ಇತ್ತೀಚಿನ ದಿನಮಾನಗಳಲ್ಲಿ ಹಿರಿಯರ ಮಾರ್ಗದರ್ಶನ ಕೊರತೆಯಿಂದ ಯುವಸಮುದಾಯ ದುಶ್ಚಟಗಳ ದಾಸರಾಗುವ ಮೂಲಕ ದಾರಿ ತಪ್ಪುತ್ತಿದೆ
ಕುಷ್ಟಗಿ: ದುಶ್ಚಟ ಹಾಗೂ ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣಕ್ಕೆ ಸಂಘಟನೆ ಜತೆಗೆ ನಗರದ ನಾಗರಿಕರ ಭಾಗವಹಿಸುವಿಕೆಯೊಂದಿಗೆ ಸಹಕಾರದ ಅಗತ್ಯವಾಗಿದೆ ಎಂದು ಬಳ್ಳಾರಿ ವಿಭಾಗದ ಹಿರಿಯ ಸಾರ್ವಜನಿಕ ಅಭಿಯೋಜಕ ಬಿ.ಎಸ್. ಪಾಟೀಲ ಹೇಳಿದರು.
ನಗರದ ರಾಜಕುಮಾರ ಕಲ್ಯಾಣ ಮಂಟಪ ಹತ್ತಿರ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕುಷ್ಟಗಿ ನಗರ ಹಿತರಕ್ಷಣಾ ವೇದಿಕೆ ಹಾಗೂ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.ಇತ್ತೀಚಿನ ದಿನಮಾನಗಳಲ್ಲಿ ಹಿರಿಯರ ಮಾರ್ಗದರ್ಶನ ಕೊರತೆಯಿಂದ ಯುವಸಮುದಾಯ ದುಶ್ಚಟಗಳ ದಾಸರಾಗುವ ಮೂಲಕ ದಾರಿ ತಪ್ಪುತ್ತಿದೆ.ನಿರುದ್ಯೋಗದ ಸಮಸ್ಯೆ ಕಾಡುತ್ತಿದೆ. ಕೊಪ್ಪಳ ಜಿಲ್ಲೆಯಲ್ಲಿ ಕೃಷಿ ಆಧಾರಿತ ಕೈಗಾರಿಕಾ ಚಟುವಟಿಕೆಗಳ ನಿರ್ಮಾಣಕ್ಕೆ ಜನಪ್ರತಿನಿಧಿಗಳು ಮುಂದಾದಾಗ ಮಾತ್ರ ನಿರುದ್ಯೋಗ ಸಮಸ್ಯೆ ನಿವಾರಣೆಯಾಗಲು ಸಾಧ್ಯವಾಗಲಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘಟನೆಯ ಉಪಾಧ್ಯಕ್ಷ ಪರಸಪ್ಪ ಅಮರಾವತಿ, ನಮ್ಮ ಕುಷ್ಟಗಿ ನಗರ ಹಿತರಕ್ಷಣಾ ವೇದಿಕೆ ಸಂಘಟನೆಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜನೆ ಮಾಡಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದ ಅವರು, ನಮ್ಮ ಸಂಘಟನೆಯಿಂದ ಜನೋಪಯೋಗಿ ಕಾರ್ಯ ಮಾಡುತ್ತಿದ್ದು ಕುಷ್ಟಗಿ ಭ್ರಷ್ಟಮುಕ್ತ, ನಿರುದ್ಯೋಗ ಮುಕ್ತ ಮಾಡುವಲ್ಲಿ ಯೋಜನೆ ಹಾಕಿಕೊಂಡಿದ್ದು ಎಲ್ಲರ ಸಹಕಾರ ಅಗತ್ಯವಾಗಿದೆ ಬಡವರ ಅಭಿವೃದ್ಧಿಗಾಗಿ ಶ್ರಮಿಸಲಾಗುತ್ತದೆ ಎಂದರು.ತಾಲೂಕಾಸ್ಪತ್ರೆಯ ಎಲುಬು, ಕೀಲು ತಜ್ಞ ಡಾ. ರವಿಕುಮಾರ ಪಾಟೀಲ ಮಾತನಾಡಿ, ಇಂದಿನ ದಿನಗಳಲ್ಲಿ ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿರುವದು ವಿಪರ್ಯಾಸದ ಸಂಗತಿಯಾಗಿದೆ. ಸದೃಢ ದೇಶ ನಿರ್ಮಾಣದಲ್ಲಿ ಯುವಕರ ಪಾತ್ರ ಪ್ರಮುಖವಾಗಿದ್ದು ಯುವಕರು ದುಶ್ಚಟಗಳಿಂದ ಮುಕ್ತರಾಗಿ ಆರೋಗ್ಯಯುತ ಸಮಾಜ ಕಟ್ಟಲು ಮುಂದಾಗಬೇಕು ಎಂದರು.
ಡಾ. ಅಯ್ಯನಗೌಡ, ಡಾ.ರಾಘವೇಂದ್ರ ಚವ್ಹಾಣ ಸೇರಿದಂತೆ ಅನೇಕರು ಮಾತನಾಡಿದರು. ಸಂಘಟನೆ ಅಧ್ಯಕ್ಷ ದೇವೆಂದ್ರಪ್ಪ ಕಟ್ಟಿಮನಿ ಅಧ್ಯಕ್ಷತೆ ವಹಿಸಿದ್ದರು.ಈ ಸಂದರ್ಭದಲ್ಲಿ ನಾಗಪ್ಪ ಹೊಸವಕ್ಕಲ್, ಕೇದಾರನಾಥ ತುರಕಾಣಿ, ಸಂಗನಬಸಪ್ಪ, ಸ್ತ್ರೀ ಪ್ರಸೂತಿ ವೈದ್ಯೆ ಡಾ.ಚಂದ್ರಕಲಾ, ಶಂಕರಪ್ಪ ಕವಡಿಕಾಯಿ, ಎನ್.ಎಸ್. ಘೋರ್ಪಡೆ, ಮೋಹನಲಾಲ್ ಜೈನ, ಗುಲಾಮ ಹುಸೇನ್, ಡಾ. ರವಿಕುಮಾರ ಪಾಟೀಲ,ಶಿವಾಜಿ ಹಡಪದ, ಡಾ.ವಿಜಯಲಕ್ಷ್ಮಿ, ಡಾ.ಮನೋಹರ ಬಡಿಗೇರ,ಡಾ.ರಾಹುಲ್, ಹನಮಂತಪ್ಪ, ಡಾ.ಮನೋಜ್,ಪಾಂಡಪ್ಪ, ಹುಲಗೇಶ, ಡಾ.ರೇಷ್ಮಾ,ಶಾಲಾ ಮುಖ್ಯಶಿಕ್ಷಕಿ ಮರಿಯಮ್ಮ,ಶರಣಪ್ಪ, ಬಸವರಾಜ ಗಾಣಿಗೇರ, ಶ್ರೀನಿವಾಸ ದೇಸಾಯಿ, ಕಳಕಪ್ಪ ತಟ್ಟಿ ಸೇರಿದಂತೆ ಅನೇಕರು ಇದ್ದರು.
ಬಿಪಿ ಚೆಕ್ ಮಾಡಿಸಿಕೊಂಡ ಶಾಸಕ:ಶಾಸಕ ದೊಡ್ಡನಗೌಡ ಪಾಟೀಲ ಕುಷ್ಟಗಿ ನಗರ ಹಿತರಕ್ಷಣಾ ವೇದಿಕೆ ಆಯೋಜಿಸಿದ ಉಚಿತ ಆರೋಗ್ಯ ತಪಾಸಣೆ ಶಿಬಿರಕ್ಕೆ ಭೇಟಿ ನೀಡಿ ವೈದ್ಯರೊಂದಿಗೆ ಚರ್ಚಿಸಿದರು. ನಂತರ ಸ್ವಂತ ತಾವೇ ಬಿಪಿ ಚೆಕ್ ಮಾಡಿಸಿಕೊಂಡು ಸಂಘಟನೆ ಉತ್ತಮ ಕಾರ್ಯ ಮಾಡಿದೆ, ಇಂತಹ ಕಾರ್ಯ ಪಟ್ಟಣದಲ್ಲಿ ನಡೆಯಲಿ ಎಂದು ಆಶಿಸಿದರು.