ಸಾರಾಂಶ
ಕೊಡಗಿನಲ್ಲಿ ನೆಲೆ ನಿಂತಿರುವ ಮಲಯಾಳಿ ಸಮಾಜದವರು ವಿಶು ಸೌರಮಾನ ಯುಗಾದಿಯನ್ನು ಸಾಂಪ್ರದಾಯಿಕವಾಗಿ ಸಡಗರ ಸಂಭ್ರಮದಿಂದ ಆಚರಿಸಿದರು.
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಕೊಡಗಿನಲ್ಲಿ ನೆಲೆ ನಿಂತಿರುವ ಮಲಯಾಳಿ ಸಮಾಜದವರು ವಿಶು ಸೌರಮಾನ ಯುಗಾದಿಯನ್ನು ಸಾಂಪ್ರದಾಯಿಕವಾಗಿ ಸಡಗರ ಸಂಭ್ರಮದಿಂದ ಆಚರಿಸಿದರು.ಕೇರಳದಲ್ಲಿ ವಿಶು ಹಬ್ಬವನ್ನು ಮಲಯಾಳಿ ಬಾಂಧವರು ಹೊಸ ವರ್ಷದ ಸೌರಮಾನ ಯುಗಾದಿಯನ್ನು ಬರಮಾಡಿಕೊಳ್ಳುವುದರಲ್ಲಿ ವಿಶೇಷ ಉತ್ಸಾಹಕತೆ, ಆಸಕ್ತಿ ಮನೆ ಮಾಡಿಕೊಳ್ಳುತ್ತಾರೆ. 13 ಮಧ್ಯರಾತ್ರಿ ಕಳೆದು 14 ರ ಸೌರಮಾನ ಯುಗಾದಿಯಲ್ಲಿ ಮಲಯಾಳಿ ಬಾಂಧವರು ಪಟಾಕಿ ಸಂಭ್ರಮಿಸುವುದು ವಾಡಿಕೆಯಾಗಿದೆ. 14 ರಂದು ವಿಶು ಹಬ್ಬದಂದು ಮನೆಯಲ್ಲಿ ಸಾಂಪ್ರದಾಯಿಕ ವಿಶು ಹಬ್ಬ ಆಚರಿಸುತ್ತಾರೆ.ಮಲಯಾಳಿ ಸಮಾಜದ ಪ್ರತಿ ಮನೆಗಳಲ್ಲೂ 14 ರಂದು ಬೆಳಗ್ಗೆ 4 ಗಂಟೆಗೆ ಮನೆಯ ಯಜಮಾನಿ ಹಾಗೂ ಮಹಿಳೆಯರು ಎದ್ದು ಮನೆಸಾರಿಸಿ ಶುಭ್ರಗೊಳಿಸಿ ಸ್ನಾನ ಮಾಡಿದ ನಂತರ ದೇವರ ಕೋಣೆಯಲ್ಲಿ ವಿಶೇಷ ಪೂಜಾ ಕೈಂಕರ್ಯ, ಶ್ರದ್ಧಾಭಕ್ತಿಯಿಂದ ದೇವರಲ್ಲಿ ಪ್ರಾರ್ಥಿಸುತ್ತಾರೆ. ಅನಂತರ ವಿಶು ಹಬ್ಬದ (ಕೊನ್ನಪೂ) ಹೊನ್ನೆಹೂ, ವಿಶು ಕಣಿಗಳಾದ (ಅಡ) ತಿಂಡಿ, ವಿವಿಧ ಬಗೆಯ ಹಣ್ಣು ಹಂಪಲು, ತರಕಾರಿ, ಧವಸಧಾನ್ಯ, ಬಾಳೆಹಣ್ಣು, ಹಲಸಿನಗುಜೆ, ಚಿನ್ನದಸರ ಹಾಗೂ ನಗದು ರು. ಗಳನ್ನು ದೇವರ ಕೋಣೆಯಲ್ಲಿ ಇರಿಸಿ ಹೊಸವರ್ಷದಿಂದ ಕುಟುಂಬ ವರ್ಗಕ್ಕೆ ಐಶ್ವರ್ಯ ಆರೋಗ್ಯ ನೆಮ್ಮದಿ ನೀಡಲೆಂದು ದೇವರಲ್ಲಿ ಪ್ರಾರ್ಥಿಸುತ್ತಾರೆ. ಅನಂತರ ಮನೆಯ ಮಂದಿಯೆಲ್ಲಾ ಸೇರಿ ದೇವರಲ್ಲಿ ಪ್ರಾರ್ಥಿಸುವುದು ವಾಡಿಕೆಯಾಗಿದೆ. ಮಧ್ಯಾಹ್ನ ವಿವಿಧ ಬಗೆಯ ಸಸ್ಯಹಾರಿ ಭೋಜನವನ್ನು ತಯಾರಿಸಿ ಮನೆ ಮಂದಿ ಹಾಗೂ ಬಂಧು ಮಿತ್ರರು ಸ್ವೀಕರಿಸುತ್ತಾರೆ. ಈ ಸಂದರ್ಭ ಹಿರಿಯರು ಕಿರಿಯರಿಗೆ ಕಿರುಕಾಣಿಕೆ, ಹಣ ನೀಡಿ ಆಶೀರ್ವದಿಸುವು ಸಾಂಪ್ರಾದಾಯಿಕವಾಗಿ ಬೆಳೆದು ಬಂದ ಪದ್ಧತಿಯಾಗಿದೆ.