ಬಿಸಿಎಂ ವಸತಿ ನಿಲಯಗಳಿಗೆ ಭೇಟಿ ನೀಡಿದ ತಾಪಂ ಇಒ ಚಂದ್ರಶೇಖರ

| Published : Sep 03 2025, 01:01 AM IST

ಬಿಸಿಎಂ ವಸತಿ ನಿಲಯಗಳಿಗೆ ಭೇಟಿ ನೀಡಿದ ತಾಪಂ ಇಒ ಚಂದ್ರಶೇಖರ
Share this Article
  • FB
  • TW
  • Linkdin
  • Email

ಸಾರಾಂಶ

ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಬಿ. ಕಂದಕೂರ ಅವರು ಸೋಮವಾರ ತಡರಾತ್ರಿ ಪಟ್ಟಣದ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ಬಿಸಿಎಂ ಬಾಲಕರ ವಸತಿ ನಿಲಯಗಳಿಗೆ ಭೇಟಿ ನೀಡಿ, ಪರಿಶೀಲಿಸಿದರು.

ಗಜೇಂದ್ರಗಡ: ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಬಿ. ಕಂದಕೂರ ಅವರು ಸೋಮವಾರ ತಡರಾತ್ರಿ ಪಟ್ಟಣದ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ಬಿಸಿಎಂ ಬಾಲಕರ ವಸತಿ ನಿಲಯಗಳಿಗೆ ಭೇಟಿ ನೀಡಿ, ಪರಿಶೀಲಿಸಿದರು.

ಗ್ರಾಮೀಣ ಉದ್ಯೋಗ ತಾಪಂ ಸಹಾಯಕ ನಿರ್ದೇಶಕ ಬಸವರಾಜ ಬಡಿಗೇರ ಅವರ ಜೊತೆಗೂಡಿ ವಸತಿ ನಿಲಯಗಳಿಗೆ ಭೇಟಿ ನೀಡಿದ ಇಒ ಚಂದ್ರಶೇಖರ ಅವರು, ವಸತಿ ನಿಲಯಗಳ ಸ್ವಚ್ಛತೆ, ಊಟದ ವ್ಯವಸ್ಥೆ, ವಸತಿ ನಿಲಯಗಳಲ್ಲಿ ಮೂಲಭೂತ ಅವಶ್ಯಕತೆಗಳ ಪೂರೈಕೆಗಳ ಬಗ್ಗೆ ವಸತಿ ನಿಲಯದ ವಿದ್ಯಾರ್ಥಿಗಳ ಜೊತೆ ಸಮಾಲೋಚನೆ ನಡೆಸಿ ಮಾಹಿತಿ ಪಡೆದರು.

ಬಿಸಿಎಂ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳ ಕಲಿಕೆಯ ಅನುಕೂಲತೆಗೆ ರಾಜ್ಯ ಸರ್ಕಾರ ಸಕಲ ಸೌಕರ್ಯಗಳನ್ನು ಒದಗಿಸಿದೆ. ಸರ್ಕಾರದ ಈ ಅನುಕೂಲತೆಯನ್ನು ಸದುಪಯೋಗಪಡಿಸಿಕೊಂಡು ಮುಂದೆ ಬರುವ ವಿದ್ಯಾರ್ಥಿಗಳಿಗೂ ಒದಗಿಸಿಕೊಡುವ ಕೆಲಸವನ್ನು ವಸತಿ ನಿಲಯದ ವಿದ್ಯಾರ್ಥಿಗಳು ಮಾಡಬೇಕು. ವಿದ್ಯಾರ್ಥಿಗಳಾಗಿದ್ದ ವೇಳೆ ನಮಗೆಲ್ಲ ಇಂತಹ ಯಾವುದೇ ಸೌಲಭ್ಯಗಳಿರಲಿಲ್ಲ. ಇಂದು ನಿಮಗೆ ಸಕಲ ರೀತಿಯ ಸೌಲಭ್ಯಗಳಿರುವಾಗ ಓದಿನಲ್ಲಿ ಹಿಂದೆ ಬೀಳದೆ ವಸತಿ ನಿಲಯಗಳನ್ನು ಪ್ರಾರ್ಥನಾ ಕೇಂದ್ರಗಳೆಂದು ಭಾವಿಸಿ ಭಕ್ತಿಯಿಂದ ಓದಿನಲ್ಲಿ ತೊಡಗಿಕೊಂಡು ಸರ್ಕಾರದ ಉನ್ನತ ಹುದ್ದೆ ಪಡೆದುಕೊಳ್ಳಿ ಎಂದರು.

ಮೆಟ್ರಿಕ್ ಪೂರ್ವ ವಸತಿ ನಿಲಯದ ಮಕ್ಕಳಿಗೆ ಯಾವುದೇ ವಿಷಯ ಕಠಿಣವೆನಿಸಿದರೂ ದೂರವಾಣಿ ಕರೆ ಮಾಡಿದರೆ ಆ ವಿಷಯದ ಕುರಿತು ಪಾಠ ಮಾಡುವುದಾಗಿ ವಸತಿ ನಿಲಯದ ಮಕ್ಕಳಿಗೆ ಓದಿನಲ್ಲಿ ತೊಡಗುವಂತೆ ಪ್ರೇರೇಪಿಸಿದರು. ಪ್ರತಿಯೊಂದು ನಿಲಯದ ಕೊಠಡಿಗೆ ತೆರಳಿ ಕೊಠಡಿಯ ಸ್ವಚ್ಛತೆ, ಬೆಡ್ ಮತ್ತು ಕಾಟ್ ವ್ಯವಸ್ಥೆ ಪರಿಶೀಲಿಸಿದರು.

ಇದೇ ವೇಳೆ ಇಒ ಕಂದಕೂರ ಅವರಿಗೆ ವಸತಿ ನಿಲಯದ ವಿದ್ಯಾರ್ಥಿಗಳು ವಸತಿ ನಿಲಯಕ್ಕೆ ಬರುವ ರಸ್ತೆ ಹದಗೆಟ್ಟಿದ್ದು, ದುರಸ್ತಿಗೊಳಿಸುವಂತೆ ಮನವಿ ಮಾಡಿದರು. ಅಲ್ಲದೆ ಸದ್ಯ ಹಾಸ್ಟೆಲ್‌ನ ಸ್ನಾನದ ಕೊಠಡಿಯಲ್ಲಿ ಬಟ್ಟೆ ತೊಳೆದುಕೊಳ್ಳುತ್ತಿದ್ದು ಪ್ರತ್ಯೇಕವಾಗಿ ಬಟ್ಟೆ ತೊಳೆದಕೊಳ್ಳು ಕೊಠಡಿ ವ್ಯವಸ್ಥೆ ಮಾಡಿಕೊಡಿ ಎಂದು ತಿಳಿಸಿದರು.

ವಾರಕ್ಕೊಮ್ಮೆ ಚಿಕನ್ ಊಟ ಕೊಡುವಂತೆ ಇಒ ಚಂದ್ರಶೇಖರ ಬಳಿ ವಿದ್ಯಾರ್ಥಿಗಳು ಮನವಿ ಮಾಡಿಕೊಂಡರು. ಇದಕ್ಕೆ ಉತ್ತರಿಸಿದ ಇಒ ಅವರು, ಸದ್ಯ ತಿಂಗಳಿಗೆ ಒಂದು ಸಲ ಚಿಕನ್ ಊಟ ಕೊಡಲು ಅವಕಾಶವಿದೆ. ಮುಂದಿನ ದಿನಗಳಲ್ಲಿ ಸರ್ಕಾರ ಹೇಳಿದರೆ ಕೊಡುವುದಾಗಿ ತಿಳಿಸಿದರು. ಅಲ್ಲದೆ ಚಿಕನ್ ಊಟದ ಮೇಲಿರುವ ಪ್ರೀತಿ ಓದಿನಲ್ಲೂ ತೋರಿಸಿ ಅಂತ ಹಾಸ್ಯ ಚಟಾಕಿ ಸಿಡಿಸಿದರು.