ಸಾರಾಂಶ
ಅಂತರ್ಜಲವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಿಯರ್ ಕಂಪನಿಯ ಮೇಲೆ ಕೂಡಲೇ ಕ್ರಮ ಕೈಗೊಳ್ಳಬೇಕು.
ಕನ್ನಡಪ್ರಭ ವಾರ್ತೆ ಬನ್ನೂರು
ಪಟ್ಟಣದ ಸಮೀಪದ ಮಲಿಯೂರು ಗ್ರಾಮದಲ್ಲಿನ ಎಸ್.ಪಿ.ಆರ್ ಡಿಸ್ಟಲರೀಸ್ ಅಬಿಲ್ ಎಂಬ ಬಿಯರ್ ಕಂಪನಿಯವರು ಕೃಷಿ ಚಟುವಟಿಕೆಗಳಿಗೆ ಬಳಸುವ ಅಂತರ್ಜಲದ ನೀರನ್ನು ಭಾರೀ ಪ್ರಮಣದಲ್ಲಿ ಬಳಕೆ ಮಾಡಿಕೊಳ್ಳುತ್ತಿದ್ದು, ನೈಜ ಕೃಷಿ ಚಟುವಟಿಕೆಯ ನಿರತರಾದ ರೈತರಿಗೆ ನೀರಿನ ಅಭಾವ ಸೃಷ್ಟಿಸುವಂತಾತ್ತಿದೆ ಎಂದು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಬನ್ನೂರು ನಾರಾಯಣ್ ಆರೋಪಿಸಿದರು.ಪಟ್ಟಣದ ಅತಿಥಿಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿದ ಅವರು, ಅಂತರ್ಜಲವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಿಯರ್ ಕಂಪನಿಯ ಮೇಲೆ ಕೂಡಲೇ ಕ್ರಮ ಕೈಗೊಳ್ಳಬೇಕು. ರೈತರಿಗೆ ಹಣದ ಆಮಿಷ ಒಡ್ಡಿ ಕೃಷಿ ಚಟುವಟಿಕೆಗಳಿಂದ ಕೊರೆಯಿಸಲಾದ ಅಂತರ್ಜಲವನ್ನು ಕಂಪನಿಯವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ಭಾರೀ ನಷ್ಟವನ್ನುಂಟು ಮಾಡುತ್ತಿದ್ದಾರೆ ಎಂದು ಅವರು ದೂರಿದರು.
ರೈತರ ಹೆಸರಿನಲ್ಲಿ ಕೊಳವೆ ಬಾಯಿ ತೆರೆದು ಕಂಪನಿಗೆ ನೀರು ಸರಬರಾಜು ಮಾಡುತ್ತಿರುವ ಅನಧೀಕೃತ ಕೊಳವೆ ಬಾವಿಗಳನ್ನು ಕೂಡಲೇ ಮುಟ್ಟುಗೋಲು ಹಾಕಿಕೊಳ್ಳುವ ಮೂಲಕ ನೈಜ ರೈತರಿಗೆ ಅನುಕೂಲ ಮಾಡಿಕೊಡುವಂತೆ ಅವರು ಆಗ್ರಹಿಸಿದರು.ಮಲಿಯೂರು ಗ್ರಾಮದ ಮುಖಂಡ ರಾಜಣ್ಣ ಮಾತನಾಡಿ, ಕಾರ್ಖಾನೆಯಲ್ಲಿ ಐಪಿ ಸೆಟ್ ಗಳಿಂದ ಅಕ್ರಮವಾಗಿ ನೀರನ್ನು ಕಾರ್ಖಾನೆಗಳಿಗೆ ಮಾರಾಟ ಮಾಡುತ್ತಿರುವುದರಿಂದ ವಿದ್ಯುತ್ ಇಲಾಖೆಗೂ ಭಾರೀ ನಷ್ಟವನ್ನುಂಟು ಮಾಡುತ್ತಿದ್ದಾರೆ. ಕೂಡಲೇ ಕಂಪನಿಯವರ ಮೇಲೆ ಕ್ರಮ ಕೈಗೊಂಡು ರಾಜ್ಯದ ಬೊಕ್ಕಸಕ್ಕೆ ನಷ್ಟ ಉಂಟು ಮಾಡುತ್ತಿರುವವರ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದರು.
ಸುದ್ದಿಗೋಷ್ಟಿಯಲ್ಲಿ ಯಾಚೇನಹಳ್ಳಿ ಚಿನ್ನಸ್ವಾಮಿ, ಅತ್ತಹಳ್ಳಿ ಸ್ವಾಮಿರಾಜ್, ಹುನುಗನಹಳ್ಳಿ ವಿಶ್ವನಾಥ್, ಶಿವರಾಂ, ಕೃಷ್ಣ, ಮಲಿಯೂರು ರಾಜಣ್ಣ, ಜಯರಾಮು ಮೊದಲಾದವರು ಇದ್ದರು.