ಲಾಲ್‌ ಬಾಗಲ್ಲಿ ಸಂಚಾರ ನಿಯಮಪಾಠ ಮಾಡಿದ ಯಮ-ಕಿಂಕರರು

| Published : Jan 28 2024, 01:18 AM IST / Updated: Mar 28 2024, 08:51 AM IST

ಲಾಲ್‌ ಬಾಗಲ್ಲಿ ಸಂಚಾರ ನಿಯಮಪಾಠ ಮಾಡಿದ ಯಮ-ಕಿಂಕರರು
Share this Article
  • FB
  • TW
  • Linkdin
  • Email

ಸಾರಾಂಶ

ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನಕ್ಕೆ ಬಂದಿದ್ದ ಜನರಿಗೆ ಯಮ ಕಿಂಕರರು ಸಂಚಾರ ನಿಯಮದ ಬಗ್ಗೆ ಜಾಗೃತಿ ಮೂಡಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಲಾಲ್‌ಬಾಗ್‌ ಉದ್ಯಾನದಲ್ಲಿ ಹೂಗಳಿಂದ ಅರಳಿರುವ 12ನೇ ಶತಮಾನದ ‘ಅನುಭವ ಮಂಟಪ’ವನ್ನು ಕಣ್ತುಂಬಿಕೊಳ್ಳಲು ಬಂದ ನಾಗರಿಕರಿಗೆ ಪ್ರವೇಶದ್ವಾರದಲ್ಲಿ ಯಮ-ಕಿಂಕರರು ಹಾಗೂ ಚಿತ್ರಗುಪ್ತರನ್ನು ಕಂಡು ಅಚ್ಚರಿ..!

ಹೌದು ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ವಾಹನ ಚಲಾಯಿಸುವ, ಹೆಲ್ಮಟ್ ಇಲ್ಲದೆ ಬೈಕ್ ಓಡಿಸುವ, ಚಾಲನೆ ವೇಳೆ ಮೊಬೈಲ್ ಬಳಸುವ ಹಾಗೂ ಮದ್ಯ ಸೇವಿಸಿ ಚಾಲನೆ ಮಾಡುವವ ಜನರಿಗೆ ಸಂಚಾರ ನಿಯಮ ಪಾಠ ಮಾಡಲು ‘ಯಮ-ಕಿಂಕರರು’ ಧರೆಗಿಳಿದಿದ್ದರು.

ರಾಷ್ಟ್ರೀಯ ರಸ್ತೆ ಸುರಕ್ಷತೆ ಸಪ್ತಾಹ-2024ರ ಅಂಗವಾಗಿ ಲಾಲ್‌ಬಾಗ್‌ ಉದ್ಯಾನದ ಪೂರ್ವ ಪ್ರವೇಶ ದ್ವಾರದಲ್ಲಿ ಶನಿವಾರ ಸಂಚಾರ ನಿಯಮ ಹಾಗೂ ಸುರಕ್ಷತೆ ಕುರಿತು ಯಮ-ಕಿಂಕರರ ಪಾತ್ರಧಾರಿಗಳಾಗಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ವಿಲ್ಸನ್ ಗಾರ್ಡನ್ ಸಂಚಾರ ಠಾಣೆ ಪೊಲೀಸರು ಆಯೋಜಿಸಿ ಗಮನ ಸೆಳೆದರು. ಸುಮಾರು ಒಂದೂವರೆ ತಾಸು ಜನರಿಗೆ ಸಂಚಾರ ನಿಯಮ ಪಾಲಿಸಿ ಜೀವ ಉಳಿಸಿ ಎಂದು ಯಮ-ಕಿಂಕರರು ಮನವಿ ಮಾಡಿದರು.

ಯಮ ಪಾತ್ರಧಾರಿ ಹೆಡ್‌ ಕಾನ್‌ಸ್ಟೇಬಲ್‌ ಗಿರೀಶ್‌ ಕುಮಾರ್‌, ಕಿಂಕರರಾಗಿ ಹೆಡ್‌ ಕಾನ್ಸ್‌ಸ್ಟೇಬಲ್ ರವಿ, ಗೃಹ ರಕ್ಷಕ ರಾಮು ಹಾಗೂ ಚಿತ್ರಗುಪ್ತನಾಗಿ ಕಾನ್‌ಸ್ಟೇಬಲ್‌ ಅಜಿತ್‌ ಪ್ರಭು ಪಾತ್ರವಹಿಸಿದ್ದರು. ಇದೇ ವೇಳೆ ಐದಾರು ಮಂದಿಗೆ ಉಚಿತವಾಗಿ ಹೆಲ್ಮೆಟ್‌ಗಳನ್ನು ಪೊಲೀಸರು ವಿತರಿಸಿದರು. ಕಾರ್ಯಕ್ರಮ ಇನ್‌ಸ್ಪೆಕ್ಟರ್‌ ಕ್ಯಾತ್ಯಾಯಿನಿ ಅಳ್ವ ಸಾರಥ್ಯದಲ್ಲಿ ನಡೆಯಿತು.