ಸಾರಾಂಶ
ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ಹೆದ್ದಾರಿ ಟೋಲ್ ಶುಲ್ಕದಿಂದ ತಪ್ಪಿಸಿಕೊಳ್ಳಲು ಬಿಬಿಎಂಪಿ ಕಸದ ಲಾರಿಗಳು ಅಡ್ಡದಾರಿ ಹಿಡಿದಿದ್ದು, ತಾಲೂಕಿನ ಕೈಗಾರಿಕಾ ಪ್ರದೇಶದ ವೀರಾಪುರ ಗ್ರಾಮದ ಮಾರ್ಗವಾಗಿ ದೊಡ್ಡ ಬೆಳವಂಗಲ ಹೋಬಳಿ ಚಿಗರೇನಹಳ್ಳಿ ಬಳಿಯ ಎಂಎಸ್‌ಜಿಪಿ ಕಸ ವಿಲೇವಾರಿ ಘಟಕಕ್ಕೆ ದಿನನಿತ್ಯ ಸುಮಾರು 40- 50 ಕಸದ ಲಾರಿಗಳು ಸಂಚಾರ ಮಾಡುತ್ತಿವೆ.ರಸ್ತೆ ಹಾಗೂ ಜನರ ಸುರಕ್ಷತೆ ದೃಷ್ಟಿಯಿಂದ ಕಸದ ಲಾರಿಗಳ ಸಂಚಾರ ಈ ಮಾರ್ಗದಲ್ಲಿ ನಿಷಿದ್ಧವಾಗಿದ್ದು, ತಾಲೂಕಿನ ಕುರುಬರಹಳ್ಳಿ ಸಮೀಪದ ಸ್ಯಾಟಲೈಟ್ ರಿಂಗ್ ರೋಡ್ ಬಳಿ ಕಸದ ಲಾರಿಗಳನ್ನು ತಡೆದ ಸಾರ್ವಜನಿಕರು ಚಾಲಕರನ್ನು ತರಾಟೆಗೆ ತೆಗೆದುಕೊಂಡರು.
ಇದೇ ವೇಳೆ ಅಡ್ಡ ಮಾರ್ಗದಲ್ಲಿ ಸಂಚಾರ ಮಾಡುತ್ತಿರುವ ಎಲ್ಲಾ ಲಾರಿಗಳನ್ನು ಕೂಡಲೇ ವಶಕ್ಕೆ ಪಡೆಯಬೇಕೆಂದು ಒತ್ತಾಯಿಸಿ ಪೊಲೀಸ್ ಇಲಾಖೆಗೆ ಮನವಿ ಮಾಡಲಾಯಿತು.ಈ ವೇಳೆ ಮಾತನಾಡಿದ ವೆಂಕಟೇಶ್, ಕೈಗಾರಿಕಾ ಪ್ರದೇಶದ ವೀರಾಪುರ ಗ್ರಾಮದ ಮಾರ್ಗವಾಗಿ ಬಿಬಿಎಂಪಿ ಕಸ ತುಂಬಿದ ಲಾರಿಗಳ ಸಂಚಾರ ಮಿತಿ ಮೀರಿದೆ. ಅಪಘಾತ ನಡೆಯುವ ಮುನ್ನ ಲಾರಿಗಳ ಸಂಚಾರಕ್ಕೆ ಕಡಿವಾಣ ಹಾಕಬೇಕು. ಇಲ್ಲವಾದರೆ ರಸ್ತೆ ಬಂದ್ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ತಾಲೂಕಿನ ದೊಡ್ಡಬೆಳವಂಗಲ ಹೋಬಳಿ ಚಿಗರೇನಹಳ್ಳಿ ಸಮೀಪದ ಎಂಎಸ್‌ಜಿಪಿ ಕಸ ವಿಲೇವಾರಿ ಘಟಕಕ್ಕೆ ಪ್ರತಿದಿನ ನೂರಾರು ಲಾರಿಗಳು ಬಿಬಿಎಂಪಿ ವ್ಯಾಪ್ತಿಯಿಂದ ಕಸ ತುಂಬಿಕೊಂಡು ಬರುತ್ತಿವೆ. ಕಸ ತುಂಬಿದ ಲಾರಿಗಳು ಇಷ್ಟು ವರ್ಷಗಳಿಂದಲೂ -ದಾಬಸ್‌ಪೇಟೆ ಮೂಲಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಂಎಸ್‌ಜಿಪಿ ಕಸ ವಿಲೇವಾರಿ ಘಟಕಕ್ಕೆ ಬರುತ್ತಿದ್ದವು. ಆದರೆ, ಹುಲಿಕುಂಟೆ ಸಮೀಪ ಟೋಲ್ ಪ್ರಾರಂಭವಾದ ನಂತರ ಟೋಲ್ ಶುಲ್ಕ ತಪ್ಪಿಸಿಕೊಳ್ಳಲು ಈಗ ದೊಡಬಳ್ಳಾಪುರ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಮೂಲಕ ಸಂಚರಿಸುತ್ತಿವೆ ಎಂದು ಆರೋಪಿಸಿದರು.ಗ್ರಾಮಗಳ ಮೂಲಕ ಕಸ ತುಂಬಿದ ಲಾರಿಗಳು ಹೋಗುವಾಗ ಬರುತ್ತಿರುವ ದುರ್ನಾತ ಹಾಗೂ ರಸ್ತೆಯುದ್ದಕ್ಕೂ ಲಾರಿಯಿಂದ ಸೋರುತ್ತಿರುವ ತ್ಯಾಜ್ಯ ನೀರಿನಿಂದ ಗ್ರಾಮಸ್ಥರು ಮೂಗುಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಟೋಲ್ ಶುಲ್ಕ ಉಳಿಸುವ ಸಲುವಾಗಿ ಗ್ರಾಮೀಣ ರಸ್ತೆಗಳ ಮೂಲಕ ಸಂಚಾರ ಮಾಡುತ್ತಿವೆ. ಜೊತೆಗೆ ಕಸದ ಲಾರಿಗಳು ಮಿತಿ ಮೀರಿದ ವೇಗದಲ್ಲಿ ಸಂಚರಿಸುತ್ತಿವೆ. ಕಸದ ಲಾರಿಗಳು ಈಗಾಗಲೇ ಬೆಂಗಳೂರು ನಗರ ಸೇರಿದಂತೆ ಇತರೆಡೆ ಅಪಘಾತ ನಡೆಸಿ ಹತ್ತಾರು ಜನರ ಜೀವ ತೆಗೆದಿರುವ ಕುಖ್ಯಾತಿ ಪಡೆದಿವೆ. ಇಂತಹ ಲಾರಿಗಳಿಂದ ನಮ್ಮೂರಿನ ಭಾಗದಲ್ಲೂ ಅನಾಹುತ ಸಂಭವಿಸುವ ಮುನ್ನ ಕಸದ ಲಾರಿಗಳ ಸಂಚಾರಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ಚಿಗರೇನಹಳ್ಳಿ ಸಮೀಪದ ಕಸ ವಿಲೇವಾರಿ ಘಟಕ ಬಂದ್ ಮಾಡುವಂತೆ ಶಾಸಕ ಧೀರಜ್ ಮುನಿರಾಜ್ ಅವರು ಸದನದಲ್ಲಿ ಹಲವಾರು ಬಾರಿ ಧ್ವನಿ ಎತ್ತಿದ್ದಾರೆ. ಕಸ ವಿಲೇವಾರಿ ಘಟಕವಿರುವ ಸುತ್ತಮುತ್ತಲಿನ ಹಳ್ಳಿಗಳ ಜನರು ಶುದ್ಧ ಗಾಳಿ ಸಿಗದೆ ಗುಣಮಟ್ಟದ ಜೀವನ ನಡೆಸಲು ಸಾಧ್ಯವಾಗದೇ ಊರು ಬಿಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಮತ್ತೆ ನಮ್ಮ ದೊಡ್ಡಬಳ್ಳಾಪುರ ಮಾರ್ಗವಾಗಿ ಕಸದ ಲಾರಿಗಳು ಸಂಚರಿಸಿ ಉಳಿದವರ ಪ್ರಾಣಕ್ಕೂ ಕುತ್ತು ತರುವ ಕೆಲಸ ಮಾಡಲಾಗುತ್ತಿದೆ ಎಂದು ಆರೋಪಿಸಿದರು.ಹಲವು ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.