ಕನಿಷ್ಠ ಬೆಂಬಲ ಬೆಲೆ ಖಾತ್ರಿಗಾಗಿ ಆಗ್ರಹಿಸಿ ಕಬ್ಬು ಬೆಳೆಗಾರರ ಸಂಘದಿಂದ ಆಗಸ್ಟ್‌ 15 ಕ್ಕೆ ಟ್ರ್ಯಾಕ್ಟರ್ ರ್‍ಯಾಲಿ

| Published : Aug 04 2024, 01:30 AM IST / Updated: Aug 04 2024, 07:34 AM IST

ಕನಿಷ್ಠ ಬೆಂಬಲ ಬೆಲೆ ಖಾತ್ರಿಗಾಗಿ ಆಗ್ರಹಿಸಿ ಕಬ್ಬು ಬೆಳೆಗಾರರ ಸಂಘದಿಂದ ಆಗಸ್ಟ್‌ 15 ಕ್ಕೆ ಟ್ರ್ಯಾಕ್ಟರ್ ರ್‍ಯಾಲಿ
Share this Article
  • FB
  • TW
  • Linkdin
  • Email

ಸಾರಾಂಶ

ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಕಾನೂನು ಜಾರಿ, ರೈತರ ಸಾಲ ಮನ್ನಾ, ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ಒತ್ತಾಯಿಸಿ ಆ.೧೫ ರಂದು ಜಿಲ್ಲಾಧಿಕಾರಿ ಕಚೇರಿ ಹಾಗೂ ತಹಸೀಲ್ದಾರ್ ಕಚೇರಿ ಎದರು ಟ್ರ್ಯಾಕ್ಟರ್ ರ್‍ಯಾಲಿ ನಡೆಸಲಾಗುವುದು ಎಂದು ಮೂಕಹಳ್ಳಿ ಮಹದೇವಸ್ವಾಮಿ ತಿಳಿಸಿದರು. 

 ಚಾಮರಾಜನಗರ :  ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಕಾನೂನು ಜಾರಿ, ರೈತರ ಸಾಲ ಮನ್ನಾ, ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ಒತ್ತಾಯಿಸಿ ಆ.15 ರಂದು ಜಿಲ್ಲಾಧಿಕಾರಿ ಕಚೇರಿ ಹಾಗೂ ತಹಸೀಲ್ದಾರ್ ಕಚೇರಿ ಎದರು ಟ್ರ್ಯಾಕ್ಟರ್ ರ್‍ಯಾಲಿ ನಡೆಸಲಾಗುವುದು ಎಂದು ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೂಕಹಳ್ಳಿ ಮಹದೇವಸ್ವಾಮಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಕಾನೂನು ಜಾರಿಯಾಗಬೇಕು, ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕು, ಸ್ವಾಮಿನಾಥನ್ ಆಯೋಗದ ವರದಿ ಜಾರಿ ಮಾಡಬೇಕು ಎಂದು ಒತ್ತಾಯಿಸಿ, ರಾಜ್ಯ ಸಂಘದ ಆದೇಶದ ಮೇರೆಗೆ ಆ.15 ರಂದು ರಾಜ್ಯಾದ್ಯಂತ ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ತಹಸೀಲ್ದಾರ್ ಕಚೇರಿ ಮುಂದೆ ಟ್ರ್ಯಾಕ್ಟರ್ ರ್‍ಯಾಲಿ ನಡೆಸಲಾಗುತ್ತಿದ್ದು, ನಗರದಲ್ಲಿ ಬೆಳಗ್ಗೆ ೧೧ ಕ್ಕೆ ಜಿಲ್ಲಾಧಿಕಾರಿ ಕಚೇರಿವರೆಗೆ ಟ್ರ್ಯಾಕ್ಟರ್ ರ್‍ಯಾಲಿ ನಡೆಸಲಾಗುವುದು ಎಂದರು.

ಕಬ್ಬು ಸರಬರಾಜು ಮಾಡಬೇಡಿ:ರೈತರ ಹಳೆ ಬಾಕಿ ಟನ್ನಿಗೆ ೧೫೦ ರು. ಕಳೆದ ವರ್ಷದ ಉಪ ಉತ್ಪನ್ನಗಳ ಲಾಭ ಹಂಚಿಕೆ, ಪ್ರಸಕ್ತ ಸಾಲಿನ ಹೆಚ್ಚುವರಿ ಕಬ್ಬಿನ ದರ, ನಿಗದಿ ಮಾಡುವ ತನಕ ಬಣ್ಣಾರಿ ಮಹದೇಶ್ವರ ಸಕ್ಕರೆ ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಬೇಡಿ. ಹೆಚ್ಚು ದರ ನೀಡುವ ಬೇರೆ ಜಿಲ್ಲೆಯ ಕಾರ್ಖಾನೆಗಳಿಗೆ ನೀಡಿ ಎಂದು ರೈತರಲ್ಲಿ ಮನವಿ ಮಾಡಿದರು.ಕಬ್ಬಿನ ಬಾಕಿ ಹಣ ಪಾವತಿಸಿ ಕಾರ್ಖಾನೆ ಆರಂಭಿಸಬೇಕು ಎಂದು ಎಚ್ಚರಿಕೆ ಸಂದೇಶ ನೀಡಿದರೂ, ಗಂಭೀರವಾಗಿ ಪರಿಗಣಿಸದೆ ಕಾರ್ಖಾನೆ ಆರಂಭಿಸಲು ಮುಂದಾಗಿರುವುದು ರೈತ ದ್ರೋಹಿ ಕಾರ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಐದು ವರ್ಷಗಳ ಹಿಂದೆ ಇದೆ ಕಾರ್ಖಾನೆ ಸಕ್ಕರೆ ಇಳುವರಿ 10.50 ತೋರಿಸುತ್ತಿತ್ತು. ಈಗ 9ಕ್ಕೆ ಇಳಿದಿದೆ. ಇದರಿಂದ ರೈತರಿಗೆ ಟನ್‌ಗೆ ೪೫೦ ರು. ಕಡಿಮೆ ಹಣ ಸಿಗುತ್ತಿದೆ ಎಂದರು. ರೈತರಿಗೆ ಉಪ ಉತ್ಪನ್ನಗಳ ಲಾಭ ಇಲ್ಲದಂತೆ ಮೋಸವಾಗುತ್ತಿದೆ. ಇದರ ಪರಿಣಾಮ ರೈತರಿಗೆ ಕಬ್ಬು ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ಕಬ್ಬಿನ ದರ ಸಿಗುತ್ತಿದೆ. ಕಬ್ಬು ಬೆಳೆ ರೈತರು ಕಾರ್ಖಾನೆಯ ಫೀಲ್ಡ್‌ಮೆನ್‌ಗಳ ಕುತಂತ್ರಕ್ಕೆ ಮರುಳಾಗದೆ ಸಂಘಟನೆಯ ತೀರ್ಮಾನವನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.ಪ್ರತಿ ವರ್ಷ ಕಾರ್ಖಾನೆಯವರು ರೈತರನ್ನು ಒಡೆದು ಆಳುವ ಮೂಲಕ ವ್ಯವಸ್ಥಿತ ವಂಚನೆ ಎಸಗುತ್ತಿದ್ದಾರೆ. ಕಬ್ಬಿನ ತೂಕದಲ್ಲಿ ರೈತರಿಗೆ ಮೋಸ ಮಾಡುತ್ತಿರುವುದನ್ನು ತಪ್ಪಿಸಲು ಕಾರ್ಖಾನೆ ಎದುರು ಸರ್ಕಾರದಿಂದ ಡಿಜಿಟಲ್ ತೂಕದ ಯಂತ್ರ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು.

ವಿದ್ಯುತ್ ಅವಘಡದಿಂದ ಸುಟ್ಟು ಹೋದ ಕಬ್ಬಿಗೆ ಕಾರ್ಖಾನೆಯವರು ಟನ್ ಕಬ್ಬಿನ ಹಣದಲ್ಲಿ 25 ಪರ್ಸೆಂಟ್ ಕಡಿತ ಮಾಡಿರುವುದನ್ನು ರೈತರಿಗೆ ವಾಪಸ್ ಕೊಡಿಸಬೇಕು. ಈಗ ಕಬ್ಬು ಕಡಿಮೆ ಇರುವ ಕಾರಣ ಸಕ್ಕರೆ ಕಾರ್ಖಾನೆಗಳು ಪೈಪೋಟಿಯಿಂದ ಕಬ್ಬು ಖರೀದಿಸಲು ಮುಂದಾಗುತ್ತಿದ್ದಾರೆ. ಈಗಾಗಲೇ ಬೇರೆ ಜಿಲ್ಲೆಯ ಕಾರ್ಖಾನೆಯವರು ಸಾಗಾಣಿಕೆ ವೆಚ್ಚ ನಾವೇ ಕೊಡುತ್ತೇವೆ ನಮಗೆ ಕೊಡಿ ಎಂದು ಹೇಳುತ್ತಿದ್ದಾರೆ. ಹೊಸದಾಗಿ ಕಬ್ಬು ಹಾಕುವ ರೈತರಿಗೆ ಎಕರೆಗೆ 8000 ಪ್ರೋತ್ಸಾಹ ಧನ ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಜಿಲ್ಲಾ ಕಾರ್ಯಾಧ್ಯಕ್ಷ ಉಡಿಗಾಲ ರೇವಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್, ಸುಂದ್ರಪ್ಪ, ಲೋಕೇಶ್ ವೀರನಪುರ ಇದ್ದರು.