುಕೊಂಡು ಕರ್ತವ್ಯ ನಿರ್ವೆಹಿಸಬೇಕು. ಪ್ರತಿ ತಾಲೂಕಿನ ಹೋಬಳಿ ಮಟ್ಟದಲ್ಲಿ ಜನಸ್ಪಂದನಾ ಕಾರ್ಯಕ್ರಮ ಹಮ್ಮಿಕೊಂಡು ಸಮಸ್ಯೆಗಳಿಗೆ ಪರಿಹಾರ ನೀಡುವ ಕಾರ್ಯ ಮಾಡಲಾಗುತ್ತಿದೆ ಎಂದು ಹೇಳಿದರು.

ಗ್ಯಾರಂಟಿ ಯೋಜನೆ ಜನರಿಗೆ ಅನುಕೂಲ:

೩ ಸಾವಿರ ಅಧಿಕ ವಿವಿಧ ಸಮಸ್ಯೆಗಳಲ್ಲಿ ೨೬೮೩ ಸಮಸ್ಯೆಗೆ ಪರಿಹಾರ ನೀಡಲಾಗಿದೆ. ಇನ್ನೂ ೧೪೦೦ ಬಾಕಿ ಅವುಗಳನ್ನು ಶೀಘ್ರವಾಗಿ ಇತ್ಯರ್ಥ ಪಡಿಸಲಾಗುವುದು. ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಯಿಂದ ಜಿಲ್ಲೆಗೆ ಹೆಚ್ಚು ಅನುಕೂಲವಾಗಿದೆ. ಇದರಿಂದ ಶೇ.೮೦ರಷ್ಟು ಯೋಜನೆಯ ಲಾಭ ಸಿಗುತ್ತದೆ. ಗೃಹಲಕ್ಷ್ಮಿ ೩.೧೩ ಲಕ್ಷ ಮಹಿಳಾ ಫಲಾನುಭವಿಗಳಿಗೆ ತಲಾ ₹2 ಸಾವಿರವನ್ನು ಖಾತೆ ಜಮಾ ಮಾಡಲಾಗುತ್ತಿದೆ. ಅಲ್ಲದೇ ೩೩ ಲಕ್ಷ ಮಹಿಳೆಯರು ಶಕ್ತಿ ಯೋಜನೆಯಡಿ ಪ್ರಯಾಣ, ೨.೯೦ ಲಕ್ಷ ಕುಟುಂಬಕ್ಕೆ ಪ್ರತಿ ತಿಂಗಳ ೫ ಕೆಜಿ ಅಕ್ಕಿ, ಪ್ರತಿ ಸದಸ್ಯರಿಗೆ ತಲಾ ₹೧೭೦ ಹಾಕಲಾಗಿದೆ. ೩೫೦೦ ಯುವಕ- ಯುವತಿರಿಗೆ ಯುವನಿಧಿ ನೀಡಿದ್ದು, ಒಟ್ಟಾರೆ ೧೨ ಲಕ್ಷ ಜನತೆಗೆ ಐದು ಗ್ಯಾರಂಟಿ ಸೌಲಭ್ಯ ನೀಡಲಾಗಿದೆ ಎಂದಂರು.

ಅಭಿವೃದ್ಧಿಗೆ ಹೆಚ್ಚು ಅನುದಾನ:

ಕೊಪ್ಪಳ ಜಿಲ್ಲೆಗೆ ಕರ್ನಾಟಕ ಕಲ್ಯಾಣ ಪ್ರದೇಶಾಭಿವೃದ್ಧಿ ಅನುದಾನದಡಿ ಜಿಲ್ಲೆಗೆ ಒಟ್ಟು ₹ ೩೮೭ ಕೋಟಿ, ಯಲಬುರ್ಗಾ ಕ್ಷೇತ್ರಕ್ಕೆ ಸುಮಾರು ₹100 ಕೋಟಿ ಅನುದಾನ ಬಂದಿದೆ ಎಂದು ತಿಳಿಸಿದರು.

ಡಿಸಿ ಮುಂದೆ ಅಳಿಲು:

ಜಿಲ್ಲಾಧಿಕಾರಿ ನಲಿನ್ ಅತುಲ್ ಹಾಗೂ ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೇಯ ಅವರಿಗೆ ತಾಲೂಕಿನ ನಾನಾ ಗ್ರಾಮದ ಜನರು ಹೊಲ, ರಸ್ತೆ, ಗೃಹಲಕ್ಷ್ಮಿ, ಪಡಿತರ ಚೀಟಿ, ವಿದ್ಯುತ್, ನಾನಾ ರೀತಿಯ ಸಮಸ್ಯೆ ಕುರಿತು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಸಿ, ಸಿಇಒ ಸಮಸ್ಯೆ ಆಲಿಸಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಪರಿಹಾರ ಒದಗಿಸುವಂತೆ ಸೂಚಿಸಿದರು.

ಶುದ್ಧ ನೀರು ನೀಡುವಂತೆ ಮನವಿ:

ತಾಲೂಕಿನ ಮುರಡಿ ಗ್ರಾಮದಲ್ಲಿ ಮಾಡಲಾದ ಜೆಜೆಎಂ ಕಾಮಗಾರಿ ಕೆಲಸವನ್ನು ಪೂರ್ಣಗೊಳಿಸಿ ಗ್ರಾಮದ ಜನತೆಗೆ ಶುದ್ಧ ನೀರು ಪೂರೈಸಬೇಕು. ಈ ಬಗ್ಗೆ ಗುತ್ತಿಗೆದಾರರಿಗೆ ಅನೇಕ ಬಾರಿ ಸಂಪರ್ಕಿಸಿದರೂ ಸ್ಪಂದಿಸುತ್ತಿಲ್ಲ. ಕೂಡಲೇ ಬಗ್ಗೆ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಮುರಡಿ ಗ್ರಾಪಂ ಅಧ್ಯಕ್ಷ ಬಸವರಾಜ ಮಾಳಿ ಅವರು ಡಿಸಿ, ಸಿಇಒಗೆ ಮನವಿ ಮಾಡಿದರು. ಈ ಬಗ್ಗೆ ಕ್ರಮ ವಹಿಸಲಾಗುವುದು ಎಂದು ಅಧ್ಯಕ್ಷರಿಗೆ ಸಿಇಒ ಭರವಸೆ ನೀಡಿದರು.

ಈ ವೇಳೆಯಲ್ಲಿ ಸಹಾಯಕ ಆಯುಕ್ತ ಕ್ಯಾ. ಮಹೇಶ್ ಮಲಗಿತ್ತಿ, ಗ್ರಾಪಂ ಅಧ್ಯಕ್ಷೆ ಅಂದಮ್ಮ ಬಳಿಗಾರ, ಉಪಾಧ್ಯಕ್ಷೆ ಲಕ್ಷ್ಮವ್ವ, ತಹಸೀಲ್ದಾರ ಬಸವರಾಜ ತೆನ್ನಳ್ಳಿ, ಪಿಡಿಒ ಅಬ್ದುಲ್ ಗಫಾರ್, ಜಿಲ್ಲೆಯ ಹಾಗೂ ತಾಲೂಕು ಮಟ್ದಯ ಅಧಿಕಾರಿಗಳು ಇದ್ದರು.