ಗುತ್ತಿಗೆದಾರರ ನಿರ್ಲಕ್ಷ್ಯಕ್ಕೆ ಜಲ್ಲಿ ರಸ್ತೆಯಲ್ಲೇ ಸಂಚಾರ

| Published : Feb 12 2025, 12:32 AM IST

ಸಾರಾಂಶ

ಗುತ್ತಿಗೆದಾರರೊಬ್ಬ ಕಾಮಗಾರಿಯ ಗುತ್ತಿಗೆ ಪಡೆದು ಅಲ್ಪಸ್ವಲ್ಪ ಚೆನ್ನಾಗಿದ್ದ ರಸ್ತೆಯನ್ನು ಸಂಪೂರ್ಣವಾಗಿ ಅಗೆದು ಡಾಂಬರೀಕರಣಗೊಳಿಸುವುದಾಗಿ ಹೇಳಿ, ಜಲ್ಲಿ ಕಲ್ಲುಗಳನ್ನು ರಸ್ತೆಯಲ್ಲಿ ಹಾಕಿ ಮೂರು ತಿಂಗಳಾಗಿದೆ. ಇದುವರೆಗೂ ಗುತ್ತಿಗೆದಾರ ಗ್ರಾಮದ ಕಡೆ ಮುಖ ಮಾಡಿಲ್ಲ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಡಾಂಬರೀಕರಣ ಮಾಡಲು, ರಸ್ತೆಯಲ್ಲಿ ಜೆಲ್ಲಿ ಕಲ್ಲುಗಳನ್ನು ಹಾಕಿ ಮೂರು ತಿಂಗಳಾದರೂ ಡಾಂಬರೀಕರಣ ಮಾಡದೆ ನಾಪತ್ತೆಯಾಗಿರುವುದರಿಂದ, ಗ್ರಾಮಸ್ಥರು ಹಲವು ಸಮಸ್ಯೆಗಳನ್ನು ಎದುರಿಸುವಂತಾಗಿದ್ದು, ಇದಕ್ಕೆ ಮುಕ್ತಿ ಯಾವಾಗ ಎಂಬುದು ಗ್ರಾಮಸ್ಥರ ಪ್ರಶ್ನೆಯಾಗಿದೆ.

ತಾಲೂಕಿನ ತೊಪ್ಪನಹಳ್ಳಿ ಗ್ರಾಪಂ ಬೊಂಪಲ್ಲಿಯಿಂದ ಕೀರಮಂದೆ ಗ್ರಾಮದವರೆಗೂ, 1.5 ಕಿ.ಮೀ ರಸ್ತೆ ಹಾಳಾಗಿದ್ದು, ರಸ್ತೆಯನ್ನು ದುರಸ್ತಿಗೊಳಿಸುವ ಸಲುವಾಗಿ ಗ್ರಾಮಸ್ಥರು ಶಾಸಕರಿಗೆ ಮನವಿ ಸಲ್ಲಿಸಿದ ಮೇರೆಗೆ ಡಾಂಬರೀಕರಣಕ್ಕೆ ಮುಖ್ಯಮಂತ್ರಿಗಳ ವಿಶೇಷ ಅನುದಾನ ಮಂಜೂರು ಮಾಡಿಸಿದ್ದರು. ಆದರೆ ಗುತ್ತಿಗೆದಾರರೊಬ್ಬ ಕಾಮಗಾರಿಯ ಗುತ್ತಿಗೆ ಪಡೆದು ಅಲ್ಪಸ್ವಲ್ಪ ಚೆನ್ನಾಗಿದ್ದ ರಸ್ತೆಯನ್ನು ಸಂಪೂರ್ಣವಾಗಿ ಅಗೆದು ಡಾಂಬರೀಕರಣಗೊಳಿಸುವುದಾಗಿ ಹೇಳಿ, ಜಲ್ಲಿ ಕಲ್ಲುಗಳನ್ನು ರಸ್ತೆಯಲ್ಲಿ ಹಾಕಿ ಮೂರು ತಿಂಗಳಾಗಿದೆ. ಇದುವರೆಗೂ ಗುತ್ತಿಗೆದಾರ ಗ್ರಾಮದ ಕಡೆ ಮುಖ ಮಾಡಿಲ್ಲ. ಇದರಿಂದ ಈ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಸಂಚಕಾರ ಉಂಟಾಗಿದೆ. ಹಗಲಲ್ಲೇ ವಾಹನಗಳು ಹರಸಾಹಸ ಪಡಬೇಕಾಗಿದ್ದು, ಇನ್ನು ರಾತ್ರಿಯ ವೇಳೆ ಹೇಳ ತೀರದ ಕಥೆಯಾಗಿದೆ. ನಿತ್ಯ ಗ್ರಾಮದಿಂದ ಶಾಲಾ ವಾಹನಗಳು ಜಲ್ಲಿ ಕಲ್ಲು ತುಂಬಿರುವ ರಸ್ತೆಯಲ್ಲಿ ಸಮಯಕ್ಕೆ ಸಂಚರಿಸಲಾಗದೆ, ಶಾಲೆಗೆ ತಡವಾಗಿ ಹೋಗುವಂತಾಗಿದೆ ಎಂದು ಪೋಷಕರು ದೂರಿದ್ದಾರೆ. ಇನ್ನು ಪಟ್ಟಣಕ್ಕೆ ಕೆಲಸ ಕಾರ್ಯಗಳಿಗೆ, ಕಾಲೇಜು ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಹೋಗಲು ಸಾಧ್ಯವಾಗುತ್ತಿಲ್ಲ. ಈ ರಸ್ತೆಯಲ್ಲೇ ಸಂಚರಿಸಿ ದ್ವಿಚಕ್ರ ವಾಹನಗಳ ಟೈರ್‌ಗಳು ಪಂಚರ್ ಆಗುತ್ತಿದ್ದು, ಗುತ್ತಿಗೆದಾರರನ್ನು ಶಪಿಸಿಕೊಂಡು ಹೋಗುವಂತಾಗಿದೆ. ದೇವರು ವರ ಕೊಟ್ರೂ ಪೂಜಾರಿ ಕೊಡಲಿಲ್ಲ ಎಂಬಂತೆ ರಸ್ತೆ ದುರಸ್ತಿಗೆ ಶಾಸಕರು ಅನುದಾನ ತಂದರೂ ಸಮಯಕ್ಕೆ ಗುತ್ತಿಗೆದಾರ ಕಾಮಗಾರಿ ಮಾಡಿ ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸದೆ, ಕಡೆಗಣಿಸಿರುವುದರಿಂದ ಜನರಿಗೆ ತೊಂದೆಯಾಗಿದೆ. ಕೂಡಲೇ ಗುತ್ತಿಗೆದಾರ ಅರ್ಧಕ್ಕೆ ನಿಲ್ಲಿಸಿರುವ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.