ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಹೊಸ ವರ್ಷಾಚರಣೆ ಹಾಗೂ ಮುಂಬರುವ ಸಂಕ್ರಾಂತಿ ನಿಮಿತ್ತ ಹೆಚ್ಚಿನ ಜನರು ಜಮಾಯಿಸುವ ಹಿನ್ನೆಲೆಯಲ್ಲಿ ನಗರದ ಬ್ಯಾಟರಾಯನಪುರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ರಸ್ತೆಯ ಫಿನಿಕ್ಸ್ ಮಾಲ್ ಆಫ್ ಏಶಿಯಾಗೆ ಹದಿನಾರು ದಿನ ನಿಷೇಧಾಜ್ಞೆ ಜಾರಿಗೊಳಿಸಿ ಜನ ಸಂಚಾರಕ್ಕೆ (ಸಂಪೂರ್ಣ ಬಂದ್) ಪೊಲೀಸರು ನಿರ್ಬಂಧ ವಿಧಿಸಿದ್ದಾರೆ.ಇತ್ತೀಚೆಗೆ ಮಾಲ್ ಆಫ್ ಏಶಿಯಾಗೆ ಆಗಮಿಸುವ ಸಾರ್ವಜನಿಕರು ರಸ್ತೆ ಬದಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುತ್ತಿದ್ದರು. ಇದರಿಂದ ಸಂಚಾರಕ್ಕೆ ಮಾತ್ರವಲ್ಲದೆ ಕಾನೂನು ಮತ್ತು ಸುವ್ಯವಸ್ಥೆ ಮೇಲೂ ಪರಿಣಾಮ ಉಂಟಾಗಿತ್ತು. ಈ ಬಗ್ಗೆ ಪೊಲೀಸ್ ಆಯುಕ್ತರಿಗೆ ಜಂಟಿ ಆಯುಕ್ತ (ಸಂಚಾರ), ಈಶಾನ್ಯ ವಿಭಾಗದ ಡಿಸಿಪಿ ಹಾಗೂ ಸ್ಥಳೀಯ ಪೊಲೀಸ್ ಇನ್‌ಸ್ಪೆಕ್ಟರ್ ವರದಿ ನೀಡಿದ್ದರು. ಈ ವರದಿ ಆಧರಿಸಿ ಆಯುಕ್ತ ಬಿ.ದಯಾನಂದ್ ಅವರು, ಮಾಲ್ ಆಫ್ ಏಶಿಯಾಗೆ ಡಿ.31ರಿಂದ ಜ.15ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.
ಇದೇ ಅಕ್ಟೋಬರ್‌ನಲ್ಲಿ ಆರಂಭವಾದ ನಂತರ ಮಾಲ್ ಸಮೀಪ ಸಾರ್ವಜನಿಕರ ವಾಹನಗಳ ಸಂಚಾರಕ್ಕೆ ಭಾರಿ ಆಡಚರಣೆಯಾಗಿತ್ತು. ಈ ಸಮಸ್ಯೆ ಬಗ್ಗೆ ಹಲವು ಬಾರಿ ಸಂಬಂಧಪಟ್ಟವರಿಗೆ ಪೊಲೀಸರು ತಿಳಿಸಿದ್ದರೂ ಪ್ರಯೋಜನವಾಗಿರಲಿಲ್ಲ. ಮೂರು ದಿನಗಳ ಹಿಂದೆ ಮಾಲ್‌ಗೆ ಆಯುಕ್ತರು ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಅವಲೋಕಿಸಿದ್ದರು. ಬಳಿಕ ಹೊಸ ವರ್ಷಾಚರಣೆಗೆ ಮಾಲ್‌ಗೆ ಅಸಂಖ್ಯಾತ ಜನರು ಆಗಮಿಸುವ ಹಿನ್ನೆಲೆಯಲ್ಲಿ ಸಂಚಾರ ನಿರ್ವಹಣೆಗೆ ಮಾಲ್ ಆಡಳಿತ ಮಂಡಳಿ ವಹಿಸಿರುವ ಮುಂಜಾಗ್ರತೆ ಕ್ರಮಗಳ ಕುರಿತು ಆಯುಕ್ತರು ಮಾಹಿತಿ ಪಡೆದರು.86421 ಚದರಡಿ ವಿಸ್ತೀರ್ಣದ 12 ಅಂತಸ್ತಿನ ಮಾಲ್ ಇದಾಗಿದ್ದು, ಕೇವಲ ಕೆಳಹಂತದ ಎರಡು ಅಂತಸ್ತಿನಲ್ಲಿ ವಾಹನಗಳ ನಿಲುಗಡೆ ಪ್ರದೇಶ ಮಾಡಲಾಗಿದೆ. ಆದರೆ ಈ ಪ್ರದೇಶದಲ್ಲಿ ದ್ವಿಚಕ್ರ ವಾಹನಗಳು ಸೇರಿದಂತೆ ಒಟ್ಟು 2324 ವಾಹನಗಳ ನಿಲುಗಡೆ ಮಾತ್ರ ಅವಕಾಶವಿದೆ. ಈ ಮಾಲ್‌ಗೆ ಅಸಂಖ್ಯಾತ ಜನರು ಆಗಮಿಸಿದರೆ ವಾಹನ ನಿಲುಗಡೆ ಸ್ಥಳದ ಕೊರತೆ ಇದೆ. ಹೀಗಾಗಿ ಮಾಲ್‌ಗೆ ಪ್ರವೇಶಿಸಲು ಸಾಲುಗಟ್ಟಿ ವಾಹನಗಳು ರಸ್ತೆಯಲ್ಲೇ ನಿಲುತ್ತವೆ. ಇದರಿಂದ ವಿಮಾನ ನಿಲ್ದಾಣ, ಆಸ್ಪತ್ರೆ ಹೀಗೆ ಬೇರೆಡೆ ಸಾಗುವ ಸಾರ್ವಜನಿಕರ ವಾಹನಗಳಿಗೆ ಅಡ್ಡಿಯಾಗುತ್ತದೆ. ಈ ಬಗ್ಗೆ ಮಾಲ್ ಮುಂಜಾಗ್ರತೆ ವಹಿಸದಿರುವುದು ಕಂಡು ಬಂದಿತು. ಅಲ್ಲದೆ ಜನರು ಜಮಾವಣೆಯಿಂದ ಸಂಚಾರ ಮಾತ್ರವಲ್ಲದೆ ಕಾನೂನು ಮತ್ತು ಸುವ್ಯವಸ್ಥೆಗೆ ಮೇಲೂ ಪರಿಣಾಮ ಬೀರಲಿದೆ ಎಂದು ಆಯುಕ್ತರಿಗೆ ಅಧಿಕಾರಿಗಳು ವರದಿ ನೀಡಿದ್ದರು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಲೈಸೆನ್ಸ್ ರದ್ದಿಗೆ ಪಾಲಿಕೆಗೆ ವರದಿ
ಈ ಹಿಂದೆಯೇ ಸಂಚಾರ ಸಮಸ್ಯೆಯ ಹಿನ್ನೆಲೆಯಲ್ಲಿ ಮಾಲ್ ಆಫ್ ಏಶಿಯಾಗೆ ನೀಡಿರುವ ಪರವಾನಗಿ ರದ್ದುಪಡಿಸುವಂತೆ ಸಹ ಬಿಬಿಎಂಪಿಗೆ ಪೊಲೀಸರು ವರದಿ ಸಲ್ಲಿಸಿದ್ದರು. ಆದರೆ ಈ ದೆಸೆಯಲ್ಲಿ ಬಿಬಿಎಂಪಿ ಯಾವುದೇ ಕ್ರಮ ಜರುಗಿಸಿಲ್ಲ.