ಡೆಂಘೀ ಹಾವಳಿ: ನ್ಯಾಮತಿಯಲ್ಲಿ ಸ್ವಚ್ಛತೆ ಕಾಪಾಡಲು ಪಪಂ ಸೂಚನೆ

| Published : Jul 28 2024, 02:03 AM IST

ಸಾರಾಂಶ

ಡೆಂಘೀಜ್ವರ ತಡೆಗಟ್ಟುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾಲೀಕರು ತಮ್ಮ ಖಾಲಿ ನಿವೇಶನಗಳಲ್ಲಿ ಬೆಳೆದಿರುವ ಗಿಡಗಳು, ಜಾಲಿ ಗಿಡಗಳನ್ನು, ತ್ಯಾಜ್ಯವನ್ನು ತೆರವುಗೊಳಿಸಬೇಕು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪಿ.ಗಣೇಶ್‌ ರಾವ್‌ ತಿಳಿಸಿದ್ದಾರೆ.

ನ್ಯಾಮತಿ: ಡೆಂಘೀಜ್ವರ ತಡೆಗಟ್ಟುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾಲೀಕರು ತಮ್ಮ ಖಾಲಿ ನಿವೇಶನಗಳಲ್ಲಿ ಬೆಳೆದಿರುವ ಗಿಡಗಳು, ಜಾಲಿ ಗಿಡಗಳನ್ನು, ತ್ಯಾಜ್ಯವನ್ನು ತೆರವುಗೊಳಿಸಬೇಕು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪಿ.ಗಣೇಶ್‌ ರಾವ್‌ ತಿಳಿಸಿದ್ದಾರೆ.

ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಅನೇಕ ಕಡೆ ಖಾಲಿ ನಿವೇಶನಗಳಿವೆ. ಅವುಗಳಲ್ಲಿ ಕಳೆಗಿಡಗಳು ಬೆಳೆದಿವೆ. ಮನಬಂದಂತೆ ತ್ಯಾಜ್ಯ ವಿಲೇವಾರಿ ಮಾಡಲಾಗಿದೆ. ಇದರಿಂದ ಕೊಳಚೆ ನೀರು ಸೃಷ್ಟಿಯಾಗಿ, ಸೊಳ್ಳೆಗಳು ಉತ್ಪತ್ತಿಯಾಗುತ್ತಿವೆ. ಈಗ ಮಳೆಗಾಲವಾಗಿದ್ದು, ಕೊಳಕು ನೀರು ನಿಂತು ಡೆಂಘೀಜ್ವರ, ಮಲೇರಿಯಾ, ಚಿಕೂನ್‌ ಗುನ್ಯಾದಂಥ ರೋಗಗಳು ಜನರನ್ನು ಕಾಡುತ್ತಿವೆ. ಈ ಹಿನ್ನೆಲೆ ನಿವೇಶನಗಳ ಮಾಲೀಕರು, ಸಾರ್ವಜನಿಕರು ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ತಿಳಿಸಿದ್ದಾರೆ.

ಖಾಲಿ ನಿವೇಶನಗಳ ಮಾಲೀಕರು ವಾರದೊಳಗೆ ನಿವೇಶನಗಳಲ್ಲಿಯ ತ್ಯಾಜ್ಯವಸ್ತು, ಗಿಡಗಳನ್ನು ಸ್ವಚ್ಛಗೊಳಿಸಬೇಕು. ಇಲ್ಲದಿದ್ದರೆ ಪಟ್ಟಣ ಪಂಚಾಯಿತಿ ಸಿಬ್ಬಂದಿ ಮೂಲಕ ಮತ್ತು ಜೆಸಿಬಿ ಬಾಡಿಗೆ ಪಡೆದು ಸ್ವಚ್ಛಗೊಳಿಸಿ, ಅದಕ್ಕೆ ತಗಲಿದ ವೆಚ್ಚವನ್ನು ಮಾಲೀಕರಿಂದಲೇ ವಸೂಲು ಮಾಡಲಾಗುವುದು ಎಂದಿದ್ದಾರೆ.

ಸಂಪೂರ್ಣ ಪಾಳುಬಿದ್ದ ಮತ್ತು ಶಿಥಿಲಗೊಂಡಿರುವ ಕಟ್ಟಡಗಳನ್ನು ಮಾಲೀಕರು ನೆರೆಹೊರೆಯ ಕಟ್ಟಡಗಳಿಗೆ ತೊಂದರೆ ಆಗದಂತೆ ಖುದ್ದು ತೆರವುಗೊಳಿಸಬೆಕು. ಶಿಥಿಲ, ಪಾಳುಬಿದ್ದ ಕಟ್ಟಡಗಳಿಂದ ಅಕ್ಕಪಕ್ಕದ ನಿವಾಸಿಗಳಿಗೆ ತೊಂದರೆಯಾದರೆ ಕಟ್ಟಡದ ಮಾಲೀಕರೇ ಜವಾಬ್ದಾರಿ. ನಳಗಳಿಗೆ ಟ್ಯಾಪ್‌ ಅಳವಡಿಸಿ, ನೀರು ಪೋಲಾಗದಂತೆ ಕ್ರಮ ವಹಿಸಬೇಕು. ತಪ್ಪಿದ್ದಲ್ಲಿ ಪುರಸಭೆ ಕಾಯ್ದೆ ಅನ್ವಯ ಕ್ರಮ ವಹಿಸಲಾಗುವುದು ಎಂದು ತಿಳಿಸಿದ್ದಾರೆ.

- - - (-ಸಾಂದರ್ಭಿಕ ಚಿತ್ರ)