ಚನ್ನಗಿರಿ: ಆಮೆಗತಿಯಲ್ಲಿ ಸಾಗುತ್ತಿರುವ ಪಟ್ಟಣ ಒಳಚರಂಡಿ ಕಾಮಗಾರಿ

| Published : Sep 16 2025, 12:03 AM IST

ಚನ್ನಗಿರಿ: ಆಮೆಗತಿಯಲ್ಲಿ ಸಾಗುತ್ತಿರುವ ಪಟ್ಟಣ ಒಳಚರಂಡಿ ಕಾಮಗಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಚನ್ನಗಿರಿ ಪಟ್ಟಣದ ಜನರ ಬಹುವರ್ಷಗಳ ಬೇಡಿಕೆಯಾದ ಒಳಚರಂಡಿ ವ್ಯವಸ್ಥೆಯ ಕಾಮಗಾರಿ ಕಳೆದ 30 ತಿಂಗಳಿನಿಂದ ನಡೆಯುತ್ತಿದ್ದು, ಶೇ.70ರಷ್ಟು ಕೆಲಸ ಮುಗಿದಿದೆ. ಆದರೆ, ಬಾಕಿ ಇರುವ ಶೇ.30ರಷ್ಟು ಕಾಮಗಾರಿ ಮಾತ್ರ ಆಮೆಗತಿಯಲ್ಲಿ ಸಾಗುತ್ತಿದೆ.

- ಶೇ.70ರಷ್ಟು ಕಾಮಗಾರಿ ಮಾತ್ರ ಅಂತ್ಯ । 2026ರ ಏಪ್ರಿಲ್ ಮಾಹೆಗೆ ಯೋಜನೆ ಲೋಕಾರ್ಪಣೆ ಸಾಧ್ಯತೆ

- - -

ಬಾ.ರಾ.ಮಹೇಶ್, ಚನ್ನಗಿರಿ

ಕನ್ನಡಪ್ರಭ ವಾರ್ತೆ ಚನ್ನಗಿರಿ

ಪಟ್ಟಣದ ಜನರ ಬಹುವರ್ಷಗಳ ಬೇಡಿಕೆಯಾದ ಒಳಚರಂಡಿ ವ್ಯವಸ್ಥೆಯ ಕಾಮಗಾರಿ ಕಳೆದ 30 ತಿಂಗಳಿನಿಂದ ನಡೆಯುತ್ತಿದ್ದು, ಶೇ.70ರಷ್ಟು ಕೆಲಸ ಮುಗಿದಿದೆ. ಆದರೆ, ಬಾಕಿ ಇರುವ ಶೇ.30ರಷ್ಟು ಕಾಮಗಾರಿ ಮಾತ್ರ ಆಮೆಗತಿಯಲ್ಲಿ ಸಾಗುತ್ತಿದೆ.

ಚನ್ನಗಿರಿ ಪಟ್ಟಣ ತಾಲೂಕು ಕೇಂದ್ರವಾಗಿದ್ದರೂ ಒಳಚರಂಡಿ ವ್ಯವಸ್ಥೆಗಳಿಲ್ಲದೇ ಬೀದಿ ಬದಿಯಲ್ಲಿನ ತೆರೆದ ಚರಂಡಿಗಳ ಕೆಟ್ಟ ವಾಸನೆಗಳಿಂದ ಜನತೆ ಮೂಗು ಮುಚ್ಚಿಕೊಂಡೇ ಪಟ್ಟಣದಲ್ಲಿ ಕೆಲವು ಪ್ರದೇಶಗಳಲ್ಲಿ ಸಂಚರಿಸಬೇಕಾದ ದುಸ್ಥಿತಿ ಇತ್ತು. 1999ರ ಹಿಂದಿನ ದಿನಗಳಲ್ಲಿ ಪಟ್ಟಣದ ಬಹುತೇಕ ಬಡಾವಣೆಗಳಿಂದ ಹಿಡಿದು ಪ್ರಮುಖ ರಸ್ತೆಗಳೆಲ್ಲವೂ ಮಣ್ಣಿನ ರಸ್ತೆಗಳಾಗಿದ್ದವು. ಮಳೆಗಾಲದಲ್ಲಿ ಭತ್ತ ನಾಟಿ ಕೆಸರಿನ ಗದ್ದೆಗಳಂತಾಗುತ್ತಿದ್ದವು. ಹಲವಾರು ಬಡಾವಣೆಗಳ ನಾಗರೀಕರು ಬಯಲು ಶೌಚಾಲಯವನ್ನೇ ಅವಲಂಬಿಸಿದ್ದರು.

₹86.65 ಕೋಟಿ ಬಿಡುಗಡೆ:

ಇಂತಹ ಅನಾಗರೀಕ ಪದ್ಧತಿ ಹೋಗಲಾಡಿಸಬೇಕು ಎಂಬ ವಿಚಾರ 2008ರಲ್ಲಿ ಪ್ರಥಮ ಬಾರಿಗೆ ಶಾಸಕರಾಗಿ ಗೆದ್ದ ಮಾಡಾಳು ವಿರೂಪಾಕ್ಷಪ್ಪ ಬಳಿ ಪಟ್ಟಣದ ಹಲವಾರು ಜನನಾಯಕರು ಪ್ರಸ್ತಾಪಿಸಿದ್ದರು. ಇದಕ್ಕೆ ಪರಿಹಾರವಾಗಿ ಒಳಚರಂಡಿ ವ್ಯವಸ್ಥೆ ಜಾರಿಗೊಳಿಸುವಂತೆ ಮನವಿ ಸಲ್ಲಿಸುತ್ತಲೇ ಬಂದಿದ್ದರು. ಈ ಅಗತ್ಯ ಸೌಲಭ್ಯದ ಬಗ್ಗೆ ಹೆಚ್ಚು ಗಮನಹರಿಸಿದ ಮಾಡಾಳು ವಿರೂಪಾಕ್ಷಪ್ಪ 2021ರ ಕೊನೆಯಲ್ಲಿ ಸರ್ಕಾರದ ಒಪ್ಪಿಗೆ ಪಡೆದು ₹86.65 ಕೋಟಿ ಅನುದಾನ ಸರ್ಕಾರದಿಂದ ಮಂಜೂರು ಮಾಡಿಸಿದರು. 2022ರಲ್ಲಿ ಟೆಂಡರ್ ಪ್ರಕ್ರಿಯೆ ನಡೆಸಿ, ಹೈದರಾಬಾದ್ ಮೂಲಕ ಅಯ್ಯಪ್ಪ ಇನ್‌ಫ್ರಾ ಪ್ರಾಜೆಕ್ಟ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಕಾಮಗಾರಿ ಗುತ್ತಿಗೆ ನೀಡಿದ್ದರು. 2023ರ ಮೇ ತಿಂಗಳಿನಿಂದ ಒಳಚರಂಡಿ ಯೋಜನೆ ಕಾಮಗಾರಿ ಆರಂಭಿಸಿದ್ದರು.

5,500 ಮನೆಗಳಿಗೆ ಸಂಪರ್ಕ:

ಅಂದಿನಿಂದ ಇಲ್ಲಿಯವರೆಗೆ 32 ತಿಂಗಳುಗಳೇ ಕಳೆದಿವೆ. ಈಗಾಗಲೇ ಪಟ್ಟಣದ ವ್ಯಾಪ್ತಿಯ ಎಲ್ಲ ಬಡಾವಣೆಗಳಲ್ಲಿರುವ 5,500 ಮನೆಗಳಿಗೆ ಒಳಚರಂಡಿಗೆ ಸಂಪರ್ಕ ದೊರೆಯಲಿದೆ. ಪ್ರಸ್ತುತ 3100 ಮನೆಗಳಿಗೆ ಮಿಷನ್‌ ಹೋಲ್, ಛೇಂಬರ್‌ಗಳಿಗೆ ಸಂಪರ್ಕ ಕೊಡುವವರೆಗೆ ಕೆಲಸಗಳಾಗಿವೆ. ನೆಲದಲ್ಲಿ ಪೈಪ್‌ಗಳ ಅಳವಡಿಕೆಗಾಗಿ 52 ಕಿ.ಮೀ.ವರೆಗೆ 8 ರಿಂದ 10 ಅಡಿಗಳ ಆಳದಲ್ಲಿ ಇಳಿಜಾರಿನ ಮೂಲಕ ಪೈಪ್ ಲೈನ್ ಮಾಡಬೇಕಾಗಿದೆ. ಇದರಲ್ಲಿ 41 ಕಿ.ಮೀ.ವರೆಗೆ ಪೈಪ್ ಅಳವಡಿಕೆ ಕೆಲಸ ಮುಕ್ತಾಯಗೊಂಡಿದೆ.

ಇನ್ನು ಆಯಾ ಕಟ್ಟಿನ ಪ್ರದೇಶಗಳಾದ ರಾಷ್ಟ್ರೀಯ ಹೆದ್ದಾರಿಯ 2 ಕಡೆ ಹೆದ್ದಾರಿಯನ್ನು ಕತ್ತರಿಸಿ 6ರಿಂದ 8 ಇಂಚಿನ ಪೈಪ್ ಅಳವಡಿಕೆಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಪೈಪ್ ಲೈನ್ ಮಾಡಲು ಅನುಮತಿ ನೀಡಲಿದ್ದಾರೆ. ಒಳಚರಂಡಿ ನೀರು ಸರಾಗವಾಗಿ ಹರಿಯಲು ಪಟ್ಟಣ ವ್ಯಾಪ್ತಿಯಲ್ಲಿ 4 ಕಡೆ ವೆಟರ್ವೆಲ್ (ತೇವದಬಾವಿ) ನಿರ್ಮಾಣ ಮಾಡಲು ಜಾಗ ವಶಪಡಿಸಿಕೊಳ್ಳುವ ಪ್ರಕ್ರಿಯೆ ಪ್ರಗತಿಯಲ್ಲಿದೆ.

ಅಧಿಕಾರಿ ಏನಂತಾರೆ?:

ಯೋಜನೆ ಪ್ರಗತಿ ಕುರಿತು ಒಳಚರಂಡಿ ಮಂಡಳಿಯ ಸಹಾಯಕ ಅಭಿಯಂತರ ಎನ್‌.ಗುರುದತ್‌ ಹೇಳುವಂತೆ, ಮನೆಗಳ ಶೌಚಾಲಯಗಳ ನೀರು ಸರಾಗವಾಗಿ ಹರಿಯಲು 1885 ಮಿಷನ್‌ ಹೋಲ್‌ಗಳ ನಿರ್ಮಾಣದಲ್ಲಿ ಈಗಾಗಲೇ 1310 ಮಿಷನ್‌ ಹೋಲ್‌ಗಳ ನಿರ್ಮಾಣವಾಗಿದೆ. 2026ರ ಏಪ್ರಿಲ್ ತಿಂಗಳಿನಲ್ಲಿ ಚನ್ನಗಿರಿ ಪಟ್ಟಣದ ಜನತೆಗೆ ಈ ಒಳಚರಂಡಿ ಬಳಕೆ ಮಾಡಿಕೊಳ್ಳಲು ಅರ್ಪಣೆ ಮಾಡಲಾಗುವುದು ಎಂದಿದ್ದಾರೆ.

ಕರ್ನಾಟಕ ನಗರ ನೀರು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳು ಕಾಮಗಾರಿ ಉಸ್ತುವಾರಿ ಹೊತ್ತಿದ್ದು, ಯೋಜನೆ ಜನತೆಗೆ ತಲುಪಿಸುವಲ್ಲಿ ಶ್ರಮಿಸುತ್ತಿದ್ದಾರೆ. 2026ರ ಏಪ್ರಿಲ್ ವೇಳೆಗೆ ಸದರಿ ಯೋಜನೆ ಪ್ರಯೋಜನ ಮನೆಮನೆಗೆ ಲಭಿಸುವ ಸಾಧ್ಯತೆ ಇದೆ.

- - -

(ಕೋಟ್ಸ್‌)

ಚನ್ನಗಿರಿ ಪಟ್ಟಣದ ಜನತೆಗೆ ಇದೊಂದು ಉತ್ತಮವಾದ ಯೋಜನೆಯಾಗಿದೆ. ಅಂತಿಮವಾಗಿ ಮಲೀನ ನೀರು ಶುದ್ಧೀಕರಣಗೊಳಿಸುವ 5.2 ಎಂ.ಎಲ್.ಡಿ ಸಾಮರ್ಥ್ಯದ ಶುದ್ಧೀಕರಣ ಘಟಕವನ್ನು ಗರಗ ಬಳಿ ಇರುವ ತೋಟಗಾರಿಕಾ ಇಲಾಖೆ ಫಾರಂನಲ್ಲಿ ನಿರ್ಮಾಣದ ಕಾಮಗಾರಿ ಪ್ರಗತಿಯಲ್ಲಿದೆ. ಫಾರಂನಲ್ಲಿನ ಬೆಳೆಗಳಿಗೆ ಇದೇ ನೀರನ್ನು ಬಳಕೆ ಮಾಡಿಕೊಳ್ಳಲು ಯೋಜನೆ ರೂಪುಗೊಂಡಿದೆ.

- ಎಂ.ಬಿ.ರವಿ, ಸಹಾಯಕ ಕಾರ್ಯಪಾಲಕ ಅಭಿಯಂತರ.

- - -

ಚನ್ನಗಿರಿ ಪಟ್ಟಣದಲ್ಲಿ ನಿರ್ಮಾಣ ಆಗುತ್ತಿರುವ ಒಳಚರಂಡಿ ಕಾಮಗಾರಿ ಪಟ್ಟಣದ ಜನತೆಗೆ ವರದಾನವಾಗಿದೆ. ಈ ಕಾಮಗಾರಿ ಆರಂಭಗೊಂಡು 2 ವರ್ಷಗಳು ಕಳೆಯುತ್ತಿದ್ದರೂ ಇನ್ನೂ ಪೂರ್ಣಗೊಳ್ಳುತ್ತಿಲ್ಲ. ಇದು ನಾಗರೀಕರ ದೌಭಾಗ್ಯ. ಆದಷ್ಟು ಶೀಘ್ರದಲ್ಲಿಯೇ ಈ ಕಾಮಗಾರಿ ಪೂರ್ಣಗೊಂಡು ಪಟ್ಟಣದ ಜನತೆಯ ಉಪಯೋಗಕ್ಕೆ ಅರ್ಪಣೆಯಾಗಬೇಕಾಗಿದೆ.

- ಪಿ.ಬಿ.ನಾಯಕ, ಮಾಜಿ ಸದಸ್ಯ, ಪುರಸಭೆ.

ಒಳಚರಂಡಿಯ ಮಿಷನ್ ಹೋಲ್‌ಗಳಿಗೆ ಸಂಪರ್ಕ ನೀಡಲು 3 ಇಂಚಿನ ಪೈಪ್‌ಗಳನ್ನು ಅಳವಡಿಸಿದ್ದಾರೆ. ಇದರಲ್ಲಿ ಪಟ್ಟಣದ ತ್ಯಾಜ್ಯ ಹೇಗೆ ಸರಾಗವಾಗಿ ಹೋಗುತ್ತದೆ? ಪಟ್ಟಣದ ಜನತೆಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರು ಜಾರಿಗೊಳಿಸಿದ ಈ ಒಳಚರಂಡಿ ಯೋಜನೆ ಯಾವುದೇ ತೊಂದರೆಗಳು ಎದುರಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು.

- ನಟರಾಜ ರಾಯ್ಕರ್, ವರ್ತಕ.

- - -

-14ಕೆಸಿಎನ್‌ಜಿ1:

ಮಲೀನ ನೀರು ಶುದ್ಧೀಕರಣಗೊಳಿಸುವ 5.2 ಎಂ.ಎಲ್.ಡಿ ಸಾಮರ್ಥ್ಯದ ಶುದ್ಧೀಕರಣ ಘಟಕ ಕಾಮಗಾರಿ ಪ್ರಗತಿಯಲ್ಲಿರುವುದು.