ಕೊಟ್ಟೂರು: ಬಿಜೆಪಿ ಕಾರ್ಯಕರ್ತರು ಸದಾ ಸಂಘಟನಾತ್ಮಕವಾಗಿ ಒಟ್ಟಾಗಿರಲು ಆಗಾಗ ಹಮ್ಮಿಕೊಳ್ಳುವ ಪ್ರಶಿಕ್ಷಣ ಅಭಿಯಾನ ಪ್ರತಿಯೊಬ್ಬರಿಗೆ ಉತ್ತಮ ಮಾರ್ಗದರ್ಶನವಾಗಿದೆ ಎಂದು ಬಿಜೆಪಿ ವಿಜಯನಗರ ಜಿಲ್ಲಾ ಅಧ್ಯಕ್ಷ ಸಂಜೀವ ರೆಡ್ಡಿ ಹೇಳಿದರು.
ಗುರುವಾರ ಪಟ್ಟಣದಲ್ಲಿ ಶ್ರೀ ಮರಳಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಸ್ಥಳೀಯ ಬಿಜೆಪಿ ಘಟಕದವರು ಹಮ್ಮಿಕೊಂಡಿದ್ದ ಹಗರಿಬೊಮ್ಮನಹಳ್ಳಿ ಮಂಡಲದ ಪ್ರಶಿಕ್ಷಣ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು. ಪಕ್ಷದ ಸಂಘಟನೆಯಲ್ಲಿ ಸದಾ ಚೇತನ ಮತ್ತು ಸ್ಫೂರ್ತಿಯಂತೆ ಕಾರ್ಯನಿರ್ವಹಿಸುವ ಕಾರಣಕ್ಕಾಗಿ ಪಕ್ಷದ ಕಾರ್ಯಕರ್ತರಿಗೆ 3 ವರ್ಷಕೊಮ್ಮೆ ಪ್ರಶಿಕ್ಷಣ ಅಭಿಯಾನ ಹಮ್ಮಿಕೊಳ್ಳಲಾಗುತ್ತದೆ ಎಂದರು.ಬಳ್ಳಾರಿ ವಿಭಾಗದ ಉಪ ಪ್ರಭಾರಿ ಪಿ. ಚನ್ನಬಸವನಗೌಡ ಪಾಟೀಲ್ ಮಾತನಾಡಿ, ವಿಶ್ವದಲ್ಲಿ ಅತಿ ದೊಡ್ಡ ರಾಜಕೀಯ ಪಕ್ಷವಾಗಿ ಹೊರಹೊಮ್ಮಲು ಕಾರ್ಯಕರ್ತರ ಕೊಡುಗೆ ಅಪಾರ ಎಂದರು.
ಮಂಡಲ ಅಧ್ಯಕ್ಷ ಬೆಣಕಲ್ಲು ಪ್ರಕಾಶ್ ಮಾತನಾಡಿ, ಬಿಜೆಪಿ ತನ್ನದೇ ಆದ ಸೈದ್ಧಾಂತಿಕ ನೆಲಗಟ್ಟಿನ ಮೇಲೆ ತನ್ನ ಕಾರ್ಯವನ್ನು ನಡೆಸುತ್ತ ಬಂದಿದ್ದು, ಪ್ರತಿಯೊಬ್ಬರಲ್ಲಿ ಶಿಸ್ತು ಕಲಿಸುವ ಪಾಠಶಾಲೆಯಾಗಿ ಇರಲು ಪಕ್ಷಕ್ಕೆ ಪ್ರಶಿಕ್ಷಣ ಅಭಿಯಾನ ಸಹಕಾರಿಯಾಗಿದೆ ಎಂದರು.ಪಕ್ಷದ ಜಿಲ್ಲಾ ಮುಖಂಡ ಬಲ್ಲಾಹುಣಸಿ ರಾಮಣ್ಣ, ಹಿರಿಯ ಮುಖಂಡ ಎಸ್. ತಿಂದಪ್ಪ, ಹನುಮಂತಪ್ಪ ಕೋಗಳಿ, ದಿವಾಕರ ಪಾಟೀಲ್, ಪಪಂ ಮಾಜಿ ಉಪಾಧ್ಯಕ್ಷ ಜಿ. ಸಿದ್ದಯ್ಯ, ಮಾಜಿ ಸದಸ್ಯ ಬೋರ್‌ವೆಲ್ ತಿಪ್ಪೇಸ್ವಾಮಿ, ಮರಬದ ಕೊಟ್ರೇಶ್, ವೀರೇಶ್ ಗೌಡ, ಜಿಪಂ ಮಾಜಿ ಸದಸ್ಯ, ಪಿ.ಎಚ್. ಉಮಾದೇವಿ ಕೊಟ್ರೇಶ್, ಮಂಜುನಾಥ ಹಿರೇಮಠ, ಚಿರಿಬಿ ಪ್ರಕಾಶ್, ಪಿ. ಗುಣವತಿ, ಉಮಾದೇವಿ ದೇವರಮನಿ ಭಾಗವಹಿಸಿದ್ದರು.
ಕೊಟ್ಟೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಪಂಪಾಪತಿ ಅಂಗಡಿ ಸ್ವಾಗತಿಸಿದರು.