ಮರಿಯಮ್ಮನಹಳ್ಳಿ: ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಟನಲ್ (ಸುರಂಗ) ಬಳಿ ಕೂಡ್ಲಿಗಿ ಕಡೆಯಿಂದ ಕೊಪ್ಪಳ ಕಡೆಗೆ ತೆರಳುತ್ತಿದ್ದ ವಿಂಡ್‌ ಫ್ಯಾನ್‌ ಬೃಹತ್‌ ರೆಕ್ಕೆಗಳನ್ನು ಸಾಗಿಸುತ್ತಿದ್ದ ಲಾರಿಯೊಂದು, ನಿಯಂತ್ರಣ ತಪ್ಪಿ ರಸ್ತೆ ಮಧ್ಯೆದಲ್ಲಿ ಪಲ್ಟಿಯಾಗಿ ಬಿದ್ದ ಪರಿಣಾಮ ಭಾನುವಾರ ಸಂಜೆಯಿಂದ ತಡರಾತ್ರಿ ವರೆಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು.

ಪವನ ವಿದ್ಯುಚ್ಛಕ್ತಿಯ ಬೃಹತ್‌ ರೆಕ್ಕಗಳನ್ನು ಹೊತ್ತು ಸಾಗುತ್ತಿದ್ದ ಲಾರಿ ಸುರಂಗ ಮಾರ್ಗದ ಸಮೀಪ ಬರುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲಿ ಪಲ್ಟಿಯಾಗಿದೆ. ಭಾನುವಾರು ರಾತ್ರಿ ಸುಮಾರು 8 ಗಂಟೆಯಿಂದ ಮಧ್ಯರಾತ್ರಿ 3 ವರೆಗೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಹೊಸಪೇಟೆಯಿಂದ ಬೆಂಗಳೂರು, ಮೈಸೂರು, ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ, ಹರಿಹರ, ದಾವಣಗೆರೆ, ಶಿ‍ವಮೊಗ್ಗ, ಧರ್ಮಸ್ಥಳ ಕಡೆಗೆ ಹೊರಟ್ಟಿದ್ದ ಬಸ್‌ ಸೇರಿದಂತೆ ಇತರೆ ವಾಹನಗಳು ಸುಮಾರು 3 ರಿಂದ 4 ಕಿ.ಮೀ ವರೆಗೆ ನಿಂತಿದ್ದರಿಂದ ಟ್ರಾಫಿಕ್‌ ಜಾಮ್ ಉಂಟಾಗಿ, ಸಾವಿರಾರು ಪ್ರಯಾಣಿಕರು ಪರದಾಡಿದರು,

ವಿಷಯ ತಿಳಿಯುತ್ತಿದ್ದಂತೆ ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಧಾವಿಸಿ, ಸ್ಥಳೀಯರ ಸಹಕಾರದೊಂದಿಗೆ ತೆರವುಗೊಳಿಸಿ ರಸ್ತೆ ಸಂಚಾರ ಸುಗಮಗೊಳಿಸಿದರು.

ಘಟನಾ ಸ್ಥಳಕ್ಕೆ ವಿಜಯನಗರ ಎಸ್‌ಪಿ ಎಸ್‌. ಜಾಹ್ನವಿ ನೇತೃತ್ವದಲ್ಲಿ ಕೂಡ್ಲಿಗಿ ಡಿವೈಎಸ್‌ಪಿ ಮಲ್ಲೇಶ ದೊಡ್ಡಮನಿ, ಹಗರಿಹೊಮ್ಮನಹಳ್ಳಿ ಸಿಪಿಐ ವಿಕಾಸ್ ಲಮಾಣಿ, ಹೊಸಪೇಟೆ ಗ್ರಾಮೀಣ ಠಾಣೆ ಸಿಪಿಐ ಗುರುರಾಜ ಕಟ್ಟಿಮನಿ, ಮರಿಯಮ್ಮನಹಳ್ಳಿ ಪೊಲೀಸ್‌ ಠಾಣೆ ಪಿಎಸ್ಐ ತಾರಾಬಾಯಿ ಸೇರಿದಂತೆ ಪೊಲೀಸರು ಟ್ರಾಫಿಕ್ ಜಾಮ್‌ ತೆರವುಗೊಳಿಸಿ ಸಂಚಾರ ಸುಗಮಗೊಳಿಸಿದರು. ರಸ್ತೆ ಅಪಘಾತ ಬೈಕ್‌ ಸವಾರ ಸಾವು

ಮರಿಯಮ್ಮನಹಳ್ಳಿ: ಬೈಕ್‌ ರಸ್ತೆ ಪಕ್ಕದ ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟಿರುವ ಘಟನೆ ರಾಷ್ಟ್ರೀಯ ಹೆದ್ದಾರಿ -50ರ ಗಾಳೆಮ್ಮನಗುಡಿ ನರ್ಸರಿ ಸಮೀಪ ಶನಿವಾರ ರಾತ್ರಿ ನಡೆದಿದೆ. ಮರಿಯಮ್ಮನಹಳ್ಳಿಯ 7ನೇ ವಾರ್ಡಿನ ನಿವಾಸಿ ಯು. ಪೃಥ್ವಿರಾಜ್ (22) ಮೃತ ಬೈಕ್‌ ಸವಾರ. ರಾಷ್ಟ್ರೀಯ ಹೆದ್ದಾರಿ 50ರ ಗುಂಡಾ ಕಾದಿಟ್ಟ ಅರಣ್ಯ ಪ್ರದೇಶ ಸಮೀಪ ಪವನಶಕ್ತಿ ಯಂತ್ರ ಸಾಗಿಸುವ ಲಾರಿಯೊಂದು ರಸ್ತೆಗೆ ಉರುಳಿ ಬಿದ್ದು, ಸಂಚಾರ ದಟ್ಟಣೆ ಉಂಟಾಗಿತ್ತು. ಪೃಥ್ವಿರಾಜ ಬೈಕ್‌ನಲ್ಲಿ ವೇಗವಾಗಿ ಹೋಗುತ್ತಿರುವ ವೇಳೆ ನಾಯಿಯೊಂದು ಅಡ್ಡ ಬಂದಿದ್ದು, ಆಯತಪ್ಪಿ ರಸ್ತೆ ಪಕ್ಕದ ಬ್ಯಾರಿಕೇಡ್‌ಗೆ ತಲೆ ಬಡಿದು ತೀವ್ರ ರಕ್ಕಸ್ರಾವವಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಆ್ಯಂಬುಲೆನ್ಸ್‌ನಲ್ಲಿ ಹೊಸಪೇಟೆ‌ ಆಸ್ಪತ್ರೆಗೆ ಸಾಗಿಸುವಾಗ ಪೃಥ್ವಿರಾಜ್ ಮಾರ್ಗ ಮಧ್ಯದಲ್ಲಿಯೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.