ಪ್ರಮುಖ ರಸ್ತೆಗಳಲ್ಲಿ ದ್ವಿಚಕ್ರ ವಾಹನಗಳು, ಆಟೋಗಳು, ಕಾರುಗಳು ಸೇರಿದಂತೆ ವಿವಿಧ ವಾಹನಗಳನ್ನ ರಸ್ತೆ ಮಧ್ಯೆ ನಿಲ್ಲಿಸಿ ಹೋಗುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ರಾಜಧಾನಿ ಬೆಂಗಳೂರಿನಿಂದ ಕೂಗಳತೆ ದೂರದಲ್ಲಿರುವ ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರ ನಗರದಲ್ಲಿ ಜನ ಟ್ರಾಫಿಕ್ ನಿಯಮಗಳನ್ನೇ ಮರೆತುಬಿಟ್ಟಿದ್ದಾರಾ ಅನ್ನೋ ಅನುಮಾನ ಮೂಡಿದೆ. ಕಾರಣ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ರಸ್ತೆ, ಬಿ.ಬಿ. ರಸ್ತೆ, ಕೋರ್ಟ್ ಮತ್ತು ತಹಸೀಲ್ದಾರ್ ಕಚೇರಿ ಮುಂಭಾಗದ ರಸ್ತೆ, ಎಂ.ಜಿ. ರಸ್ತೆ, ಬಜಾರ್ ರಸ್ತೆ, ಗಂಗಮ್ಮ ಗುಡಿ ಸೇರಿದಂತೆ ಜನ ನಿಬಿಡ ರಸ್ತೆಗಳಲ್ಲಿ ಬೇಕಾಬಿಟ್ಟಿ ಅಡ್ಡಾದಿಡ್ಡಿಯಾಗಿ ವಾಹನಗಳನ್ನು ನಿಲ್ಲಿಸುತ್ತಿರೋದರಿಂದ, ಸುಗಮ ಸಂಚಾರಕ್ಕೆ ಸಂಚಕಾರ ಉಂಟಾಗಿದೆ.ಪ್ರಮುಖ ರಸ್ತೆಗಳಲ್ಲಿ ದ್ವಿಚಕ್ರ ವಾಹನಗಳು, ಆಟೋಗಳು, ಕಾರುಗಳು ಸೇರಿದಂತೆ ವಿವಿಧ ವಾಹನಗಳನ್ನ ರಸ್ತೆ ಮಧ್ಯೆ ನಿಲ್ಲಿಸಿ ಹೋಗುತ್ತಿದ್ದಾರೆ. ಅಷ್ಟೇ ಅಲ್ಲದೆ ನಗರದಲ್ಲಿ ಎಲ್ಲಿಯೂ ನೋ ಪಾರ್ಕಿಂಗ್ ಬೋರ್ಡ್‌ಗಳಾಗಲಿ ಎಲ್ಲಿ ವಾಹನ ನಿಲ್ಲಿಸಬೇಕು ಎಲ್ಲಿ ನಿಲ್ಲಿಸಬಾರದು ಎಂಬ ಯಾವುದೇ ಸೂಚನಾ ಫಲಕಗಳು ಇದ್ದು ಇಲ್ಲದಂತಾಗಿವೆ. ಅದನ್ನು ಯಾರೂ ಪಾಲಿಸುತ್ತಿಲ್ಲಾ. ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ, ಬಿ.ಬಿ. ರಸ್ತೆಯ ಬೆಸ್ಕಾಂ ಮುಂಭಾಗದಲ್ಲಿ ದ್ವಿಚಕ್ರ ವಾಹನಗಳ ನಿಲುಗಡೆ ಎಂಬ ಸೂಚನಾ ಫಲಕ ಇದೆ. ಆದರೆ ಇಲ್ಲಿ ಕಾರ್ ಮತ್ತು ಟೆಂಪೋಗಳನ್ನು ನಿಲ್ಲಿಸುತ್ತಾರೆ.

ಇದರಿಂದ ಬೆಸ್ಕಾಂ ಕಾಂಪೌಡ್ ಪಕ್ಕದ ರಸ್ತೆಯಿಂದ ಬಿ.ಬಿ.ರಸ್ತೆಗೆ ಬರ ಬೇಕಾದ ವಾಹನಗಳಿಗೆ ಅಡ್ಡವಾಗುವುದಲ್ಲದೇ ರಸ್ತೆಯ ಬಲ ಬಾಗದಿಂದ ಬರುವ ವಾಹನಗಳು ಕಾಣಿಸದೆ ಸಾಕಷ್ಟು ಬಾರಿ ಅಪಘಾತಗಳಾಗಿ ಆಸ್ಪತ್ರೆ ಪಾಲಾಗಿದ್ದಾರೆ. ನಗರದ ಬಿಬಿ ರಸ್ತೆಯ ಬಾಲಾಜಿ ಮತ್ತು ವಾಣಿ ಚಿತ್ರ ಮಂದಿರದ ಪಕ್ಕದ ರಸ್ತೆಗಳಲ್ಲಿ, ಬೆಸ್ಕಾಂ ಬಳಿ ಪುಟ್ ಪಾತ್‌ಗಳಲ್ಲಿ, ಬಜಾರ್‌ರಸ್ತೆ, ಎಂಜಿ ರಸ್ತೆಗಳಲ್ಲಿ ಕಾಫೀ, ಟೀ ತಿಂಡಿ ಮಾರುವ ತಳ್ಳುಗಾಡಿಗಳು ಮತ್ತು ವಾಹನಗಳುರಸ್ತೆಯನ್ನು ಅತಿಕ್ರಮಿಸಿ ಕೊಂಡಿದ್ದರೆ ಅಂಗಡಿಗಳವರು ಪುಟ್ ಪಾತ್‌ಗಳನ್ನು, ಸಂತೆ ಮಾರುಕಟ್ಟೆಯಲ್ಲಿ ರಸ್ತೆ ಮತ್ತು ಪುಟ್‌ಪಾತ್‌ಗಳನ್ನು ಆಕ್ರಮಿಸಿ ಕೊಂಡು ಜನತೆ ಓಡಾಡಲು ಸಹಾ ಆಗದೆ ಇದ್ದರೂ ಸಂಬಂಧಿಸಿದ ನಗರಸಭೆ ಅಧಿಕಾರಿಗಳು ಚಕಾರವೆತ್ತುತ್ತಿಲ್ಲಾ. ಪಾದಾಚಾರಿ ಮಾರ್ಗವನ್ನು ತಿಂಡಿ ಮಾರುವ ತಳ್ಳ ಗಾಡಿಗಳವರು ಓತ್ತುವರಿ ಮಾಡಿಕೊಂಡಿದ್ದಾರೆ.

ಇತ್ತೀಚೆಗೆ ಚಿಕ್ಕಬಳ್ಳಾಪುರ ನಗರ ಬೆಳೆಯುತ್ತಿದೆ. ಆದ್ರೆ ವಾಸ್ತವಾಗಿ ಸರಿಯಾದ ಯಾವುದೇ ಮೂಲಸೌಕರ್ಯಗಳು ಇಲ್ಲದೆ ಸೊರಗುತ್ತಿದೆ. ಇತ್ತ ನಗರಕ್ಕೆ ಪ್ರತ್ಯೇಕ ಟ್ರಾಫಿಕ್ ಪೊಲೀಸ್ ಠಾಣೆ ಇದ್ದರೂ ಸಹ ಸಂಚಾರಿ ನಿಯಮಗಳನ್ನ ಉಲ್ಲಂಘಿಸುವವರ ವಿರುದ್ಧ ಪೊಲೀಸರು ಹಾಗೂ ನಗರಸಭೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೇ ಇರೋದು ಅವರ ಕರ್ತವ್ಯ ಲೋಪ ಎದ್ದುಕಾಣುತ್ತಿದೆ.ಅದೇ ರೀತಿ ಖಾಸಗಿ ಬಸ್ ನಿಲ್ದಾಣ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗ, ಬೆಸ್ಕಾಂ ಮುಂಭಾಗ, ತಾಲೂಕು ಕಚೇರಿ ರಸ್ತೆ, ಸೇರಿದಂತೆ ಹಲವಾರು ಕಡೆಗಳಲ್ಲಿ ಅಂಗಡಿಗಳವರು, ವಾಹನ ಮಾಲಿಕರು ರಸ್ತೆ ಮತ್ತು ಪುಟ್‌ಪಾತ್‌ಗಳನ್ನು ಅತಿಕ್ರಮಿಸಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದನ್ನು ಕಂಡ ಜನತೆ ಚಿಕ್ಕಬಳ್ಳಾಪುರದಲ್ಲಿ ಟ್ರಾಫಿಕ್ ರೂಲ್ಸ್ ಅನ್ವಯವಾಗಲ್ವಾ , ನಗರಸಭೆ ಕಣ್ಮುಚ್ಚಿ ಕುಳಿತಿದೆಯಾ ಅಂತ ಜನ ಪ್ರಶ್ನೆ ಕೇಳುತ್ತಿದ್ದಾರೆ.

ಕೋರ್ಟ್‌ನ ಮುಂಭಾಗದಲ್ಲಿ ಮತ್ತು ಕೋರ್ಟ್ ರಸ್ತೆಯಲ್ಲಿ ಮೂರು ಸಾಲಿನಲ್ಲಿ ಅಂದರೆ ಮೊದಲ ಸಾಲು ದ್ವಿಚಕ್ರ ವಾಹನಗಳು, ಎರಡು ಮತ್ತು ಮೂರನೇ ಸಾಲಿನಲ್ಲಿ ಕಾರ್‌ಗಳನ್ನು ನಿಲ್ಲಿಸಿ, ಕೋರ್ಟ್ ಕಚೇರಿಗಳಿಗೆ ತೆರಳುವುದರಿಂದ ಗೌರಿಬಿದನೂರು, ಎಂಜಿ ರಸ್ತೆ ಮತ್ತು ಜಿಲ್ಲಾಸ್ಪತ್ರೆ ಕಡೆಯಿಂದ ಬಿ.ಬಿ. ರಸ್ತೆಕಡೆಗೆ ಬರುವ ಮತ್ತು ಹೋಗುವ ವಾಹನಗಳಂತು ಹರಸಾಹಸ ಪಟ್ಟು ಸಾಗುತ್ತವೆ. ಜಿಲ್ಲಾಸ್ಪತ್ರೆಗೆ ಬರುವ ಮತ್ತು ಹೋಗುವ ಆ್ಯಂಬುಲೆನ್ಸ್ ಹಾಗೂ ಇತರೆ ವಾಹನಗಳಿಗೂ ಸರಾಗವಾಗಿ ಸಾಗಲು ಆಗುವುದಿಲ್ಲಾ. ಇದಲ್ಲದೆ ನಗರದ ಸಿವಿಲ್ ಬಸ್ ನಿಲ್ದಾಣದ ಬಳಿ ಗೌರಿಬಿದನೂರಿನ ರಸ್ತೆಯಲ್ಲಿ ಸಹಾ ಪಾದಾಚಾರಿ ಮಾರ್ಗ ಒತ್ತುವರಿಯಾಗಿದ್ದು ಬಸ್ ಹತ್ತಲು ಬರುವ ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ.ಸಂಚಾರಿ ಪೋಲಿಸರು ಅಪರೂಪಕ್ಕೊಮ್ಮೆ ಕೋರ್ಟ್ ಮುಂದೆ ಅಡ್ಡಾದಿಡ್ಡಿ ನಿಲ್ಲಿಸಿರುವ ವಾಹನ ಚಾಲಕರಿಗೆ ನಿಮ್ಮ ವಾಹನ ಸುಗಮ ಸಂಚಾರಕ್ಕೆ ಅಡ್ಡವಾಗುತ್ತದೆ ತೆಗೆಯಿರಿ ಎಂದರೂ ಅವರ ಮಾತಿಗೂ ಅಡ್ಡಾದಿಡ್ಡಿ ನಿಲ್ಲಿಸಿರುವ ವಾಹನಗಳವರು ಕವಡೆ ಕಾಸಿನ ಕಿಮ್ಮತ್ತು ನೀಡುವುದಿಲ್ಲಾ .

ನಗರದಲ್ಲಿ ವಾಹಗಳ ಮಾಲಿಕರು ಎಲ್ಲೇಂದರಲ್ಲಿ ಅಡ್ಡಾ ದಿಡ್ಡಿ ಪಾಕಿಂಗ್ ಮಾಡುತ್ತಿದ್ದರು ಟ್ರಾಫಿಕ್ ಪೋಲೀಸರಿದ್ದರೂ ಯಾವುದೇ ಪ್ರಯೋಜನವಿಲ್ಲದಂತಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಸಿಕೆಬಿ-4 ನಗರದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಬಳಿ ನೋ ಪಾರ್ಕಿಂಗ್ ಬೋರ್ಡ್ ಹಾಕಿದ್ದರೂ ವಾಹನಗಳ ನಿಲುಗಡೆ ಮಾಡಿರುವುದು