ಪಾಲಕರು ಹೆಲ್ಮೆಟ್ ಧರಿಸದಿದ್ದಾಗ ಅಥವಾ ಸೀಟ್ ಬೆಲ್ಟ್ ಹಾಕದಿದ್ದಾಗ ಮಕ್ಕಳು ಅವರನ್ನು ಪ್ರಶ್ನಿಸುವ ಮೂಲಕ ಸಮಾಜದಲ್ಲಿ ದೊಡ್ಡ ಬದಲಾವಣೆ ತರಲು ಸಾಧ್ಯ. ತಮ್ಮ ಪೋಷಕರಿಗೆ ಸಂಚಾರಿ ನಿಯಮಗಳ ಬಗ್ಗೆ ನೆನಪಿಸಿದಾಗ, ಅದು ಯಾವುದೇ ದಂಡ ಅಥವಾ ಶಿಕ್ಷೆಗಿಂತ ಹೆಚ್ಚು ಪರಿಣಾಮಕಾರಿಯಾಗಿ ಕೆಲಸಮಾಡಿ ಅಪಘಾತಗಳನ್ನು ತಪ್ಪಿಸುತ್ತದೆ.
ಶಿಗ್ಗಾಂವಿ: ಪಾಲಕರು ಹೆಲ್ಮೆಟ್ ಧರಿಸದಿದ್ದಾಗ ಅಥವಾ ಸೀಟ್ ಬೆಲ್ಟ್ ಹಾಕದಿದ್ದಾಗ ಮಕ್ಕಳು ಅವರನ್ನು ಪ್ರಶ್ನಿಸುವ ಮೂಲಕ ಸಮಾಜದಲ್ಲಿ ದೊಡ್ಡ ಬದಲಾವಣೆ ತರಲು ಸಾಧ್ಯ. ತಮ್ಮ ಪೋಷಕರಿಗೆ ಸಂಚಾರಿ ನಿಯಮಗಳ ಬಗ್ಗೆ ನೆನಪಿಸಿದಾಗ, ಅದು ಯಾವುದೇ ದಂಡ ಅಥವಾ ಶಿಕ್ಷೆಗಿಂತ ಹೆಚ್ಚು ಪರಿಣಾಮಕಾರಿಯಾಗಿ ಕೆಲಸಮಾಡಿ ಅಪಘಾತಗಳನ್ನು ತಪ್ಪಿಸುತ್ತದೆ ಎಂದು ಹಾವೇರಿ ಆರ್‌ಟಿಒ ಅಧಿಕಾರಿ ಅಕ್ಷಯಕುಮಾರ ಸಂಕಮ್ಮನವರ ಹೇಳಿದರು.ಪಟ್ಟಣದ ಎಂ.ಪಿ.ಎಂ. ಸಂಸ್ಕೃತಿ ಪ್ರಾಥಮಿಕ ಶಾಲೆಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಹಾವೇರಿ ಮತ್ತು ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಹಾವೇರಿ ಇಲಾಖೆಯಿಂದ ಆಯೋಜಿಸಲಾಗಿದ್ದ ೩೭ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳನ್ನು ತಡೆಗಟ್ಟಲು ಸಂಚಾರಿ ನಿಯಮಗಳ ಪಾಲನೆ ಅಗತ್ಯ. ರಸ್ತೆ ದಾಟುವಾಗ ಪಾಲಿಸಬೇಕಾದ ಎಚ್ಚರಿಕೆಗಳು, ಜೀಬ್ರಾ ಕ್ರಾಸಿಂಗ್ ಬಳಕೆ ಹಾಗೂ ಸಿಗ್ನಲ್ ದೀಪಗಳ ಮಹತ್ವದ ಬಗ್ಗೆ ವಿದ್ಯಾರ್ಥಿಗಳು ತಿಳಿದುಕೊಂಡು ಪಾಲಿಸಬೇಕು ಎಂದರು.ಸಂಸ್ಕೃತಿ ಶಾಲೆಯ ಮುಖ್ಯೋಪಾಧ್ಯಾಯಿನಿ ಅನಿತಾ ಹಿರೇಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿ, ಅತಿ ವೇಗ ಚಾಲನೆ, ಮೊಬೈಲ್ ಬಳಕೆ ಮತ್ತು ಅಪ್ರಾಪ್ತ ವಯಸ್ಕರು ವಾಹನ ಚಾಲನೆ ಮಾಡುವುದರಿಂದ ಅತಿಹೆಚ್ಚು ಅನಾಹುತಗಳು ಆಗುತ್ತಿದ್ದು, ಪಾಲಕರು ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಸಾರ್ವಜನಿಕರು ಶಾಲಾ ಆವರಣಗಳ ಮುಂದಿನ ರಸ್ತೆಗಳಲ್ಲಿ ನಿಧಾನವಾಗಿ ವಾಹನಗಳನ್ನು ಚಾಲನೆ ಮಾಡಬೇಕು ಎಂದು ಹೇಳಿದರು.ಶಿಕ್ಷಕ ಗದಿಗೆಪ್ಪ ಅಣ್ಣಿಗೇರಿ ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧಿಸಿದರು.ಕಾರ್ಯಕ್ರಮದಲ್ಲಿ ವಿನಯಕುಮಾರ ಕೌಳಿ ವಿನು ಎಂ.ಎಸ್, ದೀಪಾ ಗೋಗೇರಿ, ಸಮಿತಾ ಗೌರಿಮಠ, ಸ್ವೇತಾ ದುಬೆ, ಸ್ವಪ್ನಾ ಪಟ್ಟೆದ, ಗಾಯಿತ್ರಿ ಎಂ.ವಿ., ರಾಜೇಶ್ವರಿ ಪಾಟೀಲ, ಕವಿತಾ ಲಂಗೋಟಿ, ಗದಿಗೆಪ್ಪ ಅಣ್ಣಿಗೇರಿ, ಸವಿತಾ ಹೊನ್ನಣ್ಣವರ, ಲಕ್ಷ್ಮಿ, ನಿಖಿತಾ ಕಂಕನಾವಡ, ಪೂಜಾ ಹಿರೇಮಠ ಇತರರಿದ್ದರು.