ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ ಬನಹಟ್ಟಿಯಲ್ಲೇ ಪ್ರಜಾಸೌಧ ನಿರ್ಮಿಸಬೇಕೆಂಬ ಆಗ್ರಹದೊಂದಿಗೆ ಗುರುವಾರ ರೈತರ ಟ್ರ‍್ಯಾಕ್ಟರ್ ರ‍್ಯಾಲಿ ಹಾಗೂ ಶನಿವಾರ ಬಾಗಲಕೋಟೆ ಜಿಲ್ಲಾಡಳಿತ ಚಲೋ ಪಾದಯಾತ್ರೆಯ ಮೂಲಕ ಹೋರಾಟದ ಗಮನ ಸೆಳೆಯುವತ್ತ ಮುಂದಾಗಿದೆ.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಬನಹಟ್ಟಿಯಲ್ಲೇ ಪ್ರಜಾಸೌಧ ನಿರ್ಮಿಸಬೇಕೆಂಬ ಆಗ್ರಹದೊಂದಿಗೆ ಗುರುವಾರ ರೈತರ ಟ್ರ‍್ಯಾಕ್ಟರ್ ರ‍್ಯಾಲಿ ಹಾಗೂ ಶನಿವಾರ ಬಾಗಲಕೋಟೆ ಜಿಲ್ಲಾಡಳಿತ ಚಲೋ ಪಾದಯಾತ್ರೆಯ ಮೂಲಕ ಹೋರಾಟದ ಗಮನ ಸೆಳೆಯುವತ್ತ ಮುಂದಾಗಿದೆ.ಬನಹಟ್ಟಿಯಲ್ಲೇ ಪ್ರಜಾಸೌಧ ನಿರ್ಮಿಸಬೇಕೆಂಬ ಆಗ್ರಹದೊಂದಿಗೆ ಕಳೆದ 20 ದಿನಗಳಿಂದ ನಡೆಯುತ್ತಿರುವ ಹೋರಾಟ ಹೊಸ ಸ್ವರೂಪ ಪಡೆದುಕೊಂಡು ಬಲಗೊಳ್ಳುತ್ತಿದೆ. ಸರದಿ ಸತ್ಯಾಗ್ರಹವಾಗಿ ಆರಂಭಗೊಂಡ ಹೋರಾಟಕ್ಕೆ ವಿವಿಧ ಸಮಾಜ, ಸಂಘಟನೆಗಳು ಹಾಗೂ ಜನಸಾಮಾನ್ಯರು ಬೆಂಬಲ ಸೂಚಿಸುತ್ತಿದ್ದಾರೆ.
ಇಂದು ಟ್ರ‍್ಯಾಕ್ಟರ್‌ಗಳ ಬೃಹತ್ ರ‍್ಯಾಲಿ:ಗುರುವಾರ ಬೆಳಗ್ಗೆ 9 ಗಂಟೆಯಿಂದ 200ಕ್ಕೂ ಅಧಿಕ ಟ್ರ‍್ಯಾಕ್ಟರ್‌ಗಳೊಂದಿಗೆ ಸಾವಿರಾರು ರೈತರು ಪ್ರತಿಭಟನಾ ರ‍್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ರೈತ ಸಂಘಟನೆಗಳೊಂದಿಗೆ ನೇಕಾರ ಸಂಘಟನೆಗಳೂ ಕೈಜೋಡಿಸಿದ್ದು, ಉಪಖಜಾನೆಯಿಂದ ಆರಂಭವಾಗುವ ರ‍್ಯಾಲಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಸತ್ಯಾಗ್ರಹ ಸ್ಥಳವಾದ ಚೆನ್ನಮ್ಮ ವೃತ್ತಕ್ಕೆ ತಲುಪಲಿದೆ. ಬಳಿಕ ನಡೆಯುವ ಸಭೆಯಲ್ಲಿ ರೈತರು ಪ್ರಜಾಸೌಧ ನಿರ್ಮಾಣಕ್ಕೆ ಸಂಬಂಧಿಸಿದ ತಮ್ಮ ಹಕ್ಕೊತ್ತಾಯವನ್ನು ಪ್ರಬಲವಾಗಿ ಮಂಡಿಸಲಿದ್ದಾರೆ.
ಸಾವಿರ ಜನರೊಡನೆ ಜಿಲ್ಲಾಡಳಿತ ಚಲೋ:ಆ.29ರಂದು ಬೆಳಗ್ಗೆ 7 ಗಂಟೆಗೆ ಸತ್ಯಾಗ್ರಹ ಸ್ಥಳದಿಂದ ಬಾಗಲಕೋಟೆ ಜಿಲ್ಲಾಡಳಿತ ಚಲೋ ಪಾದಯಾತ್ರೆ ಆರಂಭವಾಗಲಿದೆ. ಈ ಪಾದಯಾತ್ರೆಯಲ್ಲಿ ಬನಹಟ್ಟಿ ಸೇರಿ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಜನರು ಭಾಗವಹಿಸಲಿದ್ದಾರೆ ಎಂದು ಬನಹಟ್ಟಿ ನಗರ ಅಭಿವೃದ್ಧಿ ಸಮಿತಿ ಹಾಗೂ ಪ್ರಜಾಸೌಧ ಹೋರಾಟ ಸಮಿತಿ ಅಧ್ಯಕ್ಷ ಶಂಕರ ಸೊರಗಾವಿ ತಿಳಿಸಿದ್ದಾರೆ.
ರಾಜೇಂದ್ರ ಭದ್ರನ್ನವರ ಮಾತನಾಡಿ, ಶನಿವಾರದ ಪಾದಯಾತ್ರೆಯು ಸಂಜೆ ಮುಧೋಳದಲ್ಲಿ ವಾಸ್ತವ್ಯ ಮಾಡಲಿದೆ. ಮರುದಿನ ಗದ್ದನಕೇರಿಯ ರಾಮರೂಢ ಮಠದಲ್ಲಿ ಭಾನುವಾರದ ವಾಸ್ತವ್ಯದ ಬಳಿಕ ಸೋಮವಾರ ಬೆಳಗ್ಗೆ 11 ಗಂಟೆಗೆ ಬಾಗಲಕೋಟೆ ಜಿಲ್ಲಾಡಳಿತ ಭವನ ತಲುಪಿ ಬನಹಟ್ಟಿ ಜನತೆಯ ನ್ಯಾಯಯುತ ಹಕ್ಕೊತ್ತಾಯವನ್ನು ಜಿಲ್ಲಾಡಳಿತದ ಮುಂದೆ ಮಂಡಿಸಲಾಗುವುದೆಂದು ತಿಳಿಸಿದರು.ಪಾದಯಾತ್ರೆಯಲ್ಲಿ ನಗರದ ಹಿರಿಯರೊಂದಿಗೆ ವಿವಿಧ ಸಂಘಟನೆಗಳು, ಸೇವಾ ಸಂಘಗಳ ಸದಸ್ಯರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆಂದು ಮಲ್ಲಿಕಾರ್ಜುನ ಬಾಣಕಾರ ತಿಳಿಸಿದ್ದಾರೆ.
ಪುರವಂತರ ಬೆಂಬಲ: ಬುಧವಾರ ನಡೆದ 19ನೇ ದಿನದ ಸರದಿ ಸತ್ಯಾಗ್ರಹದಲ್ಲಿ ವೀರಗಾಸೆ ಪುರವಂತರ ಸಂಘ ಹಾಗೂ ವೀರಭದ್ರೇಶ್ವರ ಗಜಾನನ ಉತ್ಸವ ಸಮಿತಿ ಸದಸ್ಯರು ಭಾಗವಹಿಸಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.ಮಹಾದೇವ ಮೋಪಗಾರ, ಶಂಕರ ಜುಂಜಪ್ಪನವರ, ಪ್ರಶಾಂತ ಕೊಳಕಿ, ಸುರೇಶ ಚಿಂಡಕ, ರಾಜು ಹಿರೇಮಠ, ಸಿದ್ಧನಗೌಡ ಪಾಟೀಲ, ಶ್ರೀಶೈಲ ದಭಾಡಿ, ಜಯವಂತ ಮಿಳ್ಳಿ, ಭದ್ರಿನಾರಾಯಣ ಭಟ್ಟಡ, ರಾಮಣ್ಣ ಭದ್ರನ್ನವರ, ಮೋಹನ ಪತ್ತಾರ, ಇರ್ಷಾದ ವಿಜಾಪೂರ, ಬಸವರಾಜ ಭದ್ರನ್ನವರ, ರಮೇಶ ಮಹಿಷವಾಡಗಿ, ಬಸವರಾಜ ಗಿಡದಾನಪ್ಪಗೋಳ ಇತರರು ಇದ್ದರು.