ಫಲಾನುಭವಿಗಳ ಮನೆಗೇ ಯೋಜನೆಗಳ ತಲುಪಿಸುವ ಪ್ರಾಮಾಣಿಕ ಕೆಲಸ ಮಾಡಿ

| Published : Apr 22 2025, 01:45 AM IST

ಸಾರಾಂಶ

ಸರ್ಕಾರಿ ನೌಕರರು ಮತ್ತು ಸಂಘ ಸಂಸ್ಥೆಗಳ ಪ್ರತಿನಿಧಿಗಳು ಪರಸ್ಪರ ಕೈಜೋಡಿಸಿ ಪ್ರಧಾನಮಂತ್ರಿ ಸುರಕ್ಷ ಯೋಜನೆಗೆ ನೋಂದಣಿ ಮಾಡಿಸಿ ಜನರಿಗೆ ಅನುಕೂಲ ಕಲ್ಪಿಸಿ ಕೊಡಬೇಕು

ಕನ್ನಡಪ್ರಭ ವಾರ್ತೆ ಕೆ.ಆರ್. ನಗರ ಸರ್ಕಾರದ ಯೋಜನೆಗಳನ್ನು ಸಕಾಲದಲ್ಲಿ ಅರ್ಹ ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸುವ ಪ್ರಾಮಾಣಿಕ ಕೆಲಸವನ್ನು ಅಧಿಕಾರಿಗಳು ಮಾಡಬೇಕು ಎಂದು ತಾಪಂ ಆಡಳಿತಾಧಿಕಾರಿ ಕೆ.ವಿ. ಪ್ರಭುಸ್ವಾಮಿ ಹೇಳಿದರು. ಪಟ್ಟಣದ ತಾಪಂ ಕೃಷ್ಣರಾಜೇಂದ್ರ ಸಭಾಂಗಣದಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ನಿಗದಿತ ಅವಧಿಯೊಳಗೆ ಯೋಜನೆಗಳನ್ನು ಅನುಷ್ಠಾನಗೊಳಿಸದಿದ್ದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು. ಸರ್ಕಾರಿ ನೌಕರರು ಮತ್ತು ಸಂಘ ಸಂಸ್ಥೆಗಳ ಪ್ರತಿನಿಧಿಗಳು ಪರಸ್ಪರ ಕೈಜೋಡಿಸಿ ಪ್ರಧಾನಮಂತ್ರಿ ಸುರಕ್ಷ ಯೋಜನೆಗೆ ನೋಂದಣಿ ಮಾಡಿಸಿ ಜನರಿಗೆ ಅನುಕೂಲ ಕಲ್ಪಿಸಿ ಕೊಡಬೇಕು ಎಂದು ಸಲಹೆ ನೀಡಿದರು. ಸಾಲಿಗ್ರಾಮ ಮತ್ತು ಕೆ.ಆರ್. ನಗರ ತಾಲೂಕು ವ್ಯಾಪ್ತಿಯಲ್ಲಿ ಬರುವ ಎಲ್ಲ ಅಂಗನವಾಡಿ ಕೇಂದ್ರಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದರ ಜತೆಗೆ ಸುತ್ತಮುತ್ತಲ ಪ್ರದೇಶವನ್ನು ಜತನವಾಗಿಟ್ಟುಕೊಳ್ಳಬೇಕೆಂದು ಸೂಚಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಿಂಚಿನ ಸಂಚಾರ ನಡೆಸಿ ಸರ್ಕಾರಿ ಶಾಲೆಗಳನ್ನು ಬಿಟ್ಟಿರುವ ಮಕ್ಕಳನ್ನು ಗುರುತಿಸಿ ಮರು ದಾಖಲೆ ಮಾಡಬೇತು. ಈ ವಿಚಾರದಲ್ಲಿ ನಾನು ಎಲ್ಲ ರೀತಿಯ ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದರು. ಎರಡು ತಾಲೂಕಿನ ವ್ಯಾಪ್ತಿಯ ಕೆಲವು ಗ್ರಾಮಗಳಲ್ಲಿ ಮಾದರಿ ಅಂಗನವಾಡಿ ಕೇಂದ್ರಗಳ ಕಟ್ಟಡವನ್ನು ನಿರ್ಮಾಣ ಮಾಡುತ್ತಿದ್ದರು. ಅವುಗಳು ಮೂಲ ಆಶಯಕ್ಕೆ ತದ್ವಿರುದ್ಧವಾಗಿದ್ದು, ಸಿಡಿಪಿಒ ಈ ಬಗ್ಗೆ ಗಮನ ಹರಿಸಬೇಕು ಎಂದರು.ಕೆ.ಆರ್. ನಗರ ತಾಪಂ ಇಒ ವಿ.ಪಿ. ಕುಲದೀಪ್, ಸಾಲಿಗ್ರಾಮ ತಾಪಂ ಇಒ ಎ.ಎನ್. ರವಿ, ಸಹಾಯಕ ಕೃಷಿ ನಿರ್ದೇಶಕ ಕೆ.ಜೆ. ಮಲ್ಲಿಕಾರ್ಜುನ್, ತಾಲೂಕು ಆರೋಗ್ಯಾಧಿಕಾರಿ ಡಾ.ಡಿ. ನಟರಾಜು, ಬಿಇಒ ಆರ್. ಕೃಷ್ಣಪ್ಪ, ಸಿಡಿಪಿಒ ಸಿ.ಎಂ. ಅಣ್ಣಯ್ಯ, ಜಿಪಂ ಎಇಇ ಎಲ್. ವಿನುತ್, ಸಹಾಯಕ ಪಶು ನಿರ್ದೇಶಕ ಮಂಜುನಾಥ್, ಸೆಸ್ಕ್ ಎಇಇ ಅರ್ಕೇಶ್ ಮೂರ್ತಿ, ಸಮಾಜ ಕಲ್ಯಾಣಾಧಿಕಾರಿ ಶಂಕರ್ ಮೂರ್ತಿ, ತಾಪಂ ವ್ಯವಸ್ಥಾಪಕ ಕರೀಗೌಡ ಇದ್ದರು.