ಸಾರಾಂಶ
ಬೆಂಗಳೂರು : ನಗರದ ಸಂಚಾರ ಪೊಲೀಸರು ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆ ಕುರಿತು ಜಾಗೃತಿ ಮೂಡಿಸಲು ಹಮ್ಮಿಕೊಂಡಿದ್ದ ಸ್ಟೂಡೆಂಟ್ಸ್ ಅಸೋಸಿಯೇಷನ್ ಫಾರ್ ರೋಡ್ ಸೇಫ್ಟಿ(ಎಸ್‌ಎಆರ್‌ಎಸ್) ವಿಶೇಷ ಅಭಿಯಾನ ಗುರುವಾರ ಅಂತ್ಯಗೊಂಡಿತು.
ಐದು ದಿನಗಳ ಕಾಲ ನಡೆದ ಈ ವಿಶೇಷ ಅಭಿಯಾನದಲ್ಲಿ ಸಂಚಾರ ಪೊಲೀಸರು ನಗರದ 566 ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿದ್ದು, 1,56,769 ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಈ ವಿಶೇಷ ಅಭಿಯಾನದ ವೇಳೆ ಶಿಕ್ಷಣ ಸಂಸ್ಥೆಗಳಲ್ಲಿ ಸಂವಾದ, ಕಾರ್ಯಾಗಾರಗಳು, ಪ್ರಾಯೋಗಿಕ ಪ್ರದರ್ಶನಗಳನ್ನು ನಡೆಸಿದ್ದಾರೆ.
ಸಂಚಾರ ಪೊಲೀಸ್ ವಿಭಾಗದ ಪರಿಣಿತ ಅಧಿಕಾರಿಗಳು ಪಾದಾಚಾರಿ ಸುರಕ್ಷತೆ, ಸಂಚಾರ ನಿಯಮಗಳು, ಹೆಲ್ಮೆಟ್ ಅಗತ್ಯತೆ, ಸೀಟ್ ಬೆಲ್ಟ್ ಬಳಕೆ ಹಾಗೂ ವಿಚಲಿತ ಚಾಲನೆಯ ಅಪಾಯಗಳಂತಹ ಅಗತ್ಯ ವಿಷಯಗಳನ್ನು ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ತಿಳಿಸಿದ್ದಾರೆ. ಅಂತೆಯೆ ವಿದ್ಯಾರ್ಥಿಗಳಿಗೆ ಕಲಿಕೆಯ ಅನುಭವವನ್ನು ಒದಗಿಸಲು ಜೀಬ್ರಾ ಕ್ರಾಸಿಂಗ್‌ಗಳನ್ನು ಬಳಸುವುದು, ಟ್ರಾಫಿಕ್ ಸಿಗ್ನಲ್‌ಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಸಂಭಾವ್ಯ ಅಪಾಯಗಳನ್ನು ಗುರುತಿಸುವ ಕುರಿತು ಪ್ರಾಯೋಗಿಕ ಪ್ರದರ್ಶನಗಳನ್ನು ಸಹ ನಡೆಸಿದ್ದಾರೆ.
ಶಿಕ್ಷಣ ಮತ್ತು ರಸ್ತೆ ಸುರಕ್ಷತಾ ಜಾಗೃತಿಯ ಮೂಲಕ ರಸ್ತೆ ಅಪಘಾತಗಳನ್ನು ಗಣನೀಯವಾಗಿ ಕಡಿಮೆಯಾಗಿಸುವ ಜತೆಗೆ ಬೆಂಗಳೂರು ನಗರವನ್ನು ಅಪಘಾತ ರಹಿತವನ್ನಾಗಿಸಲು ಸಂಚಾರ ಪೊಲೀಸರ ಈ ಉಪಕ್ರಮಕ್ಕೆ ಎಲ್ಲಾ ಶಿಕ್ಷಣ ಸಂಸ್ಥೆಗಳು ಕೈ ಜೋಡಿಸುವಂತೆ ನಗರ ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.