ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಬೀದಿ ಬದಿ ತರಕಾರಿ ವ್ಯಾಪಾರಸ್ಥರಿಗೆ ಅಟಲ್ ಬಿಹಾರಿ ವಾಜಪೇಯಿ ವೃತ್ತದಲ್ಲಿ ತರಕಾರಿ ಮಾರಾಟಕ್ಕೆ ಸ್ಥಳಾವಕಾಶ ನೀಡುವಂತೆ ಆಗ್ರಹಿಸಿ ಬೀದಿ ಬದಿ ತರಕಾರಿ ವ್ಯಾಪಾರಸ್ಥರ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಬೇಬಿ ಸಿದ್ದು ಖಂದಾರೆ ಹಾಗೂ ಜನವಾದಿ ಮಹಿಳಾ ಸಂಘಟನೆ ಜಿಲ್ಲಾಧ್ಯಕ್ಷೆ ಸುರೇಖಾ ರಜಪೂತ ಮಾತನಾಡಿ, ಬೀದಿಬದಿಯಲ್ಲಿ ಮಹಿಳೆಯರು ಹೊಟ್ಟೆಪಾಡಿಗಾಗಿ ತರಕಾರಿ ಬುಟ್ಟಿ ಇಟ್ಟುಕೊಂಡು ಚಿಲ್ಲರೆ ವ್ಯಾಪಾರ ಮಾಡುತ್ತಾರೆ. ಈ ಮೊದಲು ಶಾಸ್ತ್ರಿ ಮಾರುಕಟ್ಟೆ ಮುಂಭಾಗದಲ್ಲಿ ವ್ಯಪಾರ ನಡೆಸುತ್ತಿದ್ದ ಹಲವಾರು ವ್ಯಾಪರಸ್ಥರನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ತೆರವುಗೊಳಿಸಿದ್ದರು. ಇದರಿಂದ ತರಕಾರಿ ಮಾರಾಟಗಾರರ ಬದುಕು ಬೀದಿಗೆ ಬಿದ್ದಂತಾಗಿದೆ. ಕೂಡಲೇ ಜಿಲ್ಲಾಡಳಿತ ಅಟಲ್ ಬಿಹಾರಿ ವಾಜಪೇಯಿ ವೃತ್ತದಲ್ಲಿ ಕುಳಿತು ತರಕಾರಿ ಮಾರಾಟ ಮಾಡಲು ಅನುಮತಿ ಕೋಡಬೇಕು ಎಂದು ಒತ್ತಾಯಿಸಿದರು.ಅಲ್ಲದೇ, ಈಗಾಗಲೇ ಪಾಲಿಕೆ ಅಧಿಕಾರಿಗಳು ವ್ಯಾಪಾರಸ್ಥರ ಬುಟ್ಟಿ, ತಕ್ಕಡಿಗಳನ್ನು ಕಸಿದುಕೊಂಡು ಅವಾಚ್ಯ ಪದಗಳಿಂದ ನಿಂದನೆ ಮಾಡಿದ್ದಾರೆ. ವ್ಯಾಪಾರ ಇಲ್ಲದೇ ಕುಟುಂಬ ನಿರ್ವಹಣೆ ಕಷ್ಟವಾಗುತ್ತಿದೆ. ಇದರಿಂದ ಮಾನಸಿಕ ಹಾಗೂ ಆರ್ಥಿಕವಾಗಿ ಕಷ್ಟ ಅನುಭವಿಸುತ್ತಿದ್ದೇವೆ. ಜಿಲ್ಲಾಧಿಕಾರಿಗಳು ತರಕಾರಿ ಮಾರಾಟ ಮಾಡಲು ಸೂಕ್ತ ವ್ಯವಸ್ಥೆ ಮಾಡದೇ ಇದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.ಪ್ರತಿಭಟನೆಯಲ್ಲಿ ಭೀಮರಾಯ ಪೂಜಾರಿ, ಸುರೇಶ ಜಿ.ಬಿ, ಗಿರಿಜಾಬಾಯಿ ಕಂಬಾರ, ರೇಣುಕಾ ಸಿಂತೆ, ಗೌರಮ್ಮ ಹಿಪ್ಪರಗಿ, ಸವಿತಾ ಘಾಡಿಗೆ, ಇಂದುಬಾಯಿ ರಾಠೋಡ, ಲಕ್ಷ್ಮಿ ಪೂಜಾರಿ, ಯಮಕ್ಕ ಹಂಚಿನಾಳ, ಚಂದ್ರಭಾಗ್ಯ ಕೊಟ್ಟಲಗಿ, ಸಿದ್ದುಬಾಯಿ ಕೊಟ್ಟಲಗಿ, ಇಂದುಬಾಯಿ ಚವ್ಹಾಣ ಮತ್ತಿತರರು ಇದ್ದರು.