21 ವರ್ಷದ ಬಳಿಕ ನಡೆಯಿತು ಸಾಂಪ್ರದಾಯಿಕ ಬಣ್ಣದೋಕುಳಿ

| Published : Apr 01 2025, 12:50 AM IST

ಸಾರಾಂಶ

ಸಂಜೀವಮೂರ್ತಿ ದೇವಸ್ಥಾನದ ಮುಂಭಾಗದಲ್ಲಿದ್ದ ಹೊಂಡವನ್ನು ಯುವಕರು ೨೧ ವರ್ಷಗಳ ಬಳಿಕ ಜೆಸಿಬಿ ಮೂಲಕ ಅಗೆಯಿಸಿ ನೀರು ಹಾಗೂ ಬಣ್ಣ ತುಂಬಿ ಬಣ್ಣದೋಕುಳಿಗೆ ಮೆರಗು

ಕನಕಗಿರಿ: 21 ವರ್ಷಗಳ ಬಳಿಕ ಇಲ್ಲಿನ ಐತಿಹಾಸಿಕ ಪ್ರಸಿದ್ಧ ಶ್ರೀಸಂಜೀವಮೂರ್ತಿ ದೇವಸ್ಥಾನ ಮುಂಭಾಗದಲ್ಲಿದ್ದ ಪುಷ್ಕರಣಿ (ಹೊಂಡ)ಯನ್ನು ತೆಗೆದು ಸಾಂಪ್ರದಾಯಿಕ ಬಣ್ಣದಾಟವನ್ನು ಪಟ್ಟಣದ ಜನತೆ ಸೋಮವಾರ ಸಂಭ್ರಮದಿಂದ ಆಡಿದರು.

ಯುಗಾದಿ ಪಾಡ್ಯದ ಮರುದಿನ ನಡೆಯುವ ಬಣ್ಣದೋಕುಳಿಯನ್ನು ಈ ಬಾರಿ ಪಟ್ಟಣದಲ್ಲಿ ವಿಭಿನ್ನವಾಗಿ ಆಚರಿಸಿದ್ದು, ಯುವಕರು ಡಿಜೆ ಸೌಂಡಗೆ ಕುಣಿದು ಸಂಭ್ರಮಿಸಿದರೆ, ಮಹಿಳೆಯರು ಸಾಮೂಹಿಕವಾಗಿ ನೃತ್ಯ ಮಾಡಿ ಖುಷಿಪಟ್ಟರು.

ಸೋಮವಾರ ಬೆಳಗ್ಗಿನಿಂದಲೇ ಚಿಕ್ಕ ಮಕ್ಕಳು ಬಣ್ಣವಾಡಲು ಆರಂಭಿಸಿದರು. ಈ ಬಾರಿ ಇಲ್ಲಿನ ಕನಕಾಚಲ ದೇವಸ್ಥಾನಕ್ಕೆ ಹೊಂದಿಕೊಂಡಿರುವ ಸಂಜೀವಮೂರ್ತಿ ದೇವಸ್ಥಾನದ ಮುಂಭಾಗದಲ್ಲಿದ್ದ ಹೊಂಡವನ್ನು ಯುವಕರು ೨೧ ವರ್ಷಗಳ ಬಳಿಕ ಜೆಸಿಬಿ ಮೂಲಕ ಅಗೆಯಿಸಿ ನೀರು ಹಾಗೂ ಬಣ್ಣ ತುಂಬಿ ಬಣ್ಣದೋಕುಳಿಗೆ ಮೆರಗು ನೀಡಿದರು.

ಇದರ ಜತೆಗೆ ನೂತನ ರಥದ ಮನೆಯ ಮುಂಭಾಗದಲ್ಲಿ ಡಿಜೆ ವ್ಯವಸ್ಥೆ ಕಲ್ಪಿಸಿದ್ದು, ಯುವಕರು ಕುಣಿದು ಕುಪ್ಪಳಿಸಿದರು. ಅಲ್ಲದೇ ಪ್ರಮುಖ ರಸ್ತೆ, ವೃತ್ತಗಳಲ್ಲಿ ಯುವಕರು ಹಲಗೆ ಬಾರಿಸಿ ಪರಸ್ಪರ ಬಣ್ಣ ಎರೆಚಿಕೊಂಡು ಕುಣಿಯುತ್ತ ಬಣ್ಣದಾಟವಾಡಿದರು. ಸಂಜೆ ಕನಕಾಚಲಪತಿಯ ಅಶ್ವಾರೋಹಣ ಉಚ್ಛಾಯ ಹನುಮಪ್ಪ ದೇವಸ್ಥಾನಕ್ಕೆ ತೆರಳಿ ಸ್ವಸ್ಥಾನಕ್ಕೆ ಆಗಮಿಸುತ್ತಿದ್ದಂತೆ ಬಣ್ಣದಾಟ ಮುಕ್ತಾಯಗೊಂಡಿತು.