ಸಾರಾಂಶ
ಕನ್ನಡಪ್ರಭ ವಾರ್ತೆ,ತುಮಕೂರು
ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಅತ್ಯುತ್ತಮ ತರಬೇತಿ ಅಗತ್ಯವಾಗಿದೆ ಎಂದು ಸಿದ್ದಗಂಗಾ ಮಠದ ಎಸ್.ಎಸ್.ಇ.ಎಸ್. ಕಾರ್ಯದರ್ಶಿ ಟಿ.ಕೆ. ನಂಜುಂಡಪ್ಪ ಹೇಳಿದರು.ನಗರದ ಶ್ರೀ ಸಿದ್ದಗಂಗಾ ಮಹಿಳಾ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಶ್ರೀ ಸಿದ್ದಗಂಗಾ ಮಹಿಳಾ ಪದವಿ ಪೂರ್ವ ಕಾಲೇಜು, ಸಿದ್ದಗಂಗಾ ಪದವಿ ಪೂರ್ವ ಕಾಲೇಜು(ಬಾಲಕರ), ಪಿ.ಬಿ. ರಸ್ತೆಯ ಸಿದ್ದಗಂಗಾ ಪದವಿ ಪೂರ್ವ ಕಾಲೇಜು ಹಾಗೂ ಬೆಂಗಳೂರಿನ ನಾಗಾರ್ಜುನ ಎಜುಕೇರ್ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ನೀಟ್, ಜೆಇಇ ಹಾಗೂ ಕೆ.ಸೆಟ್ ತರಬೇತಿ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ಪಿಯುಸಿ ಬಹು ಮುಖ್ಯವಾದ ಘಟ್ಟ. ಈ ಹಂತದಲ್ಲಿ ವಿದ್ಯಾರ್ಥಿಗಳು ತಮ್ಮ ಮುಂದಿನ ಶೈಕ್ಷಣಿಕ ಗುರಿಯನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಹಾಗಾಗಿ ವಿದ್ಯಾರ್ಥಿಗಳಿಗೆ ಪಿಯುಸಿ ಬಳಿಕ ವೃತ್ತಿಪರ ಕೋರ್ಸ್ಗಳನ್ನು ಆಯ್ಕೆ ಮಾಡಿಕೊಳ್ಳಲು ಸುಲಭವಾಗಲಿ ಎಂಬ ಉದ್ದೇಶದಿಂದ ಬೆಂಗಳೂರಿನ ನಾಗಾರ್ಜುನ ಎಜುಕೇರ್ ಸಂಸ್ಥೆಯ ಸಹಯೋಗದಲ್ಲಿ ನೀಟ್, ಜೆಇಇ ಹಾಗೂ ಕೆ-ಸೆಟ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸೂಕ್ತ ತರಬೇತಿಯನ್ನು ನೀಡಲು ಮುಂದಾಗಿದ್ದೇವೆ ಎಂದರು.ನಮ್ಮ ದೇಶದಲ್ಲಿ ಪದವೀಧರರು, ಪದವಿ ಪೂರ್ವ, ಸ್ನಾತಕೋತ್ತರ ಪದವೀಧರರ, ತಾಂತ್ರಿಕ ಶಿಕ್ಷಣವಂತರು ಬಹಳಷ್ಟು ಮಂದಿ ಇದ್ದಾರೆ. ಇವರೆಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಇಂತಹ ತರಬೇತಿಗಳನ್ನು ಪಡೆದು ಬರೆದಿದ್ದಾರೆ. ಹಾಗಾಗಿ ನಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ಸದುದ್ದೇಶದಿಂದ ಗುಣಮಟ್ಟದ ತರಬೇತಿ ಕೋರ್ಸ್ ನೀಡಲಾಗುತ್ತಿದೆ ಎಂದರು.
ವಿದ್ಯಾರ್ಥಿಗಳು ಎಷ್ಟು ಪರಿಶ್ರಮದ ಹಾಕಿ ಕಲಿಯುತ್ತೀರೋ ಅಷ್ಟೇ ಉತ್ತಮ ಫಲಿತಾಂಶ ಬರುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಸಹ ಶ್ರದ್ಧೆ, ಪರಿಶ್ರಮದಿಂದ ತರಬೇತಿಯನ್ನು ಪಡೆದು ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಬೇಕು ಎಂದು ಅವರು ಸಲಹೆ ನೀಡಿದರು.ನಾಗಾರ್ಜುನ ಎಜುಕೇರ್ ನಿರ್ದೇಶಕರಾದ ಮನೋಹರ್ ನಾರೋಜಿ ಮಾತನಾಡಿ, ಕಳೆದ ಎರಡೂವರೆ ತಿಂಗಳಿಂದ ನಮ್ಮ ಸಂಸ್ಥೆ ವತಿಯಿಂದ ನೀಟ್, ಜೆಇಇ ಕೋರ್ಸ್ ಪ್ರಾರಂಭಿಸುವ ಸಂಬಂಧ ಸಾಕಷ್ಟು ಚರ್ಚೆ ಮಾಡಿ ಇಂದು ತರಗತಿ ಉದ್ಘಾಟನೆಗೊಂಡಿದೆ ಎಂದು ಅವರು ಹೇಳಿದರು.
ಶ್ರೀ ಸಿದ್ದಗಂಗಾ ಶಿಕ್ಷಣ ಸಂಸ್ಥೆಯ ಪ.ಪೂ. ಕಾಲೇಜುಗಳ ಸಂಯೋಜನಾಧಿಕಾರಿ ಪ್ರೊ. ರೇಣುಕಪ್ಪ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳನ್ನು ತಯಾರಿ ಮಾಡುವ ಈ ತರಬೇತಿ ಒಂದು ಮೈಲಿಗಲ್ಲಾಗಿದೆ ಎಂದು ಅವರು ಹೇಳಿದರು.ನಾಗಾರ್ಜುನ ಎಜುಕೇರ್ ಸಂಸ್ಥೆ ಬೆಂಗಳೂರಿನಲ್ಲಿ ನೀಟ್, ಜೆಇಇ ಮತ್ತು ಕೆ-ಸೆಟ್ ಅತ್ಯುತ್ತಮ ತರಬೇತಿ ನೀಡಿ ಉತ್ತಮ ಫಲಿತಾಂಶ ತಂದು ಕೊಡುತ್ತಿದೆ. ಹಾಗಾಗಿ ನಮ್ಮ ಕಾಲೇಜಿನ ಮಕ್ಕಳಿಗೂ ಇದರ ಪ್ರಯೋಜನ ದೊರೆಯಲಿ ಎಂಬ ಉದ್ದೇಶದಿಂದ ಈ ತರಬೇತಿಯನ್ನು ಆರಂಭಿಸಲಾಗುತ್ತಿದೆ ಎಂದರು.
ವಿದ್ಯಾರ್ಥಿಗಳು ಯಾವುದೇ ನೆಪ ಹೇಳದೆ, ಬೆಳಿಗ್ಗೆಯೇ ಬೇಗ ಎದ್ದು ಸರಿಯಾದ ಸಮಯಕ್ಕೆ ತರಗತಿಗಳಿಗೆ ಹಾಜರಾಗಬೇಕು ಎಂದು ಅವರು ಸಲಹೆ ನೀಡಿದರು.ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಎಸ್‌ಎಸ್.ಇ.ಎಸ್. ಕಾರ್ಯನಿರ್ವಾಹಕ ನಿರ್ದೇಶಕರಾದ ಜಯವಿಭವಸ್ವಾಮಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ವಿಫುಲವಾದ ಅವಕಾಶಗಳಿವೆ. ಈ ಅವಕಾಶ ಗ್ರಾಮೀಣ ಮಕ್ಕಳಿಗೂ ಸಿಗಲಿ ಎಂಬ ಉದ್ದೇಶದಿಂದ ಈ ತರಬೇತಿಯ ಕೋರ್ಸ್ಗಳನ್ನು ಆರಂಭಿಸಲಾಗಿದೆ ಎಂದರು.
ಸಮಾರಂಭದಲ್ಲಿ ಸಿದ್ದಗಂಗಾ ಮಠದ ಆಡಳಿತಾಧಿಕಾರಿ ವಿಶ್ವನಾಥಯ್ಯ, ಜಂಟಿ ಕಾರ್ಯದರ್ಶಿ ಡಾ. ಶಿವಕುಮಾರಯ್ಯ, ನಾಗಾರ್ಜುನ ಎಜುಕೇರ್ ಸಂಸ್ಥೆಯ ಅಕಾಡೆಮಿಕ್ ಕೋ ಆರ್ಡಿನೇಟರ್ ರಾಘವೇಂದ್ರ, ಪ್ರಾಂಶುಪಾಲರಾದ ಹೆಚ್.ಎಸ್. ರತ್ನಕಲಾ, ಸಿದ್ದಗಂಗಾ ಮಹಿಳಾ ಪ.ಪೂ. ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್ ಸೇರಿದಂತೆ ಸಿದ್ದಗಂಗಾ ಪ.ಪೂ. ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.