ಚಾರ್ಮಾಡಿ: ಮರ ಉರುಳಿ ಸಂಚಾರ ವ್ಯತ್ಯಯ

| Published : Jul 31 2024, 01:06 AM IST

ಸಾರಾಂಶ

ಚಾರ್ಮಾಡಿ ಮತ್ತು ಕೊಟ್ಟಿಗೆಹಾರ ಚೆಕ್ ಪೋಸ್ಟ್ ಗಳಲ್ಲಿ ವಾಹನಗಳನ್ನು ತಡೆದು ಘಾಟಿ ಪ್ರದೇಶ ಸುಗಮ ಸಂಚಾರ ಆರಂಭವಾದ ಬಳಿಕ ಬಿಡಲಾಯಿತು.
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಸುರಿದ ಭಾರಿ ಮಳೆಗೆ ಅಂತರ್ಜಿಲ್ಲೆಗಳನ್ನು ಜೋಡಿಸುವ ಚಾರ್ಮಾಣಿ ಕಣಿವೆ ರಸ್ತೆಯಲ್ಲಿನ 9ನೇ ತಿರುವಿನ ಸಮೀಪ ಬೃಹತ್ ಗಾತ್ರದ ಮರ ಉರುಳಿದ ಪರಿಣಾಮ 4 ಗಂಟೆಗಳ ಕಾಲ ಸಂಚಾರ ವ್ಯತ್ಯಯ ಉಂಟಾದ ಘಟನೆ ಮಂಗಳವಾರ ಮುಂಜಾನೆ ನಡೆದಿದೆ.

ಬೆಳಗ್ಗೆ 4ರ ಸುಮಾರಿಗೆ ಮರದೊಂದಿಗೆ ಗುಡ್ಡವು ಜರಿದು ವಾಹನಗಳು ರಸ್ತೆಯಲ್ಲೇ ಸಾಲುಗಟ್ಟಿ ನಿಲ್ಲಬೇಕಾಯಿತು. ಇಲಾಖೆಗಳೊಂದಿಗೆ ಸ್ಥಳೀಯರು, ಸಮಾಜ ಸೇವಕರು, ಚಾಲಕರು ಸೇರಿ ಮರ ಹಾಗೂ ಕಲ್ಲು, ಮಣ್ಣು ತೆರವುಗೊಳಿಸಿದರು. ಸುಮಾರು ನಾಲ್ಕು ತಾಸು ಘಾಟಿಯಲ್ಲಿ ಸಂಚಾರ ಸ್ಥಗಿತಗೊಂಡು ಬೆಳಗ್ಗೆ 8ರ ಸುಮಾರಿಗೆ ವಾಹನ ಸಂಚಾರ ಪುನಾರಂಭವಾಯಿತು.

ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಚಾರ್ಮಾಡಿ ಮತ್ತು ಕೊಟ್ಟಿಗೆಹಾರ ಚೆಕ್ ಪೋಸ್ಟ್ ಗಳಲ್ಲಿ ವಾಹನಗಳನ್ನು ತಡೆದು ಘಾಟಿ ಪ್ರದೇಶ ಸುಗಮ ಸಂಚಾರ ಆರಂಭವಾದ ಬಳಿಕ ಬಿಡಲಾಯಿತು.

ಕಳೆದ ಶುಕ್ರವಾರ ಮುಂಜಾನೆ ಘಾಟಿಯಲ್ಲಿ ಮರದೊಂದಿಗೆ ಗುಡ್ಡ ಕುಸಿದು ಎರಡು ತಾಸು ಸಂಚಾರ ಸ್ಥಗಿತಗೊಂಡಿತ್ತು. 7,9,11ನೇ ತಿರುವುಗಳಲ್ಲಿ ಅಲ್ಲಲ್ಲಿ ಗುಡ್ಡ ಕುಸಿತ ಉಂಟಾಗಿ ದುರಸ್ತಿ ಕಾಮಗಾರಿ ನಡೆಸಿದ್ದು ಶನಿವಾರ ತಹಸೀಲ್ದಾರ್ ನೇತೃತ್ವದ ತಂಡ ಘಾಟಿ ಭಾಗದಲ್ಲಿ ಪರಿಶೀಲನೆ ನಡೆಸಿತ್ತು. ಹಾಗೂ ಸಂಚಾರಕ್ಕೆ ಯಾವುದೇ ಸಮಸ್ಯೆ ಇಲ್ಲದ ಕುರಿತು ಮಾಹಿತಿ ನೀಡಿತ್ತು.ಚಾರ್ಮಾಡಿ ಘಾಟಿ ಪರಿಸರದಲ್ಲಿ ಸಾಕಷ್ಟು ಅಪಾಯದ ಸ್ಥಿತಿ ಇದೆ. ಈಗಾಗಲೇ ಅಲ್ಲಲ್ಲಿ ಕುಸಿತಗಳು ಸಂಭವಿಸುತ್ತಿವೆ. ಅಪಾಯಕಾರಿ ತಡಗೋಡೆ, ಮಂಜಿನ ವಾತಾವರಣ, ನಿರಂತರ ಮಳೆ, ರಸ್ತೆಯಲ್ಲಿ ಹರಿಯುವ ಮಳೆ ನೀರು, ಗುಡ್ಡಗಳ ಮೇಲಿರುವ ಬೃಹತ್ ಬಂಡೆಗಳು ಯಾವುದೇ ಸಮಯ ಸಂಚಾರಕ್ಕೆ ತಡೆಯಾಗಬಹುದು. ಇದರೊಂದಿಗೆ ಸಾವಿರಾರು ಅಪಾಯಕಾರಿ ಮರಗಳು ರಸ್ತೆ ಬದಿ ಇದ್ದು ಈಗಾಗಲೇ ಮಳೆಯಿಂದ ಮಣ್ಣು ಸವಕಳಿಗೊಂಡು ಆಗಾಗ ರಸ್ತೆಗೆ ಉರುಳುತ್ತಿವೆ. ಗುಡ್ಡ ಭಾಗದ ಮರಗಳು ಉರುಳುವ ವೇಳೆ ಗುಡ್ಡವು ಕುಸಿತಗೊಂಡು ರಸ್ತೆಗೆ ಬೀಳುತ್ತದೆ. ಆಗ ಲೋಡುಗಟ್ಟಲೆ ಮಣ್ಣು, ಬೃಹತ್ ಗಾತ್ರದ ಕಲ್ಲುಗಳು ರಸ್ತೆಗೆ ಬೀಳುತ್ತಿದ್ದು ಇವುಗಳ ತೆರವಿಗೆ ಹೆಚ್ಚಿನ ಸಮಯ ತಗುಲುತ್ತದೆ. ಚಾರ್ಮಾಡಿ ಘಾಟಿಯ ದಕ ವಿಭಾಗದ ಸಂಪರ್ಕ ರಸ್ತೆಗಳು ಸಂಪೂರ್ಣ ದುಸ್ಥಿತಿಯಲ್ಲಿವೆ.

ಘಾಟಿ ಭಾಗದಲ್ಲಿ ಮೊಬೈಲ್ ನೆಟ್ವರ್ಕ್ ಇಲ್ಲದ ಕಾರಣ ಇಂತಹ ಘಟನೆಗಳು ಬೆಳಕಿಗೆ ಬರುವಾಗ ತಡವಾಗುತ್ತಿದ್ದು ಸಮಸ್ಯೆ ಪರಿಹಾರ ತಕ್ಷಣಕ್ಕೆ ಸಾಧ್ಯವಾಗುತ್ತಿಲ್ಲ. ಟ್ರಾಫಿಕ್ ಜಾಮ್, ರಸ್ತೆ ಬಂದ್ ಆದ ಸಂದರ್ಭದಲ್ಲಿ ಶೌಚಾಲಯ ವ್ಯವಸ್ಥೆಯು ಇಲ್ಲದ ಘಾಟಿ ಪ್ರದೇಶದಲ್ಲಿ ಪ್ರಯಾಣಿಕರ ಪರದಾಟ ಹೇಳ ತೀರದು. ಕುಡಿಯುವ ನೀರು, ಅಗತ್ಯ ಆಹಾರವು ಘಾಟಿ ಪ್ರದೇಶದಲ್ಲಿ ಲಭ್ಯವಿಲ್ಲದ ಕಾರಣ ಅನಗತ್ಯ, ರಾತ್ರಿ ಪ್ರಯಾಣ ಆದಷ್ಟು ಮುಂದೂಡಿದರೆ ಉತ್ತಮ.

ಘಾಟಿ ಪ್ರದೇಶದಲ್ಲಿ ಆಗಾಗ ಸಂಚಾರ ವ್ಯತ್ಯಯ ಉಂಟಾಗುತ್ತಿರುವುದು ಅನೇಕ ರೋಗಿಗಳಿಗೂ ಸಮಸ್ಯೆ ನೀಡಿದೆ. ಜಿಲ್ಲೆಯ ಭಾಗಕ್ಕೆ ಆಗಮಿಸುವ ಘಟ್ಟ ಪ್ರದೇಶದ ಜನರು, ಅಂಬುಲೆನ್ಸ್ ಗಳಿಗೂ ಘಾಟಿಯಲ್ಲಿ ಸಂಚಾರ ವ್ಯತ್ಯಯ ಕಂಡು ಬಂದರೆ ಪರದಾಡುವ ಸ್ಥಿತಿ ಏರ್ಪಡುತ್ತದೆ.