ಸಾರಾಂಶ
ಕನ್ನಡಪ್ರಭ ವಾರ್ತೆ ಹುಣಸೂರು
ಸಮುದಾಯಗಳಲ್ಲಿನ ಪಾರಂಪರಿಕ ಜ್ಞಾನವನ್ನು ವ್ಯವಸ್ಥೆಯು ಅಲಕ್ಷಿಸಿದ್ದು, ಸಮಾಜದ ಅವನತಿಗೆ ಕಾರಣವಾಗಿದೆ ಎಂದು ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಮೋದೂರು ಮಹೇಶಾರಾಧ್ಯ ಅಭಿಪ್ರಾಯಪಟ್ಟರು.ಹುಣಸೂರು ನಗರದ ಡಿ. ದೇವರಾಜ ಅರಸು ಕಾಲೇಜಿನ ಕನ್ನಡ ವಿಭಾಗದ ಕನ್ನಡ ಸಂಘದ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ಸಾಂಪ್ರದಾಯಿಕ ಉಡುಗೆ- ತೊಡುಗೆ ಅನ್ವೇಷಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಗತ್ತು ವೈಜ್ಞಾನಿಕವಾಗಿ ಅಭಿವೃದ್ಧಿ ಹೊಂದಿದಂತೆ ಸಂಪರ್ಕ ಜಾಲವು ಯುವ ಜನಾಂಗದ ಮೇಲೆ ಅಪಾರ ಪರಿಣಾಮ ಬೀರುತ್ತಿರುವುದು ಸಹಜವಾಗಿದ್ದರೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಫೋನ್, ಫೇಸ್ ಬುಕ್ ನಂತಹ ಸಾಧನಗಳ ದಾಸುನುದಾಸರಾಗುತ್ತಾ ಪರಂಪರೆಯ ಕೊಂಡಿಯನ್ನು ಕಳಚಿಕೊಳ್ಳುತ್ತಿರುವುದು ನಿಜಕ್ಕೂ ಆತಂಕದ ವಿಷಯ ಎಂದರು.ಪರಂಪರಾನುಗತವಾಗಿ ತಮ್ಮದೇ ಆದ ರೀತಿಯಲ್ಲಿ ಬದುಕಿದ ಅಲಕ್ಷಿತ ಸಮುದಾಯಗಳು ಕೂಡ ಆಧುನಿಕ ವ್ಯವಸ್ಥೆಯು ಸೃಷ್ಟಿಸಿದ ಸವಾಲನ್ನು ಎದುರಿಸುವಲ್ಲಿ ಹೀನಾಯವಾಗಿ ಸೋತುಹೋದುದು ಇಂದಿನ ಬಹುತೇಕ ಸಮಸ್ಯೆಗಳಿಗೆ ಕಾರಣವಾಗಿದೆ ಎಂದು ವಿಷಾಧಿಸಿದರು.
ಆಧುನಿಕತೆಯ ವೃಕ್ಷದ ಬೇರುಗಳು ಪರಂಪರೆಯ ಭೂಮಿಯಲ್ಲಿ ವಿಸ್ತಾರವಾಗಿ ಹರಡಿವೆ. ಅದರ ಅರಿವು ಯುವ ಮನಸ್ಸುಗಳಿಗೆ ಅತ್ಯಂತ ಅಗತ್ಯವಾಗಿದೆ. ಮನುಷ್ಯರು ಎಷ್ಟೇ ಎತ್ತರದ ಸ್ಥಾನ ಮಾನವನ್ನು ಹೊಂದಿದರೂ ತಾವು ಬದುಕಿದ ಸಮಾಜವನ್ನು ಮತ್ತು ಸಮುದಾಯವನ್ನು ಮರೆಯಬಾರದು. ಈ ರೀತಿಯ ಮರೆವು ವ್ಯವಸ್ಥೆಯಲ್ಲಿ ಬಿರುಕನ್ನುಂಟು ಮಾಡುತ್ತದೆ. ಜಡ್ಡುಗಟ್ಟಿದ್ದ ಸಾಮಾಜಿಕ ವ್ಯವಸ್ಥೆಯ ವಿರುದ್ಧ ಬಂಡಾಯವೆದ್ದ ಹನ್ನೆರಡನೇ ಶತಮಾನದ ಶರಣರು ಜನರಲ್ಲಿ ಜ್ಞಾನ ಬಿತ್ತುವ ಮಹತ್ವದ ಕಾಯಕ ಮಾಡಿದರು. ನಡೆ ಮತ್ತು ನುಡಿಗಳ ನಡುವೆ ವ್ಯತ್ಯಾಸವಿಲ್ಲದಂತೆ ಬದುಕಿದರು. ಅವರ ಬದುಕು ಸಾರ್ವಕಾಲಿಕ ಅನುಕರಣೀಯವಾದುದು. ಆಧುನಿಕ ಜಗತ್ತಿನ ಬಹುತೇಕ ಸಮಸ್ಯೆಗಳಿಗೆ ಶರಣರ ವಚನಗಳಲ್ಲಿ ಉತ್ತರವಿದೆ. ಆದರೆ ಅವುಗಳ ಅನುಷ್ಠಾನದಲ್ಲಿ ಕೊರತೆ ಎದ್ದು ಕಾಣುತ್ತದೆ ಎಂದರು.ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಬಿ.ವಿ. ವಸಂತಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಜ್ಞಾನದಾಹಿಗಳಾಗಿ ನಾಡಿನ ಸಂಸ್ಕೃತಿ ಮತ್ತು ಪರಂಪರೆ ಉಳಿಸುವ ಮೂಲಕ ಅಭಿವೃದ್ಧಿ ಹೊಂದಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಬಿ.ಸಿ. ಸುರೇಶ್ ಮಾತನಾಡಿ, ಜಗತ್ತಿನ ಎಲ್ಲಾ ಪಾರಂಪರಿಕ ಕಲೆ ಮತ್ತು ಸಂಪ್ರದಾಯಗಳು ಕಾಲದ ಹೊಡೆತಕ್ಕೆ ಸಿಲುಕಿ ನಶಿಸಿ ಹೋಗುತ್ತಿರುವುದು ವಿಷಾದಕರ ಎಂದು ಹೇಳಿದರು.ಸಹಾಯಕ ಪ್ರಾಧ್ಯಾಪಕರಾದ ಡಾ.ಎಂ.ಆರ್. ರಾಶಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರಾಧ್ಯಾಪಕರಾದ ಡಿ.ಸಿ. ಶಿಲ್ಪ, ಆರ್. ಕುಮಾರ್, ಉಪನ್ಯಾಸಕರಾದ ಬಿ. ರಮೇಶ್, ಎಂ.ಎಂ. ಧನಲಕ್ಷ್ಮಿ, ಅವಿನಾಶ್, ಬಿ. ಸ್ವಾಮಿ, ಡಾ. ಹರೀಶ್ ಮತ್ತು ವಿದ್ಯಾರ್ಥಿಗಳಾದ ಸಹನ, ಬಸಂತ್ ಕುಮಾರ್, ಮದನ್, ಹಂಸವಿ ಮೊದಲಾದವರು ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಬೆಳೆ ಎಂಬ ಗೋಡೆ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ವಿದ್ಯಾರ್ಥಿ ವಿದ್ಯಾರ್ಥಿನಿಯರು ರಾಜ್ಯದ ವಿವಿಧ ಜಿಲ್ಲೆಗಳನ್ನು ಪ್ರತಿನಿಧಿಸುವ ಆಕರ್ಷಕ ಪಾರಂಪರಿಕ ಉಡುಗೆ ತೊಡುಗೆ ಧರಿಸಿ ಗಮನ ಸೆಳೆದರು.