ಬೆಳೆ ನಷ್ಟ ಪರಿಹಾರಕ್ಕೆ ಒತ್ತಾಯಿಸಿ ರೈತರಿಂದ ಟ್ರ್ಯಾಕ್ಟರ್ ರ‍್ಯಾಲಿ

| Published : Mar 06 2024, 02:16 AM IST

ಬೆಳೆ ನಷ್ಟ ಪರಿಹಾರಕ್ಕೆ ಒತ್ತಾಯಿಸಿ ರೈತರಿಂದ ಟ್ರ್ಯಾಕ್ಟರ್ ರ‍್ಯಾಲಿ
Share this Article
  • FB
  • TW
  • Linkdin
  • Email

ಸಾರಾಂಶ

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ರೈತಸಂಘ ಮತ್ತು ಹಸಿರು ಸೇನೆಯ ಜಿಲ್ಲಾ ಘಟಕದಿಂದ ನಗರದಲ್ಲಿ ಮಂಗಳವಾರ ನೂರಾರು ಟ್ರ್ಯಾಕ್ಟರ್‌ಗಳಿಂದ ಬೃಹತ್ ರ‍್ಯಾಲಿ, ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಯಿತು.

ರೈತ ಸಂಘದಿಂದ ರಸ್ತೆ ತಡೆ ನಡೆಸಿ ಹೋರಾಟ । ಕೇಂದ್ರ-ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ

ಕನ್ನಡಪ್ರಭ ವಾರ್ತೆ ಹಾವೇರಿ

ದೆಹಲಿಯಲ್ಲಿ ರೈತರ ಮೇಲಿನ ದೌರ್ಜನ್ಯ ಖಂಡಿಸಿ ಮತ್ತು ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಮಾನ್ಯತೆ, ಬೆಳೆ ನಷ್ಟ ಪರಿಹಾರ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ರೈತಸಂಘ ಮತ್ತು ಹಸಿರು ಸೇನೆಯ ಜಿಲ್ಲಾ ಘಟಕದಿಂದ ನಗರದಲ್ಲಿ ಮಂಗಳವಾರ ನೂರಾರು ಟ್ರ್ಯಾಕ್ಟರ್‌ಗಳಿಂದ ಬೃಹತ್ ರ‍್ಯಾಲಿ, ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಯಿತು.

ಸ್ಥಳೀಯ ಕಾಗಿನೆಲೆ ರಸ್ತೆಯ ಮುರುಘಾಮಠದಿಂದ ಆರಂಭಗೊಂಡ ಟ್ರ್ಯಾಕ್ಟರ್ ರ‍್ಯಾಲಿ ಗುತ್ತಲ ರಸ್ತೆ ಮೂಲಕ ಪುರಸಿದ್ದೇಶ್ವರ ದೇವಸ್ಥಾನ, ಹುಕ್ಕೇರಿಮಠ, ಎಂ.ಜಿ. ರೋಡ್, ಜೆ.ಪಿ. ವೃತ್ತ ಮೂಲಕ ಸಾಗಿ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಸಮಾವೇಶಗೊಂಡಿತು. ನಂತರ ಕೆಲಹೊತ್ತು ರಸ್ತೆ ತಡೆ ನಡೆಸಿದ ರೈತರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, ಜಿಲ್ಲೆಯಲ್ಲಿ ಬರಗಾಲ ಘೋಷಣೆ ಮಾಡಿ ಆರು ತಿಂಗಳು ಗತಿಸಿವೆ. ಕೇಂದ್ರ ಸರ್ಕಾರ ಬೆಳೆ ನಷ್ಟ ಪರಿಹಾರ ಕೊಡುವಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ. ರಾಜ್ಯ ಸರ್ಕಾರ ಕೇವಲ ₹೨ ಸಾವಿರ ಪರಿಹಾರವನ್ನು ನೆಪ ಮಾತ್ರಕ್ಕೆ ಕೊಟ್ಟಿದೆ. ಕಳೆದ ಎರಡು ವರ್ಷ ಅತಿವೃಷ್ಟಿಯಿಂದ ಬೆಳೆ ಕಳೆದುಕೊಂಡು ಕಂಗಾಲಾಗಿದ್ದ ರೈತರು ಸಾಲಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಬರ ಪರಿಹಾರ, ಬೆಳೆವಿಮೆ ಹಾಗೂ ಸಾಲ ಮನ್ನಾ ಮಾಡಿ ರೈತರಿಗೆ ಧೈರ್ಯ ತುಂಬುವಂತಹ ಕೆಲಸ ರಾಜ್ಯ ಹಾಗೂ ಕೇಂದ್ರ ಸರ್ಕಾರ ಮಾಡುತ್ತಿಲ್ಲ. ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುವ ಗುಂಗಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಹಿತ ಕಡೆಗಣಿಸಿವೆ. ಚುನಾವಣೆಯಲ್ಲಿ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.

ಈ ಹಿಂದೆ ಧ್ವಜಾರೋಹಣಕ್ಕೆ ಅವಕಾಶ ಕೊಡುವುದಿಲ್ಲ ಅಂತ ರೈತ ಸಂಘ ಎಚ್ಚರಿಕೆ ನೀಡಿದಾಗ, ಜಿಲ್ಲಾ ಉಸ್ತುವಾರಿ ಸಚಿವರು ರೈತರ ಮನವೊಲಿಸಿ, ಧರಣಿ ಕೈಬಿಡುವಂತೆ ಮಾಡಿದರು. ಆದರೆ, ನಮ್ಮ ಬೇಡಿಕೆಗಳು ಇಂದಿಗೂ ಈಡೇರಿಲ್ಲ. ಶಾಸಕರಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು. ಅವರಿಗೆ ರೈತರ ಪರ ಎಳ್ಳಷ್ಟೂ ಕಾಳಜಿ ಇಲ್ಲ. ಪರಿಹಾರ ಕೊಡಲು ಮೀನಮೇಷ ಎಣಿಸುತ್ತಿರುವ ಇಂತಹ ಭಂಡ ಸರ್ಕಾರವನ್ನು ಹಿಂದೆ ನೋಡಿರಲಿಲ್ಲ. ರಸ್ತೆಯಲ್ಲಿ ಕುಳಿತು ಧಿಕ್ಕಾರ ಕೂಗಿದ್ದು ಸಾಕು, ಇನ್ನೆನಿದ್ದರೂ ಜೈಲ್ ಭರೋ ಚಳವಳಿ ನಡೆಸಬೇಕಿದೆ ಎಂದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಪ್ರತ್ಯೇಕ ಡಿಸಿಸಿ ಬ್ಯಾಂಕ್ ಮಂಜೂರು ಮಾಡಲು ಅನೇಕ ವರ್ಷಗಳಿಂದ ಹೋರಾಟ ಮಾಡಿದರು ಪ್ರಯೋಜನವಾಗಿಲ್ಲ. ಹನಿ ನೀರಾವರಿ ಹಾಗೂ ತುಂತುರು ನೀರಾವರಿ ಮಾಡುವ ರೈತರಿಗೆ ಎನ್‌ಒಸಿ ಕೇಳುವುದನ್ನು ನಿಲ್ಲಿಸಬೇಕು. ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ನೀತಿ ಕೈಬಿಡಬೇಕು ಎಂದು ಒತ್ತಾಯಿಸಿದರು.

ಸಂಕಷ್ಟದಲ್ಲಿರುವ ರೈತರಿಗೆ ಕೃಷಿ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿ ದೆಹಲಿ ಗಡಿ ಭಾಗದಲ್ಲಿ ಚಳವಳಿ ನಿರತ ರೈತರ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು. ಚಳವಳಿ ನಿರತ ರೈತರನ್ನು ಗೌರವಿಸಬೇಕು. ಅನವಶ್ಯಕ ಕಿರುಕುಳ ಕೊಡುತ್ತಿರುವ ಕೇಂದ್ರ ಸರ್ಕಾರದ ನಿಲುವನ್ನು ನಮ್ಮ ಸಂಘಟನೆಯು ಖಂಡಿಸುತ್ತದೆ. ಈಗ ಪ್ರತಿ ಊರಿಂದ ಎರಡು ಮೂರು ಟ್ರ್ಯಾಕ್ಟರ್ ಬಂದಿವೆ. ಬೇಡಿಕೆ ಈಡೇರಿಸದಿದ್ದರೆ ಸಾವಿರಾರು ಟ್ರ್ಯಾಕ್ಟರ್ ತಂದು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಶಿವಬಸಪ್ಪ ಗೋವಿ, ರಾಜು ತರಲಗಟ್ಟ, ಅಡಿವೆಪ್ಪ ಆದಕಟ್ಟಿ, ದಿಳ್ಳೆಪ್ಪ ಮಣ್ಣೂರ, ಪ್ರಭುಗೌಡ ಪ್ಯಾಟಿ, ಮರಿಗೌಡ ಪಾಟೀಲ, ರುದ್ರಗೌಡ ಕಾಡನಗೌಡ್ರ, ಶಂಕ್ರಪ್ಪ ಶಿರಗಂಬಿ, ಗಂಗಣ್ಣ ಎಲಿ, ಮಾಲತೇಶ ಪರಪ್ಪನವರ, ಸುರೇಶ ಹೊನ್ನಪ್ಪಳವರ, ಚನ್ನಪ್ಪ ಮರಡೂರ, ಮುತ್ತಪ್ಪ ಗುಡಗೇರಿ, ಶಿವಯೋಗಿ ಹೊಸಗೌಡ್ರ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.

ರೈತರ ಹಿತ ಮರೆತ ಸರ್ಕಾರ:

ಸಿಎಂ ಸಿದ್ದರಾಮಯ್ಯ ಜಿಲ್ಲೆಗೆ ಬಂದರೂ ರೈತರ ಬಳಿ ಕುಳಿತು ಎಲ್ಲ ಸಮಸ್ಯೆಗಳನ್ನು ಹೇಳಿಕೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವರು ಅವಕಾಶ ಕೊಡಲಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಜೀವದ ಜೊತೆ ಚೆಲ್ಲಾಟವಾಡುತ್ತಿವೆ. ಬರಗಾಲದಿಂದ ಕುಡಿಯುವ ನೀರು, ಮೇವು ಸಮಸ್ಯೆಯಾಗಿದ್ದರೂ ಸರ್ಕಾರ ಗಮನ ಹರಿಸುತ್ತಿಲ್ಲ. ಜಿಲ್ಲಾಡಳಿತ ನಿಷ್ಕ್ರಿಯವಾಗಿದೆ. ಗ್ಯಾರಂಟಿ ಯೋಜನೆಗಳಲ್ಲಿ ಮುಳುಗಿರುವ ರಾಜ್ಯ ಸರ್ಕಾರ ರೈತರ ಹಿತ ಮರೆತಿದೆ. ಜಿಲ್ಲೆಯ ಶಾಸಕರು, ಸಿಎಂ ಎಚ್ಚೆತ್ತುಕೊಳ್ಳದಿದ್ದರೆ ನಿಮ್ಮ ಮನೆ, ಕಚೇರಿಗಳಿಗೆ ಬೀಗ ಜಡಿಯುತ್ತವೆ ಎಂದು ರೈತ ಮುಖಂಡ ಮಾಲತೇಶ ಪೂಜಾರ ಎಚ್ಚರಿಕೆ ನೀಡಿದರು.