12ನೇ ಶತಮಾನದ ಶಿವಶರಣರಲ್ಲಿ ತಮ್ಮ ಕಾಯಕದ ಮೂಲಕ ಸಮಾಜಕ್ಕೆ ಶ್ರೇಷ್ಠ ಸಂದೇಶ ಸಾರಿದ ಮಹನೀಯರುಗಳಲ್ಲಿ ಮೇದಾರ ಕೇತಯ್ಯ ಸಹ ಒಬ್ಬರು. ಕಾಯಕವೇ ಕೈಲಾಸ ಎಂಬ ಬಸವಣ್ಣನವರ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡು, ದುಡಿಮೆಗೆ ಗೌರವ ನೀಡಿದ ಶರಣರಲ್ಲಿ ಕೇತಯ್ಯ ಪ್ರಮುಖರು.

ಕನ್ನಡಪ್ರಭ ವಾರ್ತೆ ಹಲಗೂರು

ಯಾವುದೇ ಕೆಲಸ ಕೀಳಲ್ಲ, ಮೇಲಲ್ಲ. ಪ್ರಾಮಾಣಿಕವಾಗಿ ಮಾಡುವ ದುಡಿಮೆಗೆ ಸರ್ಕಾರದಿಂದ ಸಿಗುವ ಸೌವಲತ್ತು, ಗೌರವ ಮತ್ತು ಮಾನ್ಯತೆ ಸಿಗಬೇಕು ಎಂದು ಮ್ಯಾದರ ಸಂಘದ ಗೌರವಾಧ್ಯಕ್ಷ ರಾಘವೇಂದ್ರ ಮನವಿ ಮಾಡಿದರು.

ಹಲಗೂರಿನಲ್ಲಿ ಶಿವಶರಣ ಮೇದರ ಕೇತಯ್ಯ ಗ್ರಾಮೀಣಾಭಿವೃದ್ಧಿ ಸಂಘದಿಂದ ಭಾನುವಾರ ಆಯೋಜಿಸಿದ್ದ ಮೇದಾರ ಕೇತಯ್ಯ ಅವರ ಜನ್ಮ ದಿನಾಚರಣೆ ಪ್ರಯುಕ್ತ ಮೇದಾರ ಕೇತಯ್ಯ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

12ನೇ ಶತಮಾನದ ಶಿವಶರಣರಲ್ಲಿ ತಮ್ಮ ಕಾಯಕದ ಮೂಲಕ ಸಮಾಜಕ್ಕೆ ಶ್ರೇಷ್ಠ ಸಂದೇಶ ಸಾರಿದ ಮಹನೀಯರುಗಳಲ್ಲಿ ಮೇದಾರ ಕೇತಯ್ಯ ಸಹ ಒಬ್ಬರು. ಕಾಯಕವೇ ಕೈಲಾಸ ಎಂಬ ಬಸವಣ್ಣನವರ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡು, ದುಡಿಮೆಗೆ ಗೌರವ ನೀಡಿದ ಶರಣರಲ್ಲಿ ಕೇತಯ್ಯ ಪ್ರಮುಖರು ಎಂದರು.

ಅಂದಿನ ಸಮಾಜದಲ್ಲಿ ಜಾತಿ, ಮೇಲು-ಕೀಳು, ಅಸಮಾನತೆ ಮತ್ತು ಮೂಢನಂಬಿಕೆಗಳು ಬೇರೂರಿದ್ದವು. ಬಸವಣ್ಣನವರ ನೇತೃತ್ವದ ಶರಣ ಚಳವಳಿಯು ಸಮಾನತೆ, ಮಾನವೀಯತೆ ಮತ್ತು ಕಾಯಕದ ಮಹತ್ವವನ್ನು ಸಾರಿತು. ಈ ಶರಣ ಪರಂಪರೆಯಲ್ಲಿ ಮೇದಾರ ಕೇತಯ್ಯನವರ ಕೊಡುಗೆ ಮಹತ್ವದ್ದಾಗಿದೆ ಎಂದರು.

ಕೇತಯ್ಯನವರು ತಮ್ಮ ವೃತ್ತಿಯನ್ನು ಕೀಳಾಗಿ ಕಾಣದೆ ಪ್ರಾಮಾಣಿಕವಾಗಿ ದುಡಿದು ಬದುಕುವ ಮೂಲಕ ಸಮಾಜಕ್ಕೆ ಮಾದರಿಯಾದರು. ಇಂದಿನ ಯುವಜನರು ಮೇದಾರ ಕೇತಯ್ಯನವರ ಆದರ್ಶಗಳನ್ನು ತಿಳಿದುಕೊಳ್ಳುವುದು ಬಹಳ ಅಗತ್ಯ. ಶಿಕ್ಷಣ, ಉದ್ಯೋಗ, ಸಮಾಜ ಸೇವೆ ಮತ್ತು ಸಂಘಟನೆಯ ಮೂಲಕ ನಮ್ಮ ಸಮಾಜವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕು. ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಶರಣರ ವಿಚಾರಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಬೇಕು ಎಂದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಎಂ.ರವಿ, ಗೌರವ ಅಧ್ಯಕ್ಷ ರಾಘು, ಸದಸ್ಯರಾದ ಲಕ್ಷ್ಮಮ್ಮ, ಜಯಲಕ್ಷ್ಮಿ, ಚಂದ್ರು, ಗಿರಿದಾಸಯ್ಯ, ನಾಗರತ್ನ, ಮಹದೇವ, ಸಿದ್ದರಾಜಮ್ಮ, ನಾಗಮ್ಮ, ಯೋಗೇಶ್, ಸೇರಿದಂತೆ ಹಲವರು ಇದ್ದರು.