ಅತೀ ಹೆಚ್ಚು ಟ್ರಾಫಿಕ್‌: ವಿಶ್ವದಲ್ಲಿ ಬೆಂಗಳೂರಿಗೆ ಕುಖ್ಯಾತಿ!

| Published : Feb 04 2024, 01:37 AM IST

ಸಾರಾಂಶ

ಸಂಚಾರ ದಟ್ಟಣೆ ವಿಷಯದಲ್ಲಿ ಬೆಂಗಳೂರಿನ ಸಂಚಾರ ದಟ್ಟಣೆ ಮತ್ತೆ ಅಪಖ್ಯಾತಿಗೆ ಈಡಾಗಿದೆ. ವಿಶ್ವದಲ್ಲಿ 6ನೇ ಸ್ಥಾನ ಪಡೆದುಕೊಂಡಿದೆ.

ನವದೆಹಲಿ: ಅತಿ ಹೆಚ್ಚು ಸಂಚಾರ ದಟ್ಟಣೆ ಹೊಂದಿರುವ ನಗರಗಳ ಪೈಕಿ ಸಿಲಿಕಾನ್‌ ಸಿಟಿ ಬೆಂಗಳೂರು ವಿಶ್ವದಲ್ಲೇ 6ನೇ ಸ್ಥಾನದಲ್ಲಿದ್ದು, ದೇಶದಲ್ಲಿ ಮೊದಲನೇ ಸ್ಥಾನ ಪಡೆದಿದೆ.

ಒಟ್ಟು 55 ದೇಶಗಳ 387 ನಗರಗಳನ್ನು ಆಧರಿಸಿ ಡಚ್ ಜಿಯೋಲೊಕೇಶನ್ ಟೆಕ್ನಾಲಜಿ ಸಂಸ್ಥೆ ‘ಟಾಮ್‌ಟಾಮ್’ ನಡೆಸಿದ ಇತ್ತೀಚೆಗೆ ವಾರ್ಷಿಕ ಸಂಚಾರ ದಟ್ಟಣೆ ಸೂಚ್ಯಂಕದ ಸಮೀಕ್ಷೆ ವರದಿಯಲ್ಲಿ ಈ ಮಾಹಿತಿಯನ್ನು ಪ್ರಕಟಿಸಿದೆ. ಈ ಪೈಕಿ ವಿಶ್ವದ ಟಾಪ್‌ 10 ಅತಿ ಹೆಚ್ಚು ಸಂಚಾರ ದಟ್ಟಣೆ ಹೊಂದಿರುವ 387 ನಗರಗಳ ಪಟ್ಟಿಯ ಟಾಪ್‌ 10ರಲ್ಲಿ ಭಾರತದ ಎರಡು ನಗರಗಳಾದ ಬೆಂಗಳೂರು ಹಾಗೂ ಮಹಾರಾಷ್ಟ್ರದ ಪುಣೆ ಕ್ರಮವಾಗಿ 6 ಮತ್ತು 7ನೇ ಸ್ಥಾನದಲ್ಲಿವೆ. ಇನ್ನು ರಾಷ್ಟ್ರ ರಾಜಧಾನಿ ದೆಹಲಿಯು ಪಟ್ಟಿಯಲ್ಲಿ 44ನೇ ಸ್ಥಾನದಲ್ಲಿದೆ.

ನಗರದಲ್ಲಿ ಸರಾಸರಿ ವೇಗ 18 ಕಿ.ಮೀ.:

ಬೆಂಗಳೂರು ನಗರದಲ್ಲಿ ಸಂಚರಿಸುವ ವಾಹನವೊಂದರ ಸರಾಸರಿ ವೇಗವು ಗಂಟೆಗೆ 18 ಕಿ.ಮೀ.ಗಳಾಗಿದೆ. ಅಲ್ಲದೇ ನಗರದಲ್ಲಿ 10 ಕಿ.ಮೀ. ಪ್ರಯಾಣಿಸಲು ಒಂದು ವಾಹನಕ್ಕೆ ಸರಾಸರಿ 28.10 ನಿಮಿಷಗಳ ಸಮಯ ಬೇಕಾಗುತ್ತದೆ ಎಂದು ವರದಿ ಹೇಳಿದೆ.

ವಿಶ್ವದಲ್ಲಿ ಲಂಡನ್‌ ನಂ.1:

ಇನ್ನು ಸಮೀಕ್ಷೆ ವರದಿಯ ಪಟ್ಟಿಯಲ್ಲಿ ಅತಿ ಹೆಚ್ಚು ಸಂಚಾರ ದಟ್ಟಣೆ ಹೊಂದಿರುವ ನಗರಗಳಲ್ಲಿ ಬ್ರಿಟನ್‌ ರಾಜಧಾನಿ ಲಂಡನ್‌ 1, ಡಬ್ಲಿನ್‌ 2, ಟೊರೊಂಟೋ 3, ಮಿಲನ್‌ 4, ಲಿಮಾ 5, ಬೆಂಗಳೂರು 6, ಪುಣೆ 7ನೇ ಸ್ಥಾನದಲ್ಲಿವೆ.