ಆಧುನಿಕತೆಯ ನಡುವೆ ಸಾಂಪ್ರದಾಯಿಕ ವಾದ್ಯ ಉಳಿಸಿಕೊಳ್ಳಬೇಕು: ಸಿ.ಎ.ಶ್ರೀಧರ

| Published : Nov 06 2025, 01:15 AM IST

ಆಧುನಿಕತೆಯ ನಡುವೆ ಸಾಂಪ್ರದಾಯಿಕ ವಾದ್ಯ ಉಳಿಸಿಕೊಳ್ಳಬೇಕು: ಸಿ.ಎ.ಶ್ರೀಧರ
Share this Article
  • FB
  • TW
  • Linkdin
  • Email

ಸಾರಾಂಶ

ಶಾಸ್ತ್ರೀಯ ಸಂಗೀತದ ಭವ್ಯ ಪರಂಪರೆಯ ಉಳಿವು, ಬೆಳವಣಿಗೆ ಆಗಲು ಸರ್ಕಾರದ ಪ್ರೋತ್ಸಾಹ ಅಗತ್ಯವಿದೆ. ಧ್ವನಿ, ಶಾರೀರ ಸಂಸ್ಕರಣವನ್ನು ಯುವ ಸಂಗೀತಗಾರರು ಕಾಪಾಡಿಕೊಳ್ಳಬೇಕು. ಪ್ರಸಿದ್ಧಿಗೆ ಬಾರದ ರಾಗಗಳಲ್ಲಿ ಯುವ ಸಮುದಾಯವು ಪ್ರಯೋಗ ನಡೆಸಬೇಕು. ಪರಂಪರೆಯನ್ನು ಉಳಿಸಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಸಂಗೀತ ವಾದ್ಯಗಳಲ್ಲಿ ತಂತ್ರಜ್ಞಾನದ ನಾವಿನ್ಯತೆಯು ಹೊಕ್ಕಿದ್ದು, ಎಲೆಕ್ಟ್ರಾನಿಕ್, ಫೈಬರ್ ವಾದ್ಯಗಳು ಬಂದಿವೆ. ಸಾಂಪ್ರದಾಯಿಕ ವಾದ್ಯ ಉಳಿಸಿಕೊಂಡು ಹೋಗುವುದು ಮುಖ್ಯ ಎಂದು ವಿದ್ವಾಂಸ ಡಾ.ಸಿ.ಎ. ಶ್ರೀಧರ ಅಭಿಪ್ರಾಯಪಟ್ಟರು.

ಕರ್ನಾಟಕ ಗಾನಕಲಾ ಪರಿಷತ್ತು ಮತ್ತು ಗಾನಭಾರತಿ ವತಿಯಿಂದ ಮೈಸೂರಿನ ಕುವೆಂಪುನಗರದಲ್ಲಿರುವ ಗಾನಭಾರತಿ ರಮಾಗೋವಿಂದ ಕಲಾ ವೇದಿಕೆಯಲ್ಲಿ ಆಯೋಜಿಸಿರುವ 54ನೇ ಹಿರಿಯ ಸಂಗೀತ ವಿದ್ವಾಂಸರ ಹಾಗೂ 36ನೇ ಕಿರಿಯ ಯುವ ಸಂಗೀತ ವಿದ್ವಾಂಸರ ರಾಜ್ಯ ಸಂಗೀತ ಸಮ್ಮೇಳನದಲ್ಲಿ ಹಿರಿಯ ಸಂಗೀತ ವಿದ್ವಾಂಸರ ಸಮ್ಮೇಳನಾಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಶಾಸ್ತ್ರೀಯ ಸಂಗೀತದ ಭವ್ಯ ಪರಂಪರೆಯ ಉಳಿವು, ಬೆಳವಣಿಗೆ ಆಗಲು ಸರ್ಕಾರದ ಪ್ರೋತ್ಸಾಹ ಅಗತ್ಯವಿದೆ. ಧ್ವನಿ, ಶಾರೀರ ಸಂಸ್ಕರಣವನ್ನು ಯುವ ಸಂಗೀತಗಾರರು ಕಾಪಾಡಿಕೊಳ್ಳಬೇಕು. ಪ್ರಸಿದ್ಧಿಗೆ ಬಾರದ ರಾಗಗಳಲ್ಲಿ ಯುವ ಸಮುದಾಯವು ಪ್ರಯೋಗ ನಡೆಸಬೇಕು. ಪರಂಪರೆಯನ್ನು ಉಳಿಸಬೇಕು ಎಂದರು.

ಉತ್ತರಾಧಿ ಸಂಗೀತವು ಕಸಿಕಟ್ಟಿದ್ದಾಗಿದ್ದು, ಪರ್ಶಿಯನ್‌ ಸಂಸ್ಕೃತಿಯೊಂದಿಗೆ ಮೇಳೈಸಿದೆ. ಕರ್ನಾಟಕ ಸಂಗೀತವು ಸಂಕರಗೊಳ್ಳದೇ ಮೂಲಶಾಸ್ತ್ರೀಯ ಚೌಕಟ್ಟನ್ನು ಉಳಿಸಿಕೊಂಡಿದ್ದು, ಕಲೆಯಲ್ಲದೇ ವಿಜ್ಞಾನವೂ ಆಗಿದೆ. ಸಂಗೀತ ಪ್ರಯೋಗಗಳ ಬಗ್ಗೆ ಹೆಚ್ಚು ಸಂಶೋಧನೆಗಳು ನಡೆಯಬೇಕಿದೆ. ಕರ್ನಾಟಕ ಸಂಗೀತವು ಸಾಮವೇದದಿಂದಲೂ ಮೂಲದಾಟಿಯನ್ನು ಜತನದಿಂದ ಕಾಪಾಡಿಕೊಂಡಿದೆ. ಜಾನಪದ ಸಂಗೀತ, ವಾದ್ಯಗಳಿಂದ ಪ್ರಭಾವಿತಗೊಂಡಿದೆ. ಅಲ್ಲದೆ ಹಿಂದೂಸ್ಥಾನಿ ಸಂಗೀತದೊಂದಿಗೆ ಕೊಂಡುಕೊಳ್ವಿಕೆಯನ್ನು ಮಾಡಿದೆ ಎಂದು ಅವರು ತಿಳಿಸಿದರು.

ಚಾಲುಕ್ಯ ಚಕ್ರವರ್ತಿ ಸೋಮೇಶ್ವರ, ವಿಜಯನಗರದ ವಿದ್ಯಾರಣ್ಯರು, ಪುರಂದರದಾಸರು, ಬತ್ತೀಸ ರಾಗಗಳನ್ನು ಉಲ್ಲೇಖಿಸಿದ ಬಸವಾದಿ ಶರಣರು, ಕೀರ್ತನಕಾರರು, ನಿಜಗುಣ ಶಿವಯೋಗಿ, ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ನಡೆಸಿದ ಪ್ರಯೋಗಗಳು ಕರ್ನಾಟಕ ಸಂಗೀತವನ್ನು ಶ್ರೀಮಂತಗೊಳಿಸಿವೆ. ಅದರಂತೆ ಮುತ್ತುಸ್ವಾಮಿ ದೀಕ್ಷಿತರು, ತ್ಯಾಗರಾಜರು ಸೇರಿದಂತೆ ವಾಗ್ಗೇಯಕಾರರು ದಕ್ಷಿಣಾದಿ ಸಂಗೀತಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ ಎಂದು ವಿವರಿಸಿದರು.

ಪ್ರಾಸ್ತಾವಿಕ ಭಾಷಣ ಮಾಡಿದ ಪರಿಷತ್ತಿನ ಕಾರ್ಯಕಾರಿ ಸಮಿತಿ ಅಧ್ಯಕ್ಷ ವಿದ್ವಾನ್ ಆರ್.ಕೆ. ಪದ್ಮನಾಭ, ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯಲ್ಲಿ ಒಬ್ಬರು ಕರ್ನಾಟಕ ಸಂಗೀತ ವಿದ್ವಾಂಸರ ಹೆಸರಿಲಿಲ್ಲದೆ ಇರುವುದು ಬೇಸರದ ಸಂಗತಿ. ಸರ್ಕಾರ ಈ ಬಗ್ಗೆ ಚಿಂತನೆ ನಡೆಸಬೇಕು. ಮೊದಲು ಕರ್ನಾಟಕ ಸಂಗೀತ ವಿದ್ವಾಂಸರಿಗೆ ಹೊರ ರಾಜ್ಯ, ದೇಶಗಳಲ್ಲಿ ಆದ್ಯತೆ ಕಡಿಮೆ ಇತ್ತು. ಆದರೆ ಇಂದು ಅದು ಬದಲಾಗಿ ನಮಗೆ ಮೊದಲ ಆದ್ಯತೆ ನೀಡುತ್ತಿದ್ದಾರೆ. ಅದರ ಹಿಂದೆ ಸಾಕಷ್ಟು ವಿದ್ವಾಂಸರ ಶ್ರಮ ಅಡಗಿದೆ ಎಂದರು.

ನಮ್ಮ ಪರಿಷತ್‌ ಶ್ರೀಮಂತಿಕೆಯಿಂದ ಕೂಡಿಲ್ಲ. ಪರಿಷತ್ತಿಗೆ ಆರ್ಥಿಕ ಶ್ರೀಮಂತಿಕೆ ಇಲ್ಲದಿದ್ದರೂ ಗಾನ ಶ್ರೀಮಂತಿಕೆಯ ಇದೆ. ಸರಸ್ವತಿ ನಂಬಿದರೆ, ಲಕ್ಷ್ಮೀ ಹಿಂದೆ ಬರುತ್ತಾಳೆ ಎಂಬ ನಂಬಿಕೆಯಿಂದ ಕೆಲಸ ಮಾಡುತ್ತಿದ್ದೇವೆ. ಪ್ರತಿ ಸಮ್ಮೇಳನಕ್ಕೂ 30 - 35 ಲಕ್ಷ ಖರ್ಚಾಗುತ್ತಿದೆ. ಪ್ರತಿ ಬಾರಿ ಜೋಳಿಗೆ ಹಿಡಿದು ಕಾರ್ಯಕ್ರಮ ಏರ್ಪಡಿಸುತ್ತೇವೆ. ಹಿರಿಯರು ಹಾಕಿಕೊಟ್ಟ ಅಡಿಪಾಯದಂತೆ ಕೆಲಸ ನಡೆಯುತ್ತಿದೆ ಎಂದರು.

ಯುವ ಸಂಗೀತ ವಿದ್ವಾಂಸರ ಸಮ್ಮೇಳನಾಧ್ಯಕ್ಷ ವಿದ್ವಾನ್ ಮತ್ತೂರು ಆರ್. ಶ್ರೀನಿಧಿ ಹಾಗೂ ಲೇಖಕ ಕಬ್ಬಿನಾಲೆ ವಸಂತ ಭಾರದ್ವಾಜ್ ಮಾತನಾಡಿದರು. ಈ ವೇಳೆ ವಿದುಷಿ ಕಲಾವತಿ ಅವಧೂತ್, ಉದ್ಯಮಿ ಜಗನ್ನಾಥ ಶೆಣೈ, ಮೃದಂಗ ವಿದ್ವಾನ್ ಜಿ.ಎಸ್. ರಾಮಾನುಜನ್ ಮೊದಲಾದವರು ಇದ್ದರು.