ಸಾವಯವ ಹಾಗೂ ನೈಸರ್ಗಿಕ ಕೃಷಿಯನ್ನು ಹಾಗೂ ಅದಕ್ಕೆ ಪೂರಕವಾದ ದನ, ಕುರಿ, ಮೇಕೆ, ಮೀನು, ಜೇನು, ಹಸು ಸಾಕಾಣಿಕೆಯೊಂದಿಗೆ ಕೃಷಿಯನ್ನು ಸಹಾ ಉದ್ಯಮ ಶೀಲತೆಯನ್ನಾಗಿ ಮಾಡಬಹುದಾಗಿದೆ ಹಾಗೂ ಬ್ರೀಡಿಂಗ್ ಫಾರಂನ ಮೇಲೆ ಸೌರ ವಿದ್ಯುತ್ ಘಟಕ ಸ್ಥಾಪಿಸಬಹುದು

ಕನ್ನಡಪ್ರಭ ವಾರ್ತೆ ಚಿಂತಾಮಣಿ

ಅವಿಭಜಿತ ಕೋಲಾರ ಜಿಲ್ಲೆಯ ಬಹುತೇಕ ಕುಟುಂಬಗಳ ಆಧಾರವೆನಿಸಿಕೊಂಡಿರುವ ಹೈನುಗಾರಿಕೆಗೆ ಸಂಬಂಧಿಸಿದಂತೆ ರೈತರಿಗೆ ಮಾಹಿತಿ ಹಾಗೂ ಅರಿವು ಮೂಡಿಸಲು ಪಶುಸಖಿಯರಿಗೆ ಸೂಕ್ತ ತರಬೇತಿ ನೀಡಿ ಸಜ್ಜುಗೊಳಿಸಲಾಗುತ್ತಿದೆ ಎಂದು ಪಶುವೈದ್ಯಾಧಿಕಾರಿ ಡಾ.ಪ್ರಿಯಾಂಕ ತಿಳಿಸಿದ್ದಾರೆ.

ಕೃಷಿ ವಿಜ್ಞಾನ ಕೇಂದ್ರ ಹಾಗೂ ಪಶುಸಂಗೋಪನಾ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ೩೫ ಪಂಚಾಯಿತಿಗಳಿಂದ ೩೫ ಮಂದಿ ಮಹಿಳೆಯರೊಂದಿಗೆ ಚಿಂತಾಮಣಿ ತಾಲೂಕಿನ ಪ್ರಗತಿಪರ ರೈತ ಕುರುಟಹಳ್ಳಿ ರಾಧಾಕೃಷ್ಣರ ಜಮೀನಿಗೆ ಅವರು ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು.

ನೈಸರ್ಗಿಕ ಕೃಷಿ ಜತೆ ಉಪ ಕಸುಬು

ಕುರುಟಹಳ್ಳಿ ರಾಧಕೃಷ್ಣರವರು ಕೈಗೊಂಡಿರುವ ಸಾವಯವ ಹಾಗೂ ನೈಸರ್ಗಿಕ ಕೃಷಿಯನ್ನು ಹಾಗೂ ಅದಕ್ಕೆ ಪೂರಕವಾದ ದನ, ಕುರಿ, ಮೇಕೆ, ಮೀನು, ಜೇನು, ಹಸು ಸಾಕಾಣಿಕೆಯೊಂದಿಗೆ ಕೃಷಿಯನ್ನು ಸಹಾ ಉದ್ಯಮ ಶೀಲತೆಯನ್ನಾಗಿ ಮಾಡಬಹುದಾಗಿದೆ ಹಾಗೂ ಬ್ರೀಡಿಂಗ್ ಫಾರಂನ ಮೇಲೆ ಸೌರ ವಿದ್ಯುತ್ ಘಟಕವನ್ನು ಸ್ಥಾಪನೆ ಮಾಡುವ ಕುರಿತು ಮಹಿಳೆಯರಿಗೆ ಮನದಟ್ಟು ಮಾಡಿಕೊಟ್ಟರು.

ಹೈನುಗಾರರಿಗೆ ಆರ್ಥಿಕ ಸಂಕಷ್ಟವನ್ನು ತಂದೊಡ್ಡುವ ಕಾಲುಬಾಯಿ ರೋಗಕ್ಕೆ ಸಂಬಂಧಿಸಿದಂತೆ ಮಾಹಿತಿಯನ್ನು ನೀಡಿ ಯಾವ ಔಷದಿ, ಯಾವ ಋತುಮಾನದಲ್ಲಿ ಯಾವ ಮೇವು ನೀಡಬೇಕು, ಗುಣಮಟ್ಟದ ಹಾಲು ಉತ್ಪಾದನೆಯ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಡಾ.ಪ್ರಿಯಾಂಕ ವಿವರಿಸಿದರು.

ಎರೆಹುಳು ಘಟಕ ಸ್ಥಾಪಿಸಿ

ಕುರುಟಹಳ್ಳಿ ರಾಧಾಕೃಷ್ಣ ಮಾತನಾಡಿ ಅಜೋಲಾ, ಎರೆಹುಳುಗೊಬ್ಬರ, ಎರೆಜಲ, ಕೃಷಿ ಹೊಂಡದಲ್ಲಿ ಮೀನು ಸಾಕಾಣಿಕೆ, ಹಸುಗಳಿಗೆ ಬೇಕಾದ ನೇಪರ್ ಹುಲ್ಲು ಕ್ಯಾಲಿಯಂನಿಂದ ಕೂಡಿದ್ದು ಹಾಲು ಉತ್ಪಾದನೆಯನ್ನು ಹೆಚ್ಚಿಸಲು ಸಹಕಾರಿ. ಜಮೀನು ಕಡಿಮೆ ಇದ್ದರೆ ನಾಟಿಕೋಳಿ, ಎರೆಹುಳು ಘಟಕವನ್ನು ಸ್ಥಾಪಿಸುವುದರ ಮೂಲಕ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಿಕೊಳ್ಳುವುದರ ಜೊತೆಗೆ ಕೃಷಿ ನಿರ್ವಹಣೆಯ ವೆಚ್ಚವು ಸಹಾ ಕಡಿಮೆಯಾಗಲಿದೆ. ನಾಟಿ ಹಸುವಿನ ಗಂಜಲದಿಂದ ತಯಾರಿಸುವ ಜೀವಾಮೃತ ಔಷಧಿಯಾಗಿ ಹಾಗೂ ಸಸ್ಯಗಳ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು.