ಟ್ರ್ಯಾಕ್ಟರ್‌ ಪಲ್ಟಿ: 33 ಜನರಿಗೆ ಗಾಯ, ಮೂವರು ಗಂಭೀರ

| Published : Oct 13 2024, 01:10 AM IST

ಸಾರಾಂಶ

ದಸರಾ ಉತ್ಸವ ನಿಮಿತ್ತ ದೇವಿಗುಡ್ಡಕ್ಕೆ ತೆರಳಿ ದೇವರ ದರ್ಶನ ಮುಗಿಸಿಕೊಂಡು ಮರಳುತ್ತಿದ್ದ ಟ್ರ್ಯಾಕ್ಟರ್ ಪಲ್ಟಿಯಾಗಿ ಸುಮಾರು ೩೩ ಜನರು ಗಾಯಗೊಂಡ ಘಟನೆ ಪಟ್ಟಣದ ಹೊರವಲಯದ ದೇವಿಕ್ಯಾಂಪಿನ ಗುಡ್ಡದಲ್ಲಿ ಶನಿವಾರ ನಡೆದಿದೆ.

ದೇವರ ದರ್ಶನದಿಂದ ವಾಪಸ್‌ ಬರುವಾಗ ಘಟನೆ । ಸಿಂಧನೂರು ತಾಲೂಕಿನ ಜಂಬುನಾಥಹಳ್ಳಿಯ ಒಂದೇ ಕುಟುಂಬದವರು

ಕನ್ನಡಪ್ರಭ ವಾರ್ತೆ ಕಾರಟಗಿ

ದಸರಾ ಉತ್ಸವ ನಿಮಿತ್ತ ದೇವಿಗುಡ್ಡಕ್ಕೆ ತೆರಳಿ ದೇವರ ದರ್ಶನ ಮುಗಿಸಿಕೊಂಡು ಮರಳುತ್ತಿದ್ದ ಟ್ರ್ಯಾಕ್ಟರ್ ಪಲ್ಟಿಯಾಗಿ ಸುಮಾರು ೩೩ ಜನರು ಗಾಯಗೊಂಡ ಘಟನೆ ಪಟ್ಟಣದ ಹೊರವಲಯದ ದೇವಿಕ್ಯಾಂಪಿನ ಗುಡ್ಡದಲ್ಲಿ ಶನಿವಾರ ನಡೆದಿದೆ.

ಇಲ್ಲಿಗೆ ಸಮೀಪದ ೨೩ನೇ ವಾರ್ಡ್ ವ್ಯಾಪ್ತಿಯ ರತ್ನಗಿರಿ ಪರ್ವತದಲ್ಲಿ ಶರನ್ನವರಾತ್ರಿ ಉತ್ಸವದ ನಿಮಿತ್ತ ನಿತ್ಯ ಉತ್ಸವ ನಡೆಯುತ್ತಿದ್ದು, ಸಿಂಧನೂರು ತಾಲೂಕಿನ ಜಂಬುನಾಥನಹಳ್ಳಿಯಿಂದ ಒಂದು ಕುಟುಂಬಕ್ಕೆ ಸೇರಿದ ೩೩ ಜನರು ಟ್ರ್ಯಾಕ್ಟರ್‌ನಲ್ಲಿ ದೇವಸ್ಥಾನಕ್ಕೆ ಆಗಮಿಸಿದ್ದರು. ಮಹಿಳೆಯರು, ಯುವತಿಯರು ಮತ್ತು ಯುವಕರೇ ಹೆಚ್ಚಿದ್ದರು.

ದೇವರ ದರ್ಶನ, ಪ್ರಸಾದ ಸ್ವೀಕರಿಸಿ ಮರಳಿ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಭಾರಿ ಏರಿಳಿತ ಹಾಗೂ ತಿರುವು ಹೊಂದಿರುವ ದೇವಿಗುಡ್ಡದಲ್ಲಿ ಇಳಿಯುವಾಗ ಟ್ರ್ಯಾಕ್ಟರ್‌ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ತಿರುವಿನಲ್ಲಿ ಟ್ರಾಲಿ ಪಲ್ಟಿ ಹೊಡೆದಿದೆ.

ಇದರ ಪರಿಣಾಮ ೩೩ ಜನರ ಗಾಯಗೊಂಡಿದ್ದಾರೆ. ಪ್ರತ್ಯಕ್ಷದರ್ಶಿಗಳು ಮತ್ತು ದೇವಿಕ್ಯಾಂಪ್ ನಿವಾಸಿಗಳು ತಕ್ಷಣ ಅಪಘಾತದಲ್ಲಿ ಸಿಲುಕಿದವರ ರಕ್ಷಣೆ ಮಾಡಿದ್ದಾರೆ. ಕೂಡಲೇ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಗಾಯಗೊಂಡ ಎಲ್ಲರನ್ನೂ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನಿಸಿದ್ದಾರೆ. ನಂತರ ಕೆಲವರನ್ನು ಗಂಗಾವತಿ ಮತ್ತು ಸಿಂಧನೂರು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

೧೨ ಯುವಕರು ಮತ್ತು ೧೦ ಯುವತಿಯರು ಸೇರಿ ಎಲ್ಲರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಇಲ್ಲಿಯೇ ಚಿಕಿತ್ಸೆ ನೀಡಲಾಗಿದೆ. ಗಂಭೀರವಾಗಿ ಗಾಯಗೊಂಡ ೧೨ ಜನರನ್ನು ಗಂಗಾವತಿಗೆ ಕಳುಹಿಸಲಾಗಿದೆ. ಆ ಪೈಕಿ ೩ ಜನರ ಸ್ಥಿತಿ ಚಿಂತಾಜನಕವಾಗಿದ್ದು, ಇಬ್ಬರು ಹಿರಿಯ ಮಹಿಳೆಯರನ್ನು ಖಾಸಗಿ ಆಸ್ಪತ್ರೆ ಮತ್ತು ಓರ್ವ ಯುವಕನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶರನ್ನವರಾತ್ರಿಯ ಕೊನೆಯ ದಿನವಾದ ಶನಿವಾರ ಬೆಳಿಗ್ಗೆ ದೇವಿಗುಡ್ಡದಲ್ಲಿ ನಡೆಯುವ ದಸರಾ ಹಿನ್ನೆಲೆಯಲ್ಲಿ ದೇವಿಗುಡ್ಡಕ್ಕೆ ತೆರಳಿದ್ದರು. ಪ್ರಸಾದ ತೆಗೆದುಕೊಂಡ ನಂತರ ತಮ್ಮ ಸ್ವಗ್ರಾಮಕ್ಕೆ ಮರಳುವ ಸಂದರ್ಭ ಈ ಘಟನೆ ನಡೆದಿದೆ. ಅಪಘಾತಕ್ಕೀಡಾದವರೆಲ್ಲ ಸಿಂಧನೂರು ತಾಲೂಕಿನ ಜಂಭುನಾಥನಹಳ್ಳಿಯ ಒಂದೇ ಕುಟುಂಬದವರು. ಈ ಕುರಿತು ಕಾರಟಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.