ಸಾರಾಂಶ
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಗಾಂಧೀಜಿಯವರ ಅಹಿಂಸೆ ತತ್ವದಿಂದಲೇ ಭಾರತಕ್ಕೆ ಸ್ವಾತಂತ್ರ್ಯ ದೊರಕಿದ್ದು, ಅಹಿಂಸಾ ಪರಮೋಧರ್ಮ ಮೂಲ ತತ್ವದ ಜೈನ ಧರ್ಮದ ಆಚರಣೆಯ ಪ್ರೇರಣೆಯೇ ಮಹಾತ್ಮ ಗಾಂಧೀಜಿಯಲ್ಲಿತ್ತು. ಜೈನ ಧರ್ಮದ ಆಚಾರ ವಿಚಾರಗಳು ಬಹಳ ಪುರಾತನವಾದವುಗಳು, ಅವುಗಳ ಆಚರಣೆಯಿಂದ ಸರ್ವರು ನೆಮ್ಮದಿಯ ಜೀವನ ಸಾಗಿಸಲು ಸಾಧ್ಯವಿದೆ ಎಂದು ಜಮಖಂಡಿ ಕ್ಷೇತ್ರದ ಮಾಜಿ ಶಾಸಕ ಆನಂದ ನ್ಯಾಮಗೌಡ ಹೇಳಿದರು.ತಾಲೂಕಿನ ಹಳಿಂಗಳ ಭದ್ರಗಿರಿ ಬೆಟ್ಟದಲ್ಲಿ 9 ದಿನಗಳಿಂದ ಹಮ್ಮಿಕೊಂಡ ಸಂಸ್ಕಾರ ಶಿಬಿರದಲ್ಲಿ ಭಾನುವಾರ ಭಾಗವಹಿಸಿ ಅವರು ಮಾತನಾಡಿದರು. ಚಿಕ್ಕಮಕ್ಕಳಿಗೆ ಧರ್ಮಗುರುಗಳಾದ ಜೈನಮುನಿ ಆಚಾರ್ಯರತ್ನ ಕುಲರತ್ನಭೂಷಣರ ನೇತೃತ್ವದಲ್ಲಿ ಸಂಸ್ಕಾರ ಶಿಬಿರ ಜರುಗಿದ್ದು ನಿಜಕ್ಕೂ ಸಂತಸದ ವಿಷಯ. ಸಂಸ್ಕಾರ ಮಕ್ಕಳಿಗೆ ದೊರಕಿದರೆ ಮುಂದಿನ ನೂರು ವರ್ಷ ಅದು ಅಳಿಯದು. ಸಮುದಾಯ ಸೇರಿದಂತೆ ಈ ಪ್ರದೇಶದ ಎಲ್ಲರಲ್ಲೂ ಅಹಿಂಸೆ, ತ್ಯಾಗ ಮತ್ತು ಮನೋನಿಗ್ರಹಗಳು ಸಾಕಾರಗೊಂಡು ನೆಮ್ಮದಿಯ ನೆಲಿವೀಡಾಗಲಿದೆ ಎಂದರು.ದೇವಲ ದೇಸಾಯಿ ಮಾತನಾಡಿ, ಇಂತಹ ಸಂಸ್ಕಾರ ಶಿಬಿರಗಳು ಪ್ರತಿ ವರ್ಷ ಜರುಗಿದರೆ ಮಕ್ಕಳಲ್ಲಿ ಮತ್ತು ಪಾಲಕರಲ್ಲಿ ಉತ್ತಮ ಬಾಂಧವ್ಯ ಬೆಳೆಯುತ್ತದೆ ಎಂದರು.ಆಚಾರ್ಯ ಕುಲರತ್ನ ಭೂಷಣ ಮುನಿ ಮಹಾರಾಜರು ಆಶೀರ್ವಚನ ನೀಡಿ, ಅಹಿಂಸೆಯ ಆಚರಣೆ ವೀರರ ಮತ್ತು ಉದಾತ್ತ ಗುಣದವರಿಂದ ಮಾತ್ರ ಸಾಧ್ಯ. ತ್ಯಾಗದಿಂದ ಸಂತೋಷ ಉಂಟಾದರೆ, ಮನೋನಿಗ್ರಹದಿಂದ ಅಪರಾಧ, ಮನಸ್ತಾಪಗಳು ನಶಿಸಿ ಎಲ್ಲರಲ್ಲಿಯೂ ಸೌಹಾರ್ದತೆ ಮತ್ತು ನಂಬಿಕೆ ಭರಿತ ನೆಮ್ಮದಿಯ ಜೀವನ ನಿರ್ವಹಣೆ ಸಾಧ್ಯವಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಜೈನ ಸಮಾಜದ ನೂರಾರು ಹಿರಿಯರು ಸೇರಿದಂತೆ ಅನೇಕ ಶ್ರಾವಕ ಶ್ರಾವಕಿಯರು ಇದ್ದರು.