ಕನ್ನಡಪ್ರಭ ವಾರ್ತೆ ಬಾಗಲಕೋಟೆ
ತಂತ್ರಜ್ಞಾನದ ಪರಿಣಾಮ ಇಂದಿನ ದಿನಗಳಲ್ಲಿ ದಂತ ವಿಜ್ಞಾನದ ಅಧ್ಯಯನಕ್ಕೆ ಅಗತ್ಯವಾದ ಮಾಹಿತಿ ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಾಗುತ್ತಿದೆ. ಲಭ್ಯವಿರುವ ಸಂಪನ್ಮೂಲ ಬಳಸಿಕೊಂಡು ದಂತ ವೈದ್ಯಕೀಯ ಕ್ಷೇತ್ರದಲ್ಲಿ ಪರಿಣಿತಿ ಸಾಧಿಸಲು ಸಾಧ್ಯವಿದೆ. ಅಧ್ಯಯನದ ಜೊತೆಗೆ ಯುವ ದಂತವೈದ್ಯರಿಗೆ ತರಬೇತಿ ನೀಡುವುದು ಅಗತ್ಯವಿದೆ ಎಂದು ಭಾರತೀಯ ಬಾಯಿ ಮತ್ತು ಮುಖದ ಶಸ್ತ್ರಚಿಕಿತ್ಸಾ ತಜ್ಞರ ಕರ್ನಾಟಕ ಶಾಖೆಯ ಅಧ್ಯಕ್ಷ ಮತ್ತು ಎಸ್‌ಡಿಎಂ ಡೆಂಟಲ್ ಕಾಲೇಜ್ ಪ್ರಾಧ್ಯಾಪಕ ಡಾ.ವೆಂಕಟೇಶ ಆನೆಹೊಸುರ ಅಭಿಪ್ರಾಯಪಟ್ಟರು.ಬಿವಿವಿ ಸಂಘದ ಪಿ.ಎಮ.ನಾಡಗೌಡ ಮೆಮೋರಿಯಲ್ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಬಾಯಿ ಮತ್ತು ಮುಖದ ಶಸ್ತ್ರಚಿಕಿತ್ಸಾ ವಿಭಾಗ ಮತ್ತು ಬಾಯಿ ಮತ್ತು ಮುಖದ ಶಸ್ತ್ರ ಚಿಕಿತ್ಸಾತಜ್ಞರ ಭಾರತೀಯ ಸಂಘದ ಕರ್ನಾಟಕ ಶಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ದಂತ ವಿಜ್ಞಾನ ಶಿಕ್ಷಣ ಕಾರ್ಯಾಗಾರದಲ್ಲಿ ಮಾತನಾಡಿದರು. ದಂತ ವೈದ್ಯಕೀಯ ಕಾರ್ಯಾಗಾರಗಳನ್ನು ರಾಜ್ಯದಾದ್ಯಂತ ಆಯೋಜಿಸಲು ಯೋಜನೆ ರೂಪಿಸಲಾಗಿದೆ. ಈ ಮೂಲಕ ದಂತ ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮತ್ತು ದಂತವೈದ್ಯರಿಗೆ ಪರಿಣತಿ ಹೊಂದಲು ಪ್ರಯೋಜನವಾಗಲಿದೆ. ಕಾರ್ಯಾಗಾರಗಳ ಮೂಲಕ ಪರಿಣತಿ ಸಾಧಿಸಿ ರೋಗಿಗಳಿಗೆ ತೊಂದರೆಯಾಗದಂತೆ ಚಿಕಿತ್ಸೆ ನೀಡುವಂತೆ ತಿಳಿಸಿದರು.ಬಿ.ವಿ.ವಿ ಸಂಘದ ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ.ಸಜ್ಜನ(ಬೇವೂರ) ಮಾತನಾಡಿ, ಪಿಎಂಎನ್‌ಎಂ ಡೆಂಟಲ್ ಕಾಲೇಜು ಮತ್ತು ಆಸ್ಪತ್ರೆ ರಾಜ್ಯದ ಪ್ರತಿಷ್ಠಿತ ಸಂಸ್ಥೆ ಎನ್ನುವ ಗೌರವಕ್ಕೆ ಪಾತ್ರವಾಗಿದೆ. ಬಿ.ವಿ.ವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಡೆಂಟಲ್ ಕಾಲೇಜು ಮತ್ತು ಆಸ್ಪತ್ರೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲು ಅಗತ್ಯ ಸೌಲಭ್ಯ ಒದಗಿಸಿದ್ದಾರೆ. ಕಾರ್ಯಾಗಾರದಲ್ಲಿನ ವಿಷಯ ಪರಿಣತರ ಚರ್ಚೆ ಮತ್ತು ಸಂವಾದಗಳಿಂದ ಹೊಸ ಅವಿಷ್ಕಾರಗಳು ದಂತವೈದ್ಯಕೀಯ ಕ್ಷೇತ್ರಕ್ಕೆ ಲಭ್ಯವಾಗಲಿ ಎಂದರು. ಡೆಂಟಲ್ ಕಾಲೇಜ್ ಪ್ರಾಚಾರ್ಯ ಡಾ.ರವಿರಾಜ ದೇಸಾಯಿ ಮಾತನಾಡಿ, ದಂತ ವೈದ್ಯರಲ್ಲಿ ದಂತ ವಿಜ್ಞಾನದ ಹೊಸ ಅವಿಷ್ಕಾರಗಳ ಕುರಿತು ಚರ್ಚೆ ಮತ್ತು ಸಂವಾದ ನಡೆಸಲು ಕಾರ್ಯಾಗಾರ ಉಪಯುಕ್ತವಾಗಿವೆ. ವಿಶೇಷವಾಗಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮತ್ತು ಯುವ ವೈದ್ಯರಿಗೆ ಪ್ರಯೋಜನವಾಗಲಿದೆ ಎಂದು ಹೇಳಿದರು.ಇದೇ ವೇಳೆ ಭಾರತೀಯ ಬಾಯಿ ಮತ್ತು ಮುಖದ ಶಸ್ತ್ರಚಿಕಿತ್ಸಾ ತಜ್ಞರ ಸಂಘದ ಕರ್ನಾಟಕ ಶಾಖೆಯ ವಿದ್ಯುನ್ಮಾನ ವಾರ್ತಾ ಪತ್ರಿಕೆಯನ್ನು (ಇ-ನ್ಯೂಸ್ ಪತ್ರಿಕೆ) ಬಿಡುಗಡೆ ಮಾಡಲಾಯಿತು. ಪತ್ರಿಕೆ ಕುರಿತು ಸಂಪಾದಕಿ ಡಾ.ಮಮತಾ ಪ್ರಾಸ್ತಾವಿಕ ಮಾತನ್ನಾಡಿದರು.
ಸಮಾರಂಭದಲ್ಲಿ ಬಾಯಿ ಮತ್ತು ಮುಖದ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥೆ ಡಾ.ಸುಮಾ ಸರಾಫ ಅತಿಥಿಗಳನ್ನು ಸ್ವಾಗತಿಸಿ ಕಾರ್ಯಾಗಾರದ ಬಗ್ಗೆ ಪ್ರಾಸ್ತಾವಿಕ ಮಾತನಾಡಿದರು. ಡಾ.ಆಶಾ ಬಡದೇಸಾಯಿ, ಡಾ.ಸೌಮ್ಯ ಸೂಳಿಭಾವಿ ಮತ್ತು ಡಾ.ಸೌಮ್ಯ ದೇಸಾಯಿ ಪರಿಚಯಿಸಿದರು. ಡಾ.ಗಿರೀಶ ಚೌರ ವಂದಿಸಿದರು. ಡಾ.ಶ್ರದ್ಧಾ ಮತ್ತು ಡಾ.ಶ್ರೇಯಾ ನಿರೂಪಿಸಿದರು.ಬಾಯಿ ಮತ್ತು ಮುಖದ ಶಸ್ತ್ರಚಿಕಿತ್ಸಾ ತಜ್ಞ ಡಾ.ಸತ್ಯಜೀತ ದಂಡಗಿ ಮತ್ತು ಡಾ.ಮಮತಾ ಅವರಿಂದ ವಿಶೇಷ ಉಪನ್ಯಾಸ ನಡೆಯಿತು. ವಿವಿಧ ದಂತ ವೈದ್ಯಕೀಯ ಕಾಲೇಜುಗಳ ವಿಷಯ ಪರಿಣಿತರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು. ಕಾರ್ಯಾಗಾರದಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಮತ್ತು ನೆರೆಯ ರಾಜ್ಯಗಳಿಂದ ಐವತ್ತಕ್ಕೂ ಹೆಚ್ಚು ದಂತವೈದ್ಯರು ಮತ್ತು ದಂತ ವೈದ್ಯಕೀಯ ವಿದ್ಯಾರ್ಥಿಗಳು ಶಿಬಿರಾರ್ಥಿಗಳಾಗಿ ಪಾಲ್ಗೊಂಡಿದ್ದರು.
ಬಾಯಿ ಮತ್ತು ಮುಖದ ಶಸ್ತ್ರಚಿಕಿತ್ಸಾ ವಿಭಾಗದ ವೈದ್ಯರಾದ ಡಾ.ಭೀಮಪ್ಪ, ಡಾ.ಗಂಗಾಧರ, ಡಾ.ಪಾರ್ವತಿ, ಡಾ.ವಿಶ್ವನಾಥ, ಮಹಾವಿದ್ಯಾಲಯದ ಎಲ್ಲ ವಿಭಾಗಗಳ ಮುಖ್ಯಸ್ಥರು, ವೈದ್ಯರು, ವಿದ್ಯಾರ್ಥಿಗಳು ಮತ್ತು ರಾಜ್ಯದ ಹಾಗೂ ನೆರೆಯ ರಾಜ್ಯಗಳಿಂದ ಆಗಮಿಸಿದ್ದ ಶಿಬಿರಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.