ರೈತ ವಿರೋಧಿ ನೀತಿ ಖಂಡಿಸಿ ಟ್ರ್ಯಾಕ್ಟರ್ ಪೆರೇಡ್

| Published : Jan 25 2024, 02:06 AM IST

ಸಾರಾಂಶ

ಗಣತಂತ್ರದ ಸಂವಿಧಾನ ರಕ್ಷಣೆಗಾಗಿ ಆಗ್ರಹಿಸಿ, ರೈತ-ಕಾರ್ಮಿಕ ವಿರೋಧಿ ರಾಜ್ಯ ಕೃಷಿ ಕಾಯ್ದೆಗಳು ಹಾಗೂ ಕಾರ್ಮಿಕ ಕಾಯ್ದೆಗಳನ್ನು ಹಿಮ್ಮೆಟ್ಟಿಸಲು ಪರ್ಯಾಯ ಜನಪರ ನೀತಿಗಳಿಗಾಗಿ ಒತ್ತಾಯ.

ಕನಡಪ್ರಭ ವಾರ್ತೆ ಚಾಮರಾಜನಗರ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ-ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ದೇಶದಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ ಜ.26 ರಂದು ಜನತಾ ಗಣರಾಜ್ಯೋತ್ಸವ ಟ್ರಾಕ್ಟರ್ ಪೇರೇಡ್ ಏರ್ಪಡಿಸಲಾಗಿದೆ ಎಂದು ರಾಜ್ಯ ರೈತಸಂಘದ ಅಧ್ಯಕ್ಷ ಎ.ಎಂ. ಮಹೇಶ್ ಪ್ರಭು ತಿಳಿಸಿದರು.

ಟ್ರಾಕ್ಟರ್ ಪೇರೇಡ್ ಮೆರವಣಿಗೆಯು ಚಾಮರಾಜನಗರದ ಸತ್ತಿ ರಸ್ತೆ ಪ್ರವಾಸಿ ಮಂದಿರದಿಂದ ಗುಂಡ್ಲುಪೇಟೆ ಸರ್ಕಲ್, ದೊಡ್ಡ ಅಂಗಡಿ ಬೀದಿ, ಚಿಕ್ಕ ಅಂಗಡಿ ಬೀದಿ, ಸಂತೇಮರಹಳ್ಳಿ ಸರ್ಕಲ್, ಡಿವಿಯೇಷನ್ ರಸ್ತೆ, ಭುವನೇಶ್ವರಿ ವೃತ್ತ , ಬಿ.ರಾಚಯ್ಯ ಜೋಡಿ ರಸ್ತೆಯ ಮೂಲಕ ಜಿಲ್ಲಾಧಿಕಾರಿಗಳ ಕಚೇರಿವರೆಗೆ ನಡೆಯುತ್ತದೆ ಎಂದು ಬುಧವಾರ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಭವನದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ರಾಜ್ಯದ ಭೀಕರ ಬರಗಾಲವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ ಸಾಲ ಮನ್ನಾ, ವೈಜ್ಞಾನಿಕ ಬೆಳೆ ನಷ್ಟ, ಆಹಾರ-ಉದ್ಯೋಗ-ಭೂಮಿ ಹಕ್ಕು ಖಾತೆದಾರರಿಗೆ ಆಗ್ರಹಿಸಿ, ಸ್ವಾತಂತ್ರ್ಯ ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯ, ಒಕ್ಕೂಟ ರಚನೆ ಮುಂತಾದವುಗಳ ಮೇಲಿನ ಆಕ್ರಮಣ ವಿರೋಧಿಸಿ. ಧರ್ಮ ನಿರಪೇಕ್ಷ (ಜಾತ್ಯಾತೀತ), ಪ್ರಜಾಪ್ರಭುತ್ವ, ಗಣತಂತ್ರದ ಸಂವಿಧಾನ ರಕ್ಷಣೆಗಾಗಿ ಆಗ್ರಹಿಸಿ, ರೈತ-ಕಾರ್ಮಿಕ ವಿರೋಧಿ ರಾಜ್ಯ ಕೃಷಿ ಕಾಯ್ದೆಗಳು ಹಾಗೂ ಕಾರ್ಮಿಕ ಕಾಯ್ದೆಗಳನ್ನು ಹಿಮ್ಮೆಟ್ಟಿಸಲು ಪರ್ಯಾಯ ಜನಪರ ನೀತಿಗಳಿಗಾಗಿ ಒತ್ತಾಯಿಸಲಾಗುವುದು ಎಂದರು.

ರೈತರ ಉಳಿದ ಹಕ್ಕೋತ್ತಾಯಗಳಾದ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಎಂಎಸ್ಪಿ. ಕಾಯ್ದೆ ಜಾರಿ, ವಿದ್ಯುತ್ ರಂಗದ ಸಂಪೂರ್ಣ ಖಾಸಗೀಕರಣ ಹಾಗೂ ಕೃಷಿಪಂಪ್‌ ಸೆಟ್ ಗೆ ಉಚಿತ ವಿದ್ಯುತ್ ರದ್ದುಪಡಿಸುವ ವಿದ್ಯುತ್‌ ತಿದ್ದುಪಡಿ ಮಸೂದೆ ರದ್ದತಿ, ರೈತರ ಸಾಲಮನ್ನಾ ಸೇರಿ ಹಲವು ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಶಾಂತಮಲ್ಲಪ್ಪ, ಹೊನ್ನೂರು ಬಸವಣ್ಣ, ಪ್ರಧಾನ ಕಾರ್ಯದರ್ಶಿ ಭಾಸ್ಕರ್‌, ಉಪಾಧ್ಯಕ್ಷ

ಗೌಡೇಗೌಡ, ದೊಡ್ಡರಾಯಪೇಟೆ ಮಹದೇವಸ್ವಾಮಿ, ತಾಲೂಕು ಅಧ್ಯಕ್ಷ ಮಹೇಶ್‌ ಇತರರು ಇದ್ದರು.