ಚಿಕ್ಕಮಗಳೂರುಅಂಬೇಡ್ಕರ್ ಜಯಂತಿ ಸಂಭ್ರಮದ ವೇಳೆ ನಿಯಂತ್ರಣ ತಪ್ಪಿದ ಕಾರೊಂದು ನುಗ್ಗಿದ ಪರಿಣಾಮ 7 ವರ್ಷದ ಬಾಲಕಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, 7 ಮಂದಿಗೆ ಗಂಭೀರ ಗಾಯಗೊಂಡ ಘಟನೆ ಮಂಗಳವಾರ ರಾತ್ರಿ ಚಿಕ್ಕಮಗಳೂರು ತಾಲೂಕಿನ ಬಿಳೆಕಲ್ಲು ಗ್ರಾಮದಲ್ಲಿ ನಡೆದಿದೆ.
ಬಾಲಕಿ ಸಾವು, 7 ಜನರಿಗೆ ಗಾಯ । ತಾಲೂಕಿನ ಬಿಳೆಕಲ್ಲು ಗ್ರಾಮದಲ್ಲಿ ಘಟನೆ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಅಂಬೇಡ್ಕರ್ ಜಯಂತಿ ಸಂಭ್ರಮದ ವೇಳೆ ನಿಯಂತ್ರಣ ತಪ್ಪಿದ ಕಾರೊಂದು ನುಗ್ಗಿದ ಪರಿಣಾಮ 7 ವರ್ಷದ ಬಾಲಕಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, 7 ಮಂದಿಗೆ ಗಂಭೀರ ಗಾಯಗೊಂಡ ಘಟನೆ ಮಂಗಳವಾರ ರಾತ್ರಿ ಚಿಕ್ಕಮಗಳೂರು ತಾಲೂಕಿನ ಬಿಳೆಕಲ್ಲು ಗ್ರಾಮದಲ್ಲಿ ನಡೆದಿದೆ.
ಮೃತ ಬಾಲಕಿ ಸಾನ್ವಿ ಎಂದು ಗುರುತಿಸಲಾಗಿದೆ. ಗಾಯಾಳುಗಳಾದ ನಿಶ್ಚಿತ್, ತೃಪ್ತಿ, ತಿಮ್ಮರಾಜು, ಉಷಾ, ಚೇತನ್, ಸೃಷ್ಠಿ ಹಾಗೂ ನಾಗರಾಜ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಆಸ್ಪತ್ರೆಗೆ ದಾಖಲಿಸಲಾಗಿದೆ.ಕುಡಿದ ಅಮಲಿನಲ್ಲಿ ವಾಹನ ಚಾಲನೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದ್ದು, ಅಪಘಾತ ಸಂಭವಿಸುತ್ತಿದ್ದಂತೆಯೇ ರೊಚ್ಚಿಗೆದ್ದ ಸ್ಥಳೀಯರು ಕಾರು ಚಾಲಕ ಸುಧಾಕರ್‌ನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದು, ಕಾರಿನ ಗಾಜುಗಳನ್ನು ಪುಡಿಪುಡಿ ಮಾಡಿದ್ದಾರೆ. ಇದೇ ವೇಳೆ, ಕಾರಿನಲ್ಲಿದ್ದ ಮತ್ತೊಬ್ಬ ವ್ಯಕ್ತಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಆಕ್ರೋಶಿತ ಗ್ರಾಮಸ್ಥರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದು ವಾತಾವರಣ ಪ್ರಕ್ಷುಬ್ಧಗೊಂಡಿತ್ತು. ಚಾಲಕ ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲು ಪೊಲೀಸರು ಮುಂದಾಗುತ್ತಿದ್ದಾರೆ ಎಂದು ಆರೋಪಿಸಿದ ಗ್ರಾಮಸ್ಥರು, ಗಾಯಾಳುಗಳ ಕಡೆ ಗಮನ ಹರಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗುತ್ತಿದ್ದಂತೆ ಸುಮಾರು 50ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗಾಗಿ ನಿಯೋಜಿ ಸಲಾಗಿದೆ. ಹೆಚ್ಚುವರಿ ಜಿಲ್ಲಾ ವರಿಷ್ಠಾಧಿಕಾರಿ ಜಯಕುಮಾರ್ ಆಸ್ಪತ್ರೆಗೆ ಭೇಟಿ ನೀಡಿ ಮೃತ ಬಾಲಕಿ ಪೋಷಕರನ್ನು ಸಮಾಧಾನಿಸಲು ಯತ್ನಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.