- ಬೋಗಳೆರಹಟ್ಟಿಯ ಟ್ರ್ಯಾಕ್ಟರ್ ಚಾಲಕ ಮಂಜಣ್ಣ ಆರೋಪಿ । ಪೋಕ್ಸೋ ಕಾಯ್ದೆ, ಅತ್ಯಾಚಾರ ಪ್ರಕರಣ ದಾಖಲು

- - -

ಕನ್ನಡಪ್ರಭ ವಾರ್ತೆ ಜಗಳೂರು

ಮದುವೆಯ ಆಮಿಷವೊಡ್ಡಿ 16 ವರ್ಷದ ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿ, ಆಕೆ ಗರ್ಭಿಣಿಯಾಗಿ ಹೆರಿಗೆಯಾಗುವವರೆಗೂ ಇಡೀ ಕೃತ್ಯ ಮುಚ್ಚಿಟ್ಟಿದ್ದ ಟ್ರ್ಯಾಕ್ಟರ್ ಚಾಲಕನೊಬ್ಬನ ಘೋರ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಜಗಳೂರು ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

ಬೋಗಳೆರಹಟ್ಟಿ ಗ್ರಾಮದ ಟ್ರ್ಯಾಕ್ಟರ್ ಚಾಲಕ ಮಂಜಣ್ಣ (30) ಬಂಧಿತ ಆರೋಪಿ. ಜಗಳೂರು ಪೊಲೀಸರು ಮಂಜಣ್ಣನನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಸದ್ಯಕ್ಕೆ ಕಾಮುಕ ಮಂಜಣ್ಣನನ್ನು ದಾವಣಗೆರೆ ಜಿಲ್ಲಾ ಕಾರಾಗೃಹಕ್ಕೆ ರವಾನಿಸಿದ್ದಾರೆ.


ಮೂಢನಂಬಿಕೆ- ದೇವಸ್ಥಾನ ಆವರಣದಲ್ಲಿ ಹೆರಿಗೆ ನೋವು!:

ಕೆಲವು ತಿಂಗಳುಗಳಿಂದ ಅಪ್ರಾಪ್ತೆಯು ತೀವ್ರ ಕೈ-ಕಾಲು ಬಾವು ಹಾಗೂ ಹೊಟ್ಟೆನೋವಿನಿಂದ ಬಳಲುತ್ತಿದ್ದಳು. ಆದರೆ, ತೀವ್ರ ಮೂಢನಂಬಿಕೆಗೆ ಒಳಗಾಗಿದ್ದ ಆಕೆಯ ಪೋಷಕರು, ಮಗಳಿಗೆ ದೆವ್ವವೋ, ಭೂತದ ಗಾಳಿ ಸೋಕಿದೆ ಎಂದು ಭಾವಿಸಿದ್ದರು. ಇದಕ್ಕಾಗಿ ಉಕ್ಕಡಗಾತ್ರಿ ಹಾಗೂ ನಾಯಕನಹಟ್ಟಿ ಬಳಿಯ ಬೋಸದೇವರಹಟ್ಟಿ ದೇವಾಲಯಗಳಿಗೆ ಮಗಳನ್ನು ಕರೆದೊಯ್ದು ಪೂಜೆ, ಹರಕೆ ಮಾಡಿಸಿ, ಆರೋಗ್ಯಕ್ಕಾಗಿ ಪ್ರಾರ್ಥಿಸಿದ್ದಾರೆ.

ದೇವಸ್ಥಾನದವರ ಸೂಚನೆಯಂತೆ ನಾಯಕನಹಟ್ಟಿಯ ಅಜ್ಜಯ್ಯನ ಗುಡಿಗೆ ಬಂದಾಗ ಬಾಲಕಿಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿದೆ. ಇದರಿಂದ ಗಾಬರಿಗೊಂಡ ಪೋಷಕರು ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಅಪ್ರಾಪ್ತೆಯ ಆರೋಗ್ಯ ತಪಾಸಣೆ ನಡೆಸಿದ್ದಾರೆ. ''''''''ಮಗಳಿಗೆ ದೆವ್ವದ ಗಾಳಿ ಸೋಕಿದೆ'''''''' ಎಂದು ನಂಬಿ ದೇವಸ್ಥಾನಗಳಿಗೆ ಅಲೆಯುತ್ತಿದ್ದ ಹೆತ್ತವರಿಗೆ, ಸರ್ಕಾರಿ ಆಸ್ಪತ್ರೆ ವೈದ್ಯರು ನೀಡಿದ ಮಾಹಿತಿ ಬರಸಿಡಿಲು ಬಡಿದಂತಾಗಿದೆ. "ನಿಮ್ಮ ಮಗಳು 9 ತಿಂಗಳ ಗರ್ಭಿಣಿ " ಎಂದು ವೈದ್ಯರು ತಿಳಿಸಿದಾಗ ಅಪ್ರಾಪ್ತೆಯ ಹೆತ್ತವರಿಗೆ ಆಘಾತ ತಂದಿದೆ. ಇದರ ಮಧ್ಯೆಯೇ ಆಸ್ಪತ್ರೆಯವರು ಪೊಲೀಸರಿಗೆ ಮಾಹಿತಿ ನೀಡುವಷ್ಟರಲ್ಲೇ ಮಧ್ಯಾಹ್ನ 4.30ರ ಸುಮಾರಿಗೆ ಅಪ್ರಾಪ್ತೆಯು ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.

- - -

(ಬಾಕ್ಸ್‌-1)

* ಮದುವೆ ಆಮಿಷವೊಡ್ಡಿ ಲೈಂಗಿಕ ದೌರ್ಜನ್ಯಅಪ್ರಾಪ್ತೆ ಮಗಳಿಗೆ ಮಗು ಜನಿಸಿದ್ದರಿಂದ ಆತಂಕಕ್ಕೊಳಗಾದ ಪೋಷಕರು ಆಕೆಯನ್ನು ಸಮಾಧಾನಪಡಿಸಿ, ವಿಚಾರಿಸಿದ್ದಾರೆ. ಆಗ ಪೋಷಕರ ಹೊಲಕ್ಕೆ ಟ್ರ್ಯಾಕ್ಟರ್ ಉಳುಮೆ ಮಾಡಲು ಬರುತ್ತಿದ್ದ ಮಂಜಣ್ಣ ಅಪ್ರಾಪ್ತೆಯೊಂದಿಗೆ ಲೈಂಗಿಕ ದೌರ್ಜನ್ಯ ನಡೆಸಿರುವುದು ಬಯಲಾಗಿದೆ. ಹೊಲಕ್ಕೆ ಬರುತ್ತಿದ್ದ ಮಂಜಣ್ಣ ಅಪ್ರಾಪ್ತೆಯೊಂದಿಗೆ ಮೊಬೈಲ್‌ನಲ್ಲಿ ನಿಕಟ ಸಂಪರ್ಕ ಬೆಳೆಸಿಕೊಂಡಿದ್ದ. 2025ರ ಆಗಸ್ಟ್-ಸೆಪ್ಟೆಂಬರ್ ಅವಧಿಯಲ್ಲಿ "ನಿನ್ನನ್ನು ಪ್ರೀತಿಸುತ್ತೇನೆ, ಮದುವೆಯಾಗುತ್ತೇನೆ " ಎಂದು ನಂಬಿಸಿದ್ದಾನೆ. ಅಪ್ರಾಪ್ತೆಯ ಪ್ರತಿರೋಧದ ನಡುವೆಯೂ ಬಲವಂತದಿಂದ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಈ ವಿಷಯ ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಹೆದರಿಸಿದ್ದರಿಂದ ಪ್ರಾಣಭಯಕ್ಕೆ ಹೆದರಿ ಇಷ್ಟು ದಿನ ವಿಷಯ ಮುಚ್ಚಿಟ್ಟಿದ್ದಾಗಿ ಅಪ್ರಾಪ್ತೆ ಪೋಷಕರಿಗೆ ತಿಳಿಸಿದ್ದಾಳೆ.

- - -

(ಬಾಕ್ಸ್‌-2)

* ಜಿಲ್ಲಾ ಜೈಲಿಗೆ ಆರೋಪಿ ಘಟನೆಗೆ ಸಂಬಂಧಿಸಿದಂತೆ ಅಪ್ರಾಪ್ತೆಯ ತಂದೆ ನೀಡಿದ ದೂರು ಆಧರಿಸಿ ಜಗಳೂರು ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ನೇತೃತ್ವದ ತಂಡ ಭಾನುವಾರ ಕಾರ್ಯಾಚರಣೆ ನಡೆಸಿ ಆರೋಪಿ ಮಂಜಣ್ಣನನ್ನು ಬಂಧಿಸಿದೆ. ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆ ಹಾಗೂ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದ್ದು, ನ್ಯಾಯಾಲಯದ ಆದೇಶದಂತೆ ಆರೋಪಿಯನ್ನು ದಾವಣಗೆರೆ ಜಿಲ್ಲಾ ಜೈಲಿಗೆ ಕಳುಹಿಸಲಾಗಿದೆ.

- - -