ಸವಣೂರು: ಪಟ್ಟಣದ ಎ.ಸಿ. ಆವರಣದಲ್ಲಿರುವ ಹಳೇ ಕೋರ್ಟ್ ಕಟ್ಟಡಕ್ಕೆ ನಿರ್ಮಿಸಲಾಗುತ್ತಿರುವ ಕಂಪೌಂಡ್ ಗೋಡೆಯಿಂದ ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಸಂಚಾರಕ್ಕೆ ಅಡಚಣೆ ಉಂಟಾಗಲಿದೆ ಎಂದು ಆರೋಪಿಸಿ, ವಿದ್ಯಾರ್ಥಿಗಳ ಪಾಲಕರು ಹಾಗೂ ಸಾರ್ವಜನಿಕರು ಉಪವಿಭಾಗಾಧಿಕಾರಿ ಶುಭಂ ಶುಕ್ಲಾ ಅವರಿಗೆ ಮನವಿ ಸಲ್ಲಿಸಿದ್ದಾರೆ.ಪಟ್ಟಣದಲ್ಲಿರುವ ಹಳೇ ಕೋರ್ಟ್ ಕಟ್ಟಡವನ್ನು ಪುರಾತತ್ವ ಇಲಾಖೆಗೆ ಹಸ್ತಾಂತರಿಸಿರುವ ಹಿನ್ನೆಲೆ ಪ್ರಸ್ತುತ ಕಟ್ಟಡದ ಸುತ್ತ ಶಾಶ್ವತ ಕಂಪೌಂಡ್ ಗೋಡೆ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ. ಆದರೆ ಈ ಕಟ್ಟಡಕ್ಕೆ ಹಿಂದಿನಿಂದಲೂ ಕಂಪೌಂಡ್ ಗೋಡೆ ಇರಲಿಲ್ಲ. ಈ ಹಿಂದೆ ತಾತ್ಕಾಲಿಕವಾಗಿ ಅಳವಡಿಸಲಾಗಿದ್ದ ತಗಡಿನ ತಡೆಗೋಡೆಯಿಂದ ಕಚೇರಿಗಳಿಗೆ ಬರುವ ಬೈಕ್ ಹಾಗೂ ಇತರ ವಾಹನಗಳು ಎದುರಿಗೆ ಸಂಚರಿಸುವ ಶಾಲಾ ಮಕ್ಕಳಿಗೆ ಸ್ಪಷ್ಟವಾಗಿ ಕಾಣದೆ ಅಪಾಯಕರ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೇ ಕಾರಣದಿಂದ ಒಬ್ಬ ವಿದ್ಯಾರ್ಥಿನಿ ಬೈಕ್ ಅಪಘಾತಕ್ಕೊಳಗಾದ ಘಟನೆ ನಡೆದಿರುವುದನ್ನು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.ಪ್ರಸ್ತುತ ಶಾಶ್ವತ ಕಂಪೌಂಡ್ ಗೋಡೆ ನಿರ್ಮಾಣವಾದಲ್ಲಿ, ಎದುರುಬರುವ ವಾಹನಗಳು ಹಾಗೂ ಶಾಲಾ ಮಕ್ಕಳ ಸಂಚಾರ ಒಂದೇ ಮಾರ್ಗದಲ್ಲಿ ಇರುವುದರಿಂದ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಲಿದೆ ಎಂದು ಪಾಲಕರು ಆತಂಕ ವ್ಯಕ್ತಪಡಿಸಿದ್ದಾರೆ. ಉಪವಿಭಾಗಾಧಿಕಾರಿಗಳ ಕಚೇರಿ, ತಹಸೀಲ್ದಾರ್‌ ಕಚೇರಿ ಹಾಗೂ ಸಬ್ ರಿಜಿಸ್ಟ್ರಾರ್ ಕಚೇರಿಗಳಿಗೆ ಆಗಮಿಸುವ ವಾಹನಗಳು ಇದೇ ಪ್ರದೇಶದಲ್ಲಿ ನಿಲುಗಡೆಯಾಗುತ್ತಿರುವುದರಿಂದ ಸಾರ್ವಜನಿಕರ ಸಂಚಾರಕ್ಕೂ ತೀವ್ರ ತೊಂದರೆ ಉಂಟಾಗುತ್ತಿದೆ ಎಂದು ದೂರಲಾಗಿದೆ.ಈ ಸಂದರ್ಭದಲ್ಲಿ ಪ್ರವೀಣ ಬಾಲೇಹೊಸೂರ, ಶ್ರೀನಿವಾಸ ಗಿತ್ತೆ, ದುರಗಪ್ಪ ಗಡೆದ, ಅಕ್ಷಯ ಕಲಾಲ, ವಿನಾಯಕ ಕುಲಕರ್ಣಿ, ಸುರೇಶ ತಳವಾರ, ವೀರೇಶ ಕಳಕಪ್ಪನವರ, ಸುನೀಲ ಹೊಸೂರ, ಪವನ ರಸಾಳಕರ, ಮಣಿಕಂಠ ದುರಗದಮಠ, ಮಾಲತೇಶ ಪೂಜಾರ, ವಿನಾಯಕ ವಾಲಿ, ಮಾಲತೇಶ ಮಾನೇಗಾರ ಸೇರಿದಂತೆ ಸಾರ್ವಜನಿಕರು ಇದ್ದರು.