ಸಾರಾಂಶ
ಬೆಳಗಾವಿ ವಿಧಾನಮಂಡಲ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಡಿ.10ರಂದು ಸುವರ್ಣ ವಿಧಾನಸೌಧಕ್ಕೆ ಟ್ರ್ಯಾಕ್ಟರ್ ಮೂಲಕ ಮುತ್ತಿಗೆ ಹಾಕಲು ಕರೆ ನೀಡಿದ್ದ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಜಿಲ್ಲಾಡಳಿತ ಶಾಕ್ ನೀಡಿದೆ. ಪ್ರತಿಭಟನೆಗೆ ಆಗಮಿಸುವ ವಾಹನಗಳನ್ನು ಬೆಳಗಾವಿ ಪ್ರವೇಶಕ್ಕೆ ನಿಷೇಧಿಸಿ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಆದೇಶ ಹೊರಡಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಳಗಾವಿ
ಬೆಳಗಾವಿ ವಿಧಾನಮಂಡಲ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಡಿ.10ರಂದು ಸುವರ್ಣ ವಿಧಾನಸೌಧಕ್ಕೆ ಟ್ರ್ಯಾಕ್ಟರ್ ಮೂಲಕ ಮುತ್ತಿಗೆ ಹಾಕಲು ಕರೆ ನೀಡಿದ್ದ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಜಿಲ್ಲಾಡಳಿತ ಶಾಕ್ ನೀಡಿದೆ. ಪ್ರತಿಭಟನೆಗೆ ಆಗಮಿಸುವ ವಾಹನಗಳನ್ನು ಬೆಳಗಾವಿ ಪ್ರವೇಶಕ್ಕೆ ನಿಷೇಧಿಸಿ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಆದೇಶ ಹೊರಡಿಸಿದ್ದಾರೆ.2ಎ ಮೀಸಲಾತಿಗೆ ಆಗ್ರಹಿಸಿ ಕೂಡಲಸಂಗಮದ ಜಯಬಸವ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಪಂಚಮಸಾಲಿ ಸಮಾಜ ಡಿ.10ರಂದು ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿತ್ತು. ಆದರೆ, ಹೋರಾಟಕ್ಕೆ ಆಗಮಿಸುವ ಟ್ರ್ಯಾಕ್ಟರ್, ಕ್ರೂಸರ್ ವಾಹನಗಳಿಗೆ ನಿರ್ಬಂಧ ಹೇರಲಾಗಿದೆ.
ಅಧಿವೇಶನ ಹಿನ್ನೆಲೆ ಸಿಎಂ, ಡಿಸಿಎಂ, ಸಚಿವರು, ಶಾಸಕರು ಮತ್ತು ಅಧಿಕಾರಿಗಳು ಆಗಮಿಸುತ್ತಿದ್ದಾರೆ. ಜೊತೆಗೆ ಅಧಿವೇಶನ ವೀಕ್ಷಣೆಗೆ ಸಾರ್ವಜನಿಕರು ಮತ್ತು ಶಾಲಾ ಮಕ್ಕಳು ಆಗಮಿಸಲಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.5 ಸಾವಿರ ರೈತರು ಟ್ರ್ಯಾಕ್ಟರ್‌ದೊಂದಿಗೆ ತೆರಳಿ, ಸಮಾಜದ ಲಕ್ಷಾಂತರ ಜನರು ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ. ಆದರೆ, ಸರ್ಕಾರ ನಮ್ಮ ಹೋರಾಟಕ್ಕೆ ಅಡ್ಡಿಪಡಿಸುತ್ತಿದೆ. ಈ ಮೊದಲು ಪೊಲೀಸ್ ಇಲಾಖೆ ಮೂಲಕ ನಮ್ಮ ಸಮಾಜದ ಜಿಲ್ಲಾ ಹಾಗೂ ತಾಲೂಕು ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಸಮಾಜದ ಮುಖಂಡರ ಮೇಲೆ ಒತ್ತಡ ಹೇರುತ್ತಿದೆ. ಈಗ ನಮ್ಮ ವಾಹನಗಳಿಗೆ ನಿಷೇಧಿಸುವ ಮೂಲಕ ಸರ್ಕಾರ ಹೋರಾಟಕ್ಕೆ ಅಡ್ಡಿಪಡಿಸುತ್ತಿದೆ. ಇದನ್ನು ನಾವು ಸಹಿಸುವುದಿಲ್ಲ. ನಾವು ಹೋರಾಟವನ್ನು ಮಾಡಿಯೇ ಮಾಡುತ್ತೇವೆ ಎಂದು ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.ಹೋರಾಟದಲ್ಲಿ ಬಿರುಕು:2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹೋರಾಟಕ್ಕೆ ಲಿಂಗಾಯತ ಪಂಚಮಸಾಲಿ ಸಮಾಜ ಸಿದ್ದತೆ ಮಾಡಿಕೊಂಡಿದೆ. ಆದರೆ, ಕೊನೆಯ ಹಂತದಲ್ಲಿ ಹೋರಾಟದಲ್ಲಿ ಸಮಾಜದ ನಾಯಕರಲ್ಲಿ ಬಿರುಕು ಮುಂದುವರಿದಿದೆ. ಕಾಂಗ್ರೆಸ್ ಶಾಸಕರು ಈ ಹೋರಾಟದಿಂದ ಅಂತರ ಕಾಯ್ದುಕೊಂಡಿದ್ದಾರೆ. ಸಚಿವರಾದ ಲಕ್ಷ್ಮೀ ಹೆಬ್ಬಾಳಕರ, ಶಿವಾನಂದ ಪಾಟೀಲ, ಶಾಸಕ ವಿಜಯಾನಂದ ಕಾಶಪ್ಪನವರ ಸೇರಿ ಕಾಂಗ್ರೆಸ್ ಶಾಸಕರು ಹೋರಾಟದಿಂದ ದೂರ ಉಳಿದಿದ್ದಾರೆ. ಶಾಸಕ ಬಸನಗೌಡ ಪಾಟೀಲ ಯತ್ನಾಳ ಸೇರಿದಂತೆ ಬಿಜೆಪಿಯ ಪಂಚಮಸಾಲಿ ನಾಯಕರು ಹೋರಾಟದ ಮುಂಚೂಣಿಯಲ್ಲಿದ್ದಾರೆ.