ರೈಲು ಹಳಿ ಮೇಲೆ ಬಿಎಂಟಿಸಿ ಬಸ್ಸನ್ನು ಹಿಂದೆ ತೆಗೆದುಕೊಳ್ಳುವ ವೇಳೆ ​​ರೈಲು ಡಿಕ್ಕಿ ಹೊಡೆದ ಪರಿಣಾಮ ಬಸ್‌ ಜಖಂ ಆಗಿರುವ ಘಟನೆ ಸೋಮವಾರ ಕಾಡುಗೋಡಿ ಸಮೀಪದ ಸಾದರಮಂಗಲ ಬಳಿ ಸೋಮವಾರ ಬೆಳಗ್ಗೆ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರೈಲು ಹಳಿ ಮೇಲೆ ಬಿಎಂಟಿಸಿ ಬಸ್ಸನ್ನು ಹಿಂದೆ ತೆಗೆದುಕೊಳ್ಳುವ ವೇಳೆ ​​ರೈಲು ಡಿಕ್ಕಿ ಹೊಡೆದ ಪರಿಣಾಮ ಬಸ್‌ ಜಖಂ ಆಗಿರುವ ಘಟನೆ ಸೋಮವಾರ ಕಾಡುಗೋಡಿ ಸಮೀಪದ ಸಾದರಮಂಗಲ ಬಳಿ ಸೋಮವಾರ ಬೆಳಗ್ಗೆ ನಡೆದಿದೆ.

ಸಾದರಮಂಗಲ ರೈಲ್ವೆ ಪ್ಯಾರಲಲ್ ರಸ್ತೆಯಲ್ಲಿ ಬಸ್ಸನ್ನು ಹಿಂದೆ ತೆಗೆದುಕೊಳ್ಳುವಾಗ ಈ ಅವಘಡ ಸಂಭವಿಸಿದ್ದು, ಅದೃಷ್ಟವಶಾತ್ ಬಸ್​ನಲ್ಲಿ ಪ್ರಯಾಣಿಕರು ಇರಲಿಲ್ಲ. ಹೀಗಾಗಿ ನಡೆಯಬಹುದಾಗಿದ್ದ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ.

ಘಟನೆ ವಿವರ:

ಸೋಮವಾರ ಬೆಳಗ್ಗೆ 10 ಗಂಟೆಯ ಸುಮಾರಿಗೆ ಸಾದರಮಂಗಲ ಡಿಪೋ 51ರ ಕೆಎ57 ಎಫ್‌6000 ನಂಬರ್​ನ ಬಸ್​ ಕಾಡುಗೋಡಿ ಬಸ್ ನಿಲ್ದಾಣಕ್ಕೆ ಹೋಗಬೇಕೆಂದು ಚಾಲಕ ರಿವರ್ಸ್ ತೆಗೆದುಕೊಳ್ಳಲು ರೈಲ್ವೆ ಪ್ಯಾರಲಲ್ ರಸ್ತೆಯ ರೈಲು ಹಳಿ ಮೇಲೆ ನುಗ್ಗಿಸಿದ್ದಾನೆ. ಈ ವೇಳೆ ಏಕಾಏಕಿ ಬಂದ ರೈಲು ಡಿಕ್ಕಿ ಹೊಡೆದಿದ್ದು ಬಸ್​ ಹಿಂಭಾಗ ಸಂಪೂರ್ಣ ಜಖಂ ಆಗಿದೆ.

ಈ ಘಟನೆಯಲ್ಲಿ ಬಸ್‌ ನಿರ್ವಾಹಕ ಶ್ರೀನಿವಾಸ್‌ ಎಂಬುವರು ಗಾಯಗೊಂಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ರೈಲ್ವೆ ಅಧಿಕಾರಿಗಳು ಮತ್ತು ಬಿಎಂಟಿಸಿ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿದ್ದಾರೆ. ಚಾಲಕನ ಅಜಾಗರೂಕತೆಯಿಂದ ಘಟನೆ ನಡೆದಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಚಾಲಕನ ವಿರುದ್ಧ ದೂರು ದಾಖಲು:

ಹೂಡಿ ಮತ್ತು ವೈಟ್‌ಫೀಲ್ಡ್‌ ರೈಲ್ವೆ ನಿಲ್ದಾಣದ ಮಧ್ಯೆ ಈ ಘಟನೆ ಜರುಗಿದ್ದು, ಈ ಸಂಬಂಧ ರೈಲ್ವೆ ಇಲಾಖೆಯ ಸೀನಿಯರ್‌ ಸೆಕ್ಷನ್‌ ಎಂಜಿನಿಯರ್‌ ಮುತ್ತು ಎಂಬುವರು ನೀಡಿದ ದೂರಿನನ್ವಯ ಬಸ್‌ ಚಾಲಕ ಷಣ್ಮುಗ ಎಂಬಾತ ವಿರುದ್ಧ ಕಂಟೋನ್ಮೆಂಟ್‌ ರೈಲ್ವೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.