ಸಾರಾಂಶ
-ಅಧಿವೇಶನದಲ್ಲಿ ಶಾಸಕ ಕಂದಕೂರ ಸರ್ಕಾರದ ವಿರುದ್ಧ ವಾಗ್ದಾಳಿ । ವಿಷಕಾರಿ ಹೊಗೆ ಸುಸೂವ ಕಾರ್ಖಾನೆಗಳ ವಿರುದ್ಧ ಕ್ರಮಕ್ಕೆ ಆಗ್ರಹ
-ಕೈಗಾರಿಕಾ ಸಚಿವರ ಗಮನಕ್ಕೆ ತಂದರೂ ಕೈಗೊಳ್ಳದ ಕ್ರಮ----
ಕನ್ನಡಪ್ರಭ ವಾರ್ತೆ ಯಾದಗಿರಿಜನಜೀವನ ಜರ್ಝರಿತಗೊಳಿಸಿರುವ ಕೆಮಿಕಲ್ ಫ್ಯಾಕ್ಟರಿಗಳನ್ನು ಸರ್ಕಾರ ಬಂದ್ ಮಾಡಿಸುತ್ತದೆಯೋ ? ಅಥವಾ ನಾವೇ ಬಲವಂತವಾಗಿ ಬಂದ್ ಮಾಡಬೇಕೋ..?
ಜಿಲ್ಲೆಯ ಗುರುಮಠಕಲ್ ಮತಕ್ಷೇತ್ರದ ಕಡೇಚೂರು-ಬಾಡಿಯಾಳ ಭಾಗದಲ್ಲಿರುವ ಕೈಗಾರಿಕಾ ಪ್ರದೇಶದಲ್ಲಿ ತ್ಯಾಜ್ಯ ವಿಲೇವಾರಿ ಘಟಕಗಳು ಹಾಗೂ ಕೆಮಿಕಲ್ ಫ್ಯಾಕ್ಟರಿಗಳಿಂದ ಹೊರಸೂಸುತ್ತಿರುವ ಗಾಳಿ ಯುವ ವಾತಾವರಣವನ್ನು ವಿಷಾನಿಲವಾಗಿಸುತ್ತಿದ್ದು ಸುತ್ತ ಹಳ್ಳಿಗಳಲ್ಲಿ ಜನ ಬದುಕುವುದೇ ಕಠಿಣವಾಗಿದೆ. ಸರ್ಕಾರಕ್ಕೆ ಅನೇಕ ಬಾರಿ ಮನವಿ ಮಾಡಿದರೂ, ಸ್ಪಂದಿಸುತ್ತಿಲ್ಲ ಎಂದು ಶಾಸಕ ಶರಣಗೌಡ ಕಂದಕೂರ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.ಬೃಹತ್ ಕೈಗಾರಿಕೆಗಳ ಸ್ಥಾಪಿಸುವುದಾಗಿ 2012-13 ರಲ್ಲಿ ಜಿಲ್ಲೆಯ ಕಡೇಚೂರು ಬಾಡಿಯಾಳ ಪ್ರದೇಶವನ್ನು ಕೈಗಾರಿಕಾ ಪ್ರದೇಶವೆಂದು ಗುರುತಿಸಿ, ಕಡೇಚೂರು, ಶೆಟ್ಟಿಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ವ್ಯಾಪ್ತಿಯ 3,232.22 ಎಕರೆ ಪ್ರದೇಶದ ಜಮೀನನ್ನು ಸರ್ಕಾರ ಸ್ವಾಧೀನಪಡಿಸಿಕೊಂಡಿತ್ತು. ನಿರೀಕ್ಷಿತ ಮಟ್ಟದಲ್ಲಿ ಅಲ್ಲಿ ಕೈಗಾರಿಕೆಗಳು ತಲೆ ಎತ್ತಲಿಲ್ಲ. ಅಂತಾರಾಷ್ಟ್ರೀಯ ಮಟ್ಟದ ಜವಳಿ ಪಾರ್ಕ್, ಕೋಕೋ ಕೋಲಾ, ಥರ್ಮಲ್ ಪವರ್ ಮುಂತಾದ ಪ್ರತಿಷ್ಠಿತ ಕಂಪನಿಗಳು ತಲೆಯೆತ್ತಿ ಜನಜೀವನ ಸುಧಾರಿಸಬಹುದು ಎಂಬುದು ಇಲ್ಲಿನವರ ವಿಚಾರ ತಲೆಕೆಳಗಾಗಿತ್ತು. 2021ರಲ್ಲಿ ಮತ್ತೆ ಫಾರ್ಮಾ ಹಬ್ ಕಾರಣವಾಯ್ತು. 3,269.29 ಎಕರೆ ಜಮೀನನ್ನು ಸ್ವಾಧೀನಕ್ಕೆ ಮುಂದಾಗಿ, ಅಧಿಸೂಚನೆ ಹೊರಡಿಸಿತ್ತು. ಆಗ ವಿರೋಧಗಳು ಆರಂಭವಾಗಿದ್ದಲ್ಲದೆ, ಕೆಲವು ವರ್ಷಗಳಿಂದ ಕೆಮಿಕಲ್ ಫ್ಯಾಕ್ಟರಿಗಳಿಂದ ಹೊರಸೂಸುವ ಗಾಳಿ ವಿಷಾನಿಲವಾಗಿ ಪರಿವರ್ತಿತಗೊಂಡು ಜನರ ಜೀವ ಹಿಂಡುತ್ತಿದೆ.
ಎರಡು ಅಧಿವೇಶನಗಳಲ್ಲಿ ಈ ಕುರಿತು ದನಿಯೆತ್ತಿದ್ದ ಶಾಸಕ ಕಂದಕೂರು, ಜನರ ಜೀವ ಉಳಿಸುವಲ್ಲಿ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ ಎಂದು ಕಿಡಿ ಕಾರಿದರು. ಈ ಹಿಂದಿನ ಅಧಿವೇಶನದಲ್ಲಿ ಸಚಿವ ಎಂ. ಸಿ. ಸುಧಾಕರ್ ಅವರ ಮೂಲಕ ಉತ್ತರ ನೀಡಿಸಿ, ಕೆಮಿಕಲ್ ಫ್ಯಾಕ್ಟರಿ ಬಂದ್ ಗೆ ಭರವಸೆ ನೀಡಿತ್ತು. ವರ್ಷಗಳುರುಳಿದರೂ ಈಡೇರಿಲ್ಲ. ಈಗ, ಮತ್ತೆ ಅಧಿವೇಶನದಲ್ಲಿ ಪ್ರಸ್ತಾಪಿಸಿದಾಗ, ಉತ್ತರ ನೀಡಬೇಕಾದ ಸಚಿವ ಎಂ. ಬಿ. ಪಾಟೀಲ್ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಪರಿಸರ ಮಂಡಳಿ ಕಂಪನಿಗಳಿಗೆ ನೋಟೀಸ್ ನೀಡಿದೆ. ಆದರೂ ಅವುಗಳು ಬಂದ್ ಮಾಡಿಲ್ಲ. ಹತ್ತಾರು ಹಳ್ಳಿಗಳ ಲಕ್ಷಾಂತರ ಜನರ ಜೀವಕ್ಕೆ ಮಾರಕವಾದ ಕೆಮಿಕಲ್ ಫ್ಯಾಕ್ಟರಿ ಸರ್ಕಾರ ಬಂದ್ ಮಾಡಿಸುತ್ತದೆಯೋ ಅಥವಾ ನಾವೇ ಬಲವಂತವಾಗಿ ಬಂದ್ ಮಾಡಿಸಬೇಕೇ ಎಂದು ಶಾಸಕ ಕಂದಕೂರು ಆಕ್ರೋಶದ ಹಿಂದಿನ ಜನಪರ ವಿಚಾರ ಅರಿತ ಸ್ಪೀಕರ್ ಯು. ಟಿ. ಖಾದರ್ ಇದಕ್ಕೆ ಉತ್ತರ ನೀಡುವಂತೆ ಸೂಚಿಸಿದಾಗ, ಸಚಿವ ಎಂ. ಬಿ. ಪಾಟೀಲ್ ಪರವಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿ, ಶಾಸಕ ಕಂದಕೂರ ಹಾಗೂ ಸಚಿವರೊಡನೆ ಸಭೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
-----13ವೈಡಿಆರ್15: ಕಡೇಚೂರು ಬಾಡಿಯಾಳ ಪ್ರದೇಶದಲ್ಲಿ ವಿಷಗಾಳಿ ಸೂಸುವ ಕೆಮಿಕಲ್ ಫ್ಯಾಕ್ಟರಿಗಳ ಬಗ್ಗೆ ಶಾಸಕ ಕಂದಕೂರು ಸದನದಲ್ಲಿ ದನಿಯೆತ್ತಿದರು.