ಇಂದಿನ ಯುವಕರಿಗೆ ಉದ್ಯಮ ಸ್ಥಾಪಿಸುವ ಬಗ್ಗೆ ತರಬೇತಿ ನೀಡುವುದು, ಉದ್ಯಮದತ್ತ ಗಮನ ಸೆಳೆಯುವ ಕಾರ್ಯ ಮಾಡಬೇಕಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಹುಬ್ಬಳ್ಳಿ: ಇಂದಿನ ಯುವಕರಿಗೆ ಉದ್ಯಮ ಸ್ಥಾಪಿಸುವ ಬಗ್ಗೆ ತರಬೇತಿ ನೀಡುವುದು, ಉದ್ಯಮದತ್ತ ಗಮನ ಸೆಳೆಯುವ ಕಾರ್ಯ ಮಾಡಬೇಕಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಅವರು ಭಾನುವಾರ ಇಲ್ಲಿಯ ಆರ್.ಎನ್. ಶೆಟ್ಟಿ ರಸ್ತೆಯಲ್ಲಿರುವ ಎಸ್‌ಎಸ್‌ಕೆ ಸಣ್ಣ ಕೈಗಾರಿಕೆಗಳ ಸಂಘದ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಸಣ್ಣ ಕೈಗಾರಿಕೆಗಳಿಗೆ ಕೇಂದ್ರ ಸರ್ಕಾರ ಸಾಕಷ್ಟು ಪ್ರೋತ್ಸಾಹ ನೀಡುತ್ತಿದೆ. ಸಾಕಷ್ಟು ಬಜೆಟ್ ಮೀಸಲಿಡಲಾಗುತ್ತಿದೆ. ಭಾರತದ ಉತ್ಪನ್ನಗಳಿಗೆ ಜಾಗತಿಕ ಮಟ್ಟದಲ್ಲಿ ಸಾಕಷ್ಟು ಬೇಡಿಕೆಗಳಿವೆ. ಜಾಗತಿಕ ಮಾರುಕಟ್ಟೆಯಲ್ಲಿ ಶೇ. 30ರಷ್ಟು ಮೊಬೈಲ್ ಫೋನ್ ಉತ್ಪನ್ನ ಭಾರತದಲ್ಲಾಗುತ್ತಿದೆ. ಇದರ ಲಾಭವನ್ನು ಎಸ್‌ಎಸ್‌ಕೆ ಸಮಾಜದವರು ಪಡೆಯಬೇಕು ಎಂದರು.

ಸಂಸದ ಜಗದೀಶ ಶೆಟ್ಟರ ಮಾತನಾಡಿ, ಉತ್ತರ ಕರ್ನಾಟಕ ಭಾಗದಲ್ಲಿ ಎಫ್‌ಎಂಸಿಜಿ ಕ್ಲಸ್ಟರ್ ತರಬೇಕೆಂಬ ಉದ್ದೇಶದಿಂದ ನಾನು ಕೈಗಾರಿಕಾ ಸಚಿವನಾಗಿದ್ದಾಗ ನಿರ್ಣಯ ಕೈಗೊಂಡಿದ್ದೆ. ಹುಬ್ಬಳ್ಳಿಯಲ್ಲಿ ಜಾಗದ ದರ ಹೆಚ್ಚಳವಾಗಿದ್ದರಿಂದ ಇಲ್ಲಿಗೆ ಎಫ್‌ಎಂಸಿಜೆ ಬರಲಿಲ್ಲ. ಈ ಭಾಗದಲ್ಲಿ ಬಂದಿದ್ದರೆ ಲಕ್ಷಾಂತರ ಜನರಿಗೆ ಉದ್ಯೋಗ ಲಭಿಸುತ್ತಿತ್ತು ಎಂದರು.

ಎಸ್‌ಎಸ್‌ಕೆ ಸಮಾಜದ ರಾಜ್ಯಾಧ್ಯಕ್ಷ ಶಶಿಕುಮಾರ ಮೆಹರವಾಡೆ ಮಾತನಾಡಿ, ಎಸ್‌ಎಸ್‌ಕೆ ಸಮಾಜದವರು ಸಣ್ಣ ಕೈಗಾರಿಕಾ ಸಂಘ ಸ್ಥಾಪಿಸಿ ಉತ್ತಮ ಕೆಲಸ ಮಾಡಿದ್ದಾರೆ. ಈ ಕಾರ್ಯ ಇಡೀ ದೇಶಕ್ಕೆ ಮಾದರಿ ಎಂದರು.

ಸಂಘದ ಅಧ್ಯಕ್ಷ ಅರ್ಜುನಸಾ ಪವಾರ ಅಧ್ಯಕ್ಷತೆ ವಹಿಸಿದ್ದರು. ಸಂಘದ ಸಹ ಕಾರ್ಯದರ್ಶಿ ಸಂತೋಷ ಕಾಟವೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ವೇಳೆ ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು.

ಸಂಘದ ಗೌರವ ಕಾರ್ಯದರ್ಶಿ ಶ್ರೀಕಾಂತ ಕಬಾಡೆ, ಮಾಜಿ ಶಾಸಕ ಅಶೋಕ ಕಾಟವೆ, ಎಸ್‌ಎಸ್‌ಕೆ ಹು-ಧಾ ಅಧ್ಯಕ್ಷ ಸತೀಶ ಮೆಹರವಾಡೆ, ಎಸ್‌ಎಸ್‌ಕೆ ಬ್ಯಾಂಕ್ ಚೇರ್‌ಮನ್‌ ವಿಠ್ಠಲ ಲದ್ವಾ, ಉದ್ಯಮಿಗಳಾದ ನಾರಾಯಣಸಾ ನಿರಂಜನ, ರಮೇಶ ಬುರಬುರೆ, ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ರಮೇಶ ಪಾಟೀಲ ಸೇರಿದಂತೆ ಹಲವರಿದ್ದರು.