ತಡೆಗೋಡೆ ನಿರ್ಮಿಸಿದ್ದರೆ ಶಿರೂರಿನಲ್ಲಿ ಇಷ್ಟೊಂದು ದೊಡ್ಡ‌ ದುರಂತ ಆಗುತ್ತಿರಲಿಲ್ಲ: ಸತೀಶ ಸೈಲ್

| Published : Jul 23 2024, 12:37 AM IST / Updated: Jul 23 2024, 12:12 PM IST

ಸಾರಾಂಶ

ಭಾರತ್ ಬೆಂಜ್ ಲಾರಿಯಲ್ಲಿ ಕ್ಲೋಸ್ ಮಾಡಿ ಕುಳಿತರೆ ಆರು ದಿನ ಬದುಕಬಹುದು ಎನ್ನುವ ವಿಚಾರ ತಿಳಿಸಿದ್ದರು. ಈ ಕಾರಣದಿಂದ ನಿರಂತರ ಹುಡುಕಾಟ ಮಾಡಲಾಗಿದೆ.‌ ಘಟನೆ ನಡೆದ ಸ್ಥಳ ಸೂಕ್ಷ್ಮ ಸ್ಥಳ ಎಂದು ವರದಿ ನೀಡಿದ್ದರೂ ನಿರ್ಲಕ್ಷ್ಯ ಮಾಡಿರುವುದು ದುರಂತಕ್ಕೆ ಕಾರಣವಾಗಿದೆ ಎಂದು ಶಾಸಕ ಸತೀಶ ಸೈಲ್ದ ತಿಳಿಸಿದರು.

ಕಾರವಾರ: ತಡೆಗೋಡೆ ನಿರ್ಮಿಸಿದ್ದರೆ ಶಿರೂರಿನಲ್ಲಿ ಇಷ್ಟೊಂದು ದೊಡ್ಡ‌ ದುರಂತ ಆಗುತ್ತಿರಲಿಲ್ಲ ಎಂದು ಶಾಸಕ ಸತೀಶ್ ಸೈಲ್ ತಿಳಿಸಿದರು.ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದುರಂತ ನಡೆದ ಸ್ಥಳದ ಸಮೀಪ 30 ವರ್ಷಗಳ ಹಿಂದೆ ತಡೆಗೋಡೆ ನಿರ್ಮಿಸಲಾಗಿದೆ. ಅಲ್ಲಿ ಯಾವುದೇ ಕುಸಿತ ಆಗಿಲ್ಲ ಎಂದರು. ನಮ್ಮ ಸರ್ಕಾರ ಬಡವರ ಪರ ಇದೆ.‌ ಸಿಎಂ ಜಿಲ್ಲೆಗೆ ಬಂದು ಸಮಸ್ಯೆ ಅರಿತುಕೊಂಡು, ಅಧಿಕಾರಿಗಳ ಜತೆ ಸಭೆ ನಡೆಸಿದ್ದಾರೆ. 

ನೊಂದ ಜನರ ನೆರವಿಗೆ ಸರ್ಕಾರ ನಿಲ್ಲಲಿದೆ ಎಂದರು.ಭಾರತ್ ಬೆಂಜ್ ಲಾರಿಯಲ್ಲಿ ಕ್ಲೋಸ್ ಮಾಡಿ ಕುಳಿತರೆ ಆರು ದಿನ ಬದುಕಬಹುದು ಎನ್ನುವ ವಿಚಾರ ತಿಳಿಸಿದ್ದರು. ಈ ಕಾರಣದಿಂದ ನಿರಂತರ ಹುಡುಕಾಟ ಮಾಡಲಾಗಿದೆ.‌ ಘಟನೆ ನಡೆದ ಸ್ಥಳ ಸೂಕ್ಷ್ಮ ಸ್ಥಳ ಎಂದು ವರದಿ ನೀಡಿದ್ದರೂ ನಿರ್ಲಕ್ಷ್ಯ ಮಾಡಿರುವುದು ದುರಂತಕ್ಕೆ ಕಾರಣವಾಗಿದೆ ಎಂದರು.ಐಆರ್‌ಬಿ ಟೋಲ್ ಸಂಗ್ರಹದಲ್ಲೂ ಕೆಲ ನಿಯಮಗಳಿವೆ. ಹಳೆಯ ರಸ್ತೆಯ ಜತೆ ಮತ್ತೊಂದು ರಸ್ತೆ ಮಾಡಿ ಹಣ ಸಂಗ್ರಹ ಮಾಡುತ್ತಿದ್ದಾರೆ. ಮಾಜಾಳಿಯಿಂದ ಭಟ್ಕಳವರೆಗೆ ಇರುವ ಸಮಸ್ಯೆಯನ್ನ ತಿಳಿಸಿದ್ದೇವೆ. ಆದರೆ‌‌ ಇದಕ್ಕೆ ಯಾರೂ ಸ್ಪಂದಿಸುತ್ತಿಲ್ಲ ಎಂದರು.ನೌಕಾನೆಲೆಗಾಗಿ ನಾಲ್ಕು ಸಾವಿರಕ್ಕೂ ಅಧಿಕ ಎಕರೆ ಭೂಮಿ ಕೊಟ್ಟ ಕಾರವಾರ- ಅಂಕೋಲಾ ಜನರಿಗೆ ಬೆಲೆ ಇಲ್ಲದಂತಾಗಿದೆ. ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಆಪಾದಿಸಿದರು. ಶಂಭು ಶೆಟ್ಟಿ ಮತ್ತಿತರರು ಇದ್ದರು. 

ಕಾರ್ಯಾಚರಣೆ ತ್ವರಿತಗೊಳಿಸಲು ಮುನಾಫ್‌ ಮನವಿ

ಅಂಕೋಲಾ: ಶಿರೂರು ಗುಡ್ಡ ಕುಸಿದು ಏಳು ದಿನ ಕಳೆದಿದೆ. ಅದರೆ ಇದುವರೆಗೂ ಲಾರಿ ಮತ್ತು ಚಾಲಕ ಅರ್ಜುನ್ ಪತ್ತೆಯಾಗಿಲ್ಲ. ಕಾರ್ಯಾಚರಣೆ ಕಷ್ಟವಾದರೆ ನಮಗೆ ಮಾಡಲು ಬಿಡಿ. ನಮ್ಮ ಬಳಿ ನುರಿತ ಸಿಬ್ಬಂದಿ ಇದ್ದಾರೆ. ನಾವು ಅರ್ಜುನ ಅವರನ್ನು ಹೊರಗೆ ತೆಗೆಯುತ್ತೇವೆ ಎಂದು ಮಣ್ಣಿನಲ್ಲಿ ಹೂತು ಹೋಗಿರುವ ಲಾರಿ ಮಾಲೀಕ ಮುನಾಫ್ ತಿಳಿಸಿದ್ದಾರೆ.ಈ ಕುರಿತು ವಿಡಿಯೋ ಸಂದೇಶ ನೀಡಿರುವ ಅವರು, ಯಾರಾದರೂ ಪ್ರಾಣಾಪಾಯದಲ್ಲಿ ಸಿಲುಕಿಕೊಂಡಾಗ ಅವರ ರಕ್ಷಣೆಗೆ 24 ಗಂಟೆಗಳ ಕಾರ್ಯಾಚರಣೆ ನಡೆಸಬೇಕು. ಅದರೆ ಜಿಲ್ಲಾಡಳಿತ ಸಂಜೆ ಏಳು ಗಂಟೆಗೆ ಬಂದ್ ಮಾಡುತ್ತಿದೆ. ಏಳು ದಿನಗಳಾದರೂ ಕಾರ್ಯಾಚರಣೆ ಪೂರ್ತಿಗೊಳಿಸಲು ಆಗುತ್ತಿಲ್ಲ. ಮಣ್ಣಿನ ಒಳಗಡೆ ಅರ್ಜುನ ಏನಾಗಿದ್ದಾನೋ ಗೊತ್ತಿಲ್ಲ. 

ನಮ್ಮ ಬಳಿ ಸುಸಜ್ಜಿತ ನೂರು ಜನರ ತಂಡ ಕೇರಳದಿಂದ ಬಂದಿದೆ. ಆದರೆ ಪೊಲೀಸ್ ಇಲಾಖೆ ನಮ್ಮನ್ನು ಕಾರ್ಯಾಚರಣೆ ಮಾಡಲು ಬಿಡುತ್ತಿಲ್ಲ. ದಯಮಾಡಿ ಸ್ಥಳೀಯ ಎಲ್ಲ ಯುವಕರು ನಮ್ಮ ಕಷ್ಟಕ್ಕೆ ಕೈಜೋಡಿಸಿ, ಅರ್ಜುನ ಅವರನ್ನು ಜೀವಂತವಾಗಿ ಹೊರ ತೆಗೆಯಲು ಸಹಾಯ ಮಾಡಿ. ಜೀವ ಎಂದರೆ ಎಲ್ಲರಿಗೂ ಒಂದೇ. ದಯಮಾಡಿ ನಮ್ಮ ಸಹಾಯಕ್ಕೆ ಬನ್ನಿ ಎಂದು ಮುನಾಫ್ ವಿಡಿಯೋ ಮೂಲಕ ವಿನಂತಿಸಿದ್ದರು.