ಸಾರಾಂಶ
-ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ವಿಶ್ವ ದರ್ಜೆ ಔಷಧ ಕಾರ್ಖಾನೆಗಳಿಂದ ಗ್ರಾಮಗಳಿಗೆ ಕುತ್ತು । -ಕ್ರಮಕ್ಕೆ ಆಗ್ರಹಿಸಿ ಕರವೇಯಿಂದ ಮನವಿ
------ಕನ್ನಡಪ್ರಭ ವಾರ್ತೆ ಯಾದಗಿರಿ
ತಾಲೂಕಿನಲ್ಲಿ ಬರುವ ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ವಿಶ್ವ ದರ್ಜೆ ಔಷಧ ಕಾರ್ಖಾನೆಗಳಿಂದ ವಿಷಪೂರಿತ ರಾಸಾಯನಿಕ ವಿಷಯುಕ್ತಗಳು ಹೊರ ಸೂಸುತ್ತಿದ್ದು, ಕಂಪನಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ ಆಗ್ರಹಿಸಿದ್ದಾರೆ.ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಹಿಂದುಳಿದ ಜಿಲ್ಲೆ ಹಾಗೂ ಅತಿ ಸಣ್ಣ ವರ್ಗದ ರೈತರನ್ನು ಹೊಂದಿರುವ ಕಡೇಚೂರ-ಬಾಡಿಯಾಳ ಕೈಗಾರಿಕಾ ಪ್ರದೇಶಕ್ಕಾಗಿ ಕೆ.ಐ.ಎ.ಡಿ.ಬಿ. ವತಿಯಿಂದ 2010-11ನೇ ಸಾಲಿನಲ್ಲಿ ಸುಮಾರು 3300 ಎಕರೆ ಜಮೀನು ಭೂಸ್ವಾಧೀನ ಪಡಿಸಿಕೊಂಡಿದ್ದು, ಈ ಪ್ರದೇಶದಲ್ಲಿ ಕೇಲವೇ ಕಾರ್ಖಾನೆಗಳನ್ನು ಆರಂಭಿಸಲಾಗಿದೆ.
ಆದರೆ, ಈ ಪ್ರದೇಶದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ವಿಷಪೂರಿತ ಕೆಮಿಕಲ್ ಕಂಪೆನಿಗಳಿಗೆ ಅನುಮತಿ ನೀಡಿದ ಪರಿಣಾಮ ವಿಷಯುಕ್ತ ರಾಸಾಯನಿಕ ಹೊರಸೂಸಿ ರಸ್ತೆ ಮೇಲೆ ಹರಿಯುತ್ತಿರುವುದರಿಂದ ವಾಯು ಮಾಲಿನ್ಯದಿಂದ ಜನ-ಜಾನುವಾರುಗಳ ಮೇಲೆ ದುರ್ವಾಸನೆಯಿಂದ ಅಡ್ಡ ಪರಿಣಾಮಗಳು ಆಗಲು ಶುರುವಾಗಿದೆ ಎಂದರು. ಈ ಕಂಪನಿಗಳ ವಿಷ ತ್ಯಾಜ್ಯವನ್ನು ಗುಡ್ಡದಂತೆ ಸೇರಿಸಿಟ್ಟಿದ್ದು, ಇದರಿಂದ ಈ ಪ್ರದೇಶವೆಲ್ಲ ವಿಷಮಯವಾಗುತ್ತಿದೆ.ಷರತ್ತುಗಳನ್ವಯ ವಿಷಾನಿಲ ದ್ರವ ಹೊರಸೂಸದಂತೆ ಕ್ರಮ ಕೈಗೊಳ್ಳಬೇಕು. ಆದರೆ, ಇದಾವುದು ಮಾಡದೇ ಜನರ ಜೀವದ ಜೊತೆ ಚೆಲ್ಲಾಟ ಆಡುತ್ತಿರುವ ಕಂಪೆನಿಗಳ ನಿರ್ಲಕ್ಷ್ಯದಿಂದಾಗಿ ಇಲ್ಲಿ ಬರುವ ಗ್ರಾಮಗಳ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇಂತಹ ವಿಷಪೂರಿತ ಕಂಪನಿಗಳು ಜಿಲ್ಲೆಗೆ ಅವಶ್ಯಕತೆ ಇರುವುದಿಲ್ಲ. ಆದರೆ, ಯಾವುದೇ ಮುನ್ನೆಚ್ಚರಿಕೆ ವಹಿಸದೇ ವಿಷಕಾರಿ ಅಂಶಗಳನ್ನು ನಮ್ಮ ಭಾಗದ ಗ್ರಾಮಗಳಿಗೆ ಎರೆಯುತ್ತಿರುವ ಈ ಕಂಪನಿಗಳಿಂದ ನಮ್ಮ ಜನರ ನಿರೀಕ್ಷೆ ಹುಸಿಯಾಗಿದೆ ಎಂದರು.
ಕಂಪನಿಗಳಿಂದ ಜಿಲ್ಲೆಯ ಜನಜೀವನ ಉನ್ನತಿ ಹೊಂದುವ ಬದಲು ಅವನತಿಗೆ ಕಾರಣವಾಗಿವೆ. ಇಂತಹ ಇನ್ನಿತರೆ ಕಂಪನಿಗಳ ಮೇಲೆ ಕ್ರಮ ಕೈಗೊಂಡು ಸರ್ಕಾರ ವಿಧಿಸಿದ ಷರತ್ತುಗಳನ್ನು ಉಲ್ಲಂಘಸಿರುವ ಕಂಪನಿ ಮಾಲೀಕರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಆಗ್ರಹಿಸಿದರು.ರಾಜಕಾರಣಿಗಳ ಸ್ವಾರ್ಥ ಹಾಗೂ ಇಚ್ಛಾಶಕ್ತಿ ಕೊರತೆ ಕಾರಣ ಇಂತಹ ಅವಘಡಗಳು ಆಗುತ್ತಿವೆ. ಆದ್ದರಿಂದ, ತಾವು ಅಧಿಕಾರಿಗಳು ಜನಹಿತ ಕಾಪಾಡಬೇಕು. ಒಂದು ವೇಳೆ ತಾವು ಕ್ರಮಕ್ಕೆ ಮುಂದಾಗದೇ ಹೋದಲ್ಲಿ ಆ ಭಾಗದ ರೈತರೊಂದಿಗೆ ಕರವೇ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ಮಾಡುವುದಾಗಿ ಮಲ್ಲು ಮಾಳಿಕೇರಿ, ಸಿದ್ದು ನಾಯಕ ಹತ್ತಿಕುಣಿ, ವಿಶ್ವಾರಾದ್ಯ ದಿಮ್ಮೆ, ಅಂಬ್ರೇಷ್ ಹತ್ತಿಮನಿ, ಸುರೇಶ ಬೆಳಗುಂದಿ, ಶರಣು ಎಲ್ಹೇರಿ, ಬಸವರಾಜ ನಾಯಕ ಸೈದಾಪೂರ, ಮೌನೇಶ ಮಾಧ್ವಾರ ಎಚ್ಚರಿಕೆ ನೀಡಿದ್ದಾರೆ.
---ಬಾಕ್ಸ್ ---- ಕಂಪನಿಗಳು :
1. ಸೂರಜ್ ಲ್ಯಾಬ್, 2. ಆದರ್ಶ್ ಫಾರ್ಮಾ, 3. ವಿದ್ಗಾಸ್, 4. ರಾಮಿಸ್, 5. ಮಯಾಶ್ ಎಂಟರ್‌ಪ್ರೈಸಸ್, 6.ಎಸ್.ಎನ್.ಪಿ ಫಾರ್ಮಾಸ್ಯುಟಿಕಲ್, 7. ಶ್ರೀವೆನ್, 8. ಸಾಯಿ ಎಂಟರ್‌ಪ್ರೈಸಸ್, 9.ಎಸ್.ವಿ.ಆರ್, 10. ಭೀಮಾ ಸೂಕ್ಷ್ಮ ರಾಸಾಯನಿಕಗಳು 11.ವಜ್ರಾಚೆಂ ತಜ್ಞ 12.ಸರ್ವಾಣಿ, 13.ಸೈನೋವಾ 14 ಸಿಐಎಲ್ ಲ್ಯಾಬ್ 15.ಸಾಲ್ವಾರ್ಟ್ 16. ತಾಯಿ ಭೂಮಿಯ ಅಪಾಯಗಳು ಮದರ್ ಅರ್ಥ ಹೆಜರಡ್ಸ್, 17.ತಾಯಿ ಭೂಮಿಯ ಇಟಿಪಿ ಮದರ್ ಅರ್ಥ ಇಟಿಪಿ 18. ಬುಲೆಫಾಲ್ ಸೇರಿದಂತೆ ವಿವಿಧ ವಿಷಕಾರಕ ಅಂಶಗಳನ್ನು ಹೊರಸುಸುತ್ತಿವೆ ಎಂದು ಕರವೇ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ ತಿಳಿಸಿದರು.-----
ಫೋಟೊ: 6ವೈಡಿಆರ್13: ಕಡೇಚೂರು ಬಾಡಿಯಾಳ ಪ್ರದೇಶದಲ್ಲಿ ಕಾರ್ಖಾನೆಗಳ ತ್ಯಾಜ್ಯ ಘಟಕ.6ವೈಡಿಆರ್14 : ಟಿ.ಎನ್. ಭೀಮುನಾಯಕ, ಕರವೇ ಜಿಲ್ಲಾಧ್ಯಕ್ಷರು, ಯಾದಗಿರಿ.