ಸಾರಾಂಶ
ವಸಂತ ಪಂಚಮಿ ನಂತರ ಬರುವ ರಥಸಪ್ತಮಿ ಒಂದು ವಿಶಿಷ್ಟ ಆಚರಣೆಯಾಗಿದೆ. ಸೂರ್ಯ ಮತ್ತು ಚಂದ್ರ ಪ್ರಪಂಚಕ್ಕೆ ಬೆಳಕು ನೀಡುವ ಪ್ರತ್ಯಕ್ಷ ದೇವರು. ಸೂರ್ಯ ಇಲ್ಲದಿದ್ದರೆ ಪ್ರಪಂಚ ಕಗ್ಗತ್ತಲಲ್ಲಿ ಮುಳುಗಬೇಕಾಗಿತ್ತು. ಹೀಗಾಗಿ ಸೂರ್ಯದೇವನಿಗೆ ವಿಶೇಷ ಗೌರವ ಸ್ಥಾನಮಾನ ಇದೆ
ಕನ್ನಡಪ್ರಭ ವಾರ್ತೆ ಮೈಸೂರು
ಹಿಂದೂ ಧರ್ಮದ ಪ್ರಮುಖ ಆಚರಣೆಗಳಲ್ಲಿ ಒಂದಾದ ರಥಸಪ್ತಮಿಯನ್ನು ಸೂರ್ಯದೇವ ಜನ್ಮ ತಾಳಿದ ದಿನದ ಅಂಗವಾಗಿ ಆಚರಿಸಿಕೊಂಡು ಬರಲಾಗಿದೆ ಎಂದು ಯೋಗ ತರಬೇತುದಾರರಾದ ಎ.ಎಲ್.ಹೇಮಾ ಹೇಳಿದರು.ವಿಜಯನಗರ 3ನೇ ಹಂತದ ಆಯುಷ್ ಚಿಕಿತ್ಸಾ ಕೇಂದ್ರದಲ್ಲಿ ರಥಸಪ್ತಮಿ ಅಂಗವಾಗಿ ಆಯೋಜಿಸಿದ್ದ 108 ಸೂರ್ಯ ನಮಸ್ಕಾರ ಪ್ರದರ್ಶನಕ್ಕೂ ಮುನ್ನಾ ನಡೆದ ವಿಶೇಷ ಪೂಜಾ ಕಾರ್ಯದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ವಸಂತ ಪಂಚಮಿ ನಂತರ ಬರುವ ರಥಸಪ್ತಮಿ ಒಂದು ವಿಶಿಷ್ಟ ಆಚರಣೆಯಾಗಿದೆ. ಸೂರ್ಯ ಮತ್ತು ಚಂದ್ರ ಪ್ರಪಂಚಕ್ಕೆ ಬೆಳಕು ನೀಡುವ ಪ್ರತ್ಯಕ್ಷ ದೇವರು. ಸೂರ್ಯ ಇಲ್ಲದಿದ್ದರೆ ಪ್ರಪಂಚ ಕಗ್ಗತ್ತಲಲ್ಲಿ ಮುಳುಗಬೇಕಾಗಿತ್ತು. ಹೀಗಾಗಿ ಸೂರ್ಯದೇವನಿಗೆ ವಿಶೇಷ ಗೌರವ ಸ್ಥಾನಮಾನ ಇದೆ ಎಂದು ಹೇಳಿದರು.ಸೂರ್ಯ ಹುಟ್ಟಿದ ದಿನವಾದ ರಥಸಪ್ತಮಿಯಂದು ನದಿ, ಸಮುದ್ರ, ಸಾಗರ ಇಲ್ಲವೇ ಮನೆಯಲ್ಲೇ ಸೂರ್ಯನಿಗೆ ಹರಕೆ ಕಟ್ಟಿ ಏಳು ಎಕ್ಕದ ಎಲೆ ಬಳಸಿ ಸ್ನಾನ ಮಾಡುವ ಮೂಲಕ ಪಾಪಗಳನ್ನು ನಿವಾರಿಸೆಂದು 108 ಮಂತ್ರಗಳನ್ನು ಪಠಿಸುವ ಮೂಲಕ ಸೂರ್ಯದೇವನನ್ನು ಪ್ರಾರ್ಥಿಸಿದರೆ ಎಲ್ಲವೂ ಒಳಿತಾಗುತ್ತದೆ ಎಂದರು.
ನಂತರ ಎ.ಎಲ್. ಹೇಮಾ ಅವರ ನೇತೃತ್ವದಲ್ಲಿ ಸುಮಾರು ಮೂವತ್ತಕ್ಕೂ ಹೆಚ್ಚು ಯೋಗ ಪಟುಗಳು ವಿಶ್ರಾಂತಿ ಇಲ್ಲದೆ ನಿರಂತರವಾಗಿ 108 ಸೂರ್ಯ ನಮಸ್ಕಾರ ಮಾಡುವ ಮೂಲಕ ರಥಸಪ್ತಮಿಯನ್ನು ವಿಶಿಷ್ಟವಾಗಿ ಆಚರಿಸಿದರು.